ವಿಜಯನಗರ(ಹೊಸಪೇಟೆ): ರಾಜ್ಯದ 31ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿರುವ ನೂತನ ವಿಜಯನಗರ ಜಿಲ್ಲೆಯ ಉದ್ಘಾಟನಾ ಕಾರ್ಯಕ್ರಮ ಹಾಗೂ ವಿಜಯನಗರ ಉತ್ಸವಕ್ಕೆ ಭಾನುವಾರ ಸಂಜೆ ಸಂಭ್ರಮದ ತೆರೆ ಬಿದ್ದಿತು. ಐತಿಹಾಸಿಕ ನಗರಿಯ ಗತ ವೈಭವದ ಸ್ಮರಣೆಯೊಂದಿಗೆ ಸಮಾರೋಪ ಸಮಾರಂಭ ಜರುಗಿತು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ,ಪರಿಸರ,ಜೀವಿಶಾಸ್ತ್ರ ಹಾಗೂ ಅವಳಿ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಮಾತನಾಡಿ ರಾಜಕೀಯ ಅಧಿಕಾರ,ಸಂಪತ್ತು ಶಾಶ್ವತವಲ್ಲ.ಇದೇ ಮೈದಾನದಲ್ಲಿ ಇಂತಹದ್ದೇ ಕಾರ್ಯಕ್ರಮವೊಂದರಲ್ಲಿ ಜನರಿಗೆ ನೀಡಿದ ಭರವಸೆಗಳಲ್ಲಿ ಪ್ರಮುಖವಾದ ಜಿಲ್ಲಾ ರಚನೆಯನ್ನು ಇಂದು ಸಾಕಾರಗೊಳಿಸಿದ್ದೇನೆ.ಜನರು ನೀಡಿದ ಬಲವೇ ಈ ಮಹತ್ವದ ಸಾಧನೆಗೆ ಕಾರಣ.ಜನರ ಮನದಲ್ಲಿ ಈ ಐತಿಹಾಸಿಕ ಕಾರ್ಯಕ್ರಮ ಚಿರಕಾಲ ಉಳಿಯಲಿದೆ ಎಂದರು.
ವಿಜಯನಗರ ಜಿಲ್ಲೆಯ ರಚನೆಗಾಗಿ ಎರಡು ದಶಕಗಳ ಕಾಲ ನಡೆಸಿದ ಹೋರಾಟ, ಹೋರಾಟಗಾರರ ಪರಿಶ್ರಮವನ್ನು ಇದೇ ಸಂದರ್ಭದಲ್ಲಿ ಅವರು ಸ್ಮರಿಸಿದರು. ನನ್ನ ಅವಧಿಯಲ್ಲಿ ಜಿಲ್ಲೆ ರಚನೆಯಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದರು.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಮಾತನಾಡಿ,ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿ ಬಹು ವರ್ಷಗಳ ಕನಸು ನನಸು ಮಾಡಿದ ಶ್ರೇಯಸ್ಸು ಇಲ್ಲಿನ ಹೋರಾಟಗಾರರು ಹಾಗೂ ಸಚಿವರಾದ ಆನಂದಸಿಂಗ್ ಅವರಿಗೆ ಸಲ್ಲುತ್ತದೆ. ಜಿಲ್ಲೆಯ ರಚನೆಗಾಗಿಯೇ ಆನಂದಸಿಂಗ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರ್ಕಾರಕ್ಕೆ ರಚನೆಗೆ ಬೆಂಬಲಿಸಿ ವಿಜಯನಗರ ಜಿಲ್ಲೆ ರಚನೆಯಾಗಬೇಕೆಂಬ ಜನರ ಬೇಡಿಕೆ ಈಡೇರಿಸಿದ್ದಾರೆ ಎಂದರು. ಆನಂದಸಿಂಗ್ ಅವರ ಜೊತೆಯಲ್ಲಿ ಸರ್ಕಾರವಿದೆ ಎಂದರು.
ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ,40 ವರ್ಷಗಳ ಹಿಂದೆ ಕುರುಗೋಡು,ಕಂಪ್ಲಿಯಲ್ಲಿ ಪೆÇಲೀಸ್ ಸಬ್ ಇನ್ಸ್‍ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದೇನೆ.ಅಂದು ನಾವ್ಯಾರು ಕೂಡ ವಿಜಯನಗರ ಜಿಲ್ಲೆ ರಚನೆಯನ್ನು ಊಹಿಸಿರಲೂ ಇಲ್ಲ. ಜಿಲ್ಲಾ ರಚನೆಗಾಗಿಯೇ ಸಚಿವ ಆನಂದಸಿಂಗ್ ಅವರು ಯಾವುದೇ ಮೀನಮೇಷ ಎಣಿಸದೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ,ಸರ್ಕಾರದಲ್ಲಿ ಒತ್ತಡ ಸೃಷ್ಟಿ ಮಾಡಿದ್ದರು ಎಂದರು.
ವಿಜಯನಗರ ಅರಸರ ಕಾಲದಲ್ಲಿ ಮುತ್ತು ರತ್ನಗಳನ್ನು ಬೀದಿಗಳಲ್ಲಿ ಮಾರಾಟ ಮಾಡಿದ ಹಿರಿಮೆ,ನೀರಾವರಿ ಸೌಕರ್ಯಗಳು ಹೊಂದಿರುವ ಈ ಜಿಲ್ಲೆ ಸಾಕಷ್ಟು ಸಂಪದ್ಭರಿತವಾಗಿ ಅಭಿವೃದ್ಧಿ ಹೊಂದಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲಾ ಸಹಕಾರ ನೀಡಲಿದ್ದಾರೆ ಎಂದರು.
ಚಲನಚಿತ್ರ ನಟ ಅಜಯರಾವ್ ಮಾತನಾಡಿ, ಹೊಸಪೇಟೆಯವನಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ; ವಿಜಯನಗರ ಜಿಲ್ಲೆಯ ರಚನೆಯ ಗತವೈಭವ ವೈಭವ ಮತ್ತೇ ಮರುಕಳಿಸಲಿ. ಇತಿಹಾಸದಿಂದ ಪ್ರೇರಣೆ ಪಡೆಯಬೇಕು.ನಾಯಕನ ನಡೆಗಳು ಇತಿಹಾಸ ಸೃಷ್ಟಿಸುತ್ತ ಹೋಗುತ್ತವೆ.ಹೊಸ ಇತಿಹಾಸದ ಮೊದಲ ಪುಟಗಳು ಇದೀಗ ತೆರೆದಿವೆ;ಪುಸ್ತಕದ ಮುಂದಿನ ಭಾಗಗಳು ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಸಾಧನೆ ಮಾಡಲು ಜನರ ಸಹಕಾರ ಅಗತ್ಯ ಎಂದರು.
ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದ ಮಹಾಸ್ವಾಮೀಜಿಯವರು ವಿಡಿಯೋ ಸಂದೇಶದ ಮೂಲಕ ನೂತನ ಜಿಲ್ಲೆಗೆ ಶುಭ ಹಾರೈಸಿದರು.ವಿಜಯನಗರ ಜಿಲ್ಲೆಯ ಚರಿತ್ರೆ,ಸಾಂಸ್ಕøತಿಕ ಹಿರಿಮೆ ಸಾರುವ ವಿಡಿಯೋ ಪ್ರದರ್ಶಿಸಲಾಯಿತು.
ಕೋಗಳಿಯ ಸರ್ದಾರ್ ಸೇವಾಲಾಲ್ ಮಹಾರಾಜ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.
ಇದೇ ಸಮಾರಂಭದಲ್ಲಿ ನೂತನ ಜಿಲ್ಲೆಯ ಪ್ರವಾಸೋದ್ಯಮ ಲಾಂಛನವನ್ನು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ರೇಷ್ಮೆ ಯುವಸಬಲೀಕರಣ ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು.ಸಿದ್ಧಲಿಂಗಸ್ವಾಮಿ,ವಿಜಯನಗರ ಜಿಲ್ಲಾ ಹೋರಾಟಗಾರ ಮಲ್ಹಾರಿ ದಿಕ್ಷೀತ್, ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ,ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಅರುಣಕುಮಾರ್, ಹುಡಾ ಅಧ್ಯಕ್ಷ ಅಶೋಕ ಜೀರೆ ಇತರರು ಇದ್ದರು.
ಎತ್ತಿನಬಂಡಿ ಜಾಥಾ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತ ಪಡಿಸಿದರು.ಉಪವಿಭಾಗಾಧಿಕಾರಿ ಸಿದ್ಧರಾಮೇಶ್ವರ ಸ್ವಾಗತಿಸಿದರು.