ರಾಜ್ಯದ 28 ಲೋಕಸಭಾ ಸ್ಥಾನಗಳಲ್ಲೂ ಗೆಲುವು: ಆರ್.ಅಶೋಕ್

ಬೆಂಗಳೂರು: ರಾಜ್ಯದ ಎಲ್ಲ 28 ಲೋಕಸಭಾ ಸ್ಥಾನಗಳಲ್ಲೂ ಬಿಜೆಪಿ ಗೆಲುವು ಸಾಧಿಸಲು ಶ್ರಮಿಸುವುದಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಮಾಜಿ ಸಚಿವ ಆರ್.ಅಶೋಕ್ ಅವರು ತಿಳಿಸಿದರು.

 

ಇಂದು ಸಂಜೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ನಮಗಿಂದು ಮೋದಿಜೀ, ನಡ್ಡಾಜೀ, ಅಮಿತ್ ಶಾಜೀ ಅವರಂಥ ಪ್ರಬಲ ನಾಯಕತ್ವ ಸಿಕ್ಕಿದೆ. ಕಳೆದ 6 ತಿಂಗಳ ಕಾಂಗ್ರೆಸ್ ದುರಾಡಳಿತ, ಭ್ರಷ್ಟಾಚಾರ, ಸ್ವತಃ ಮುಖ್ಯಮಂತ್ರಿಗಳ ಮಗ ವರ್ಗಾವಣೆ ದಂಧೆಯಲ್ಲಿ ಪಾಲ್ಗೊಂಡಿದ್ದನ್ನು ಕಂಡು ಜನರೂ ಬೇಸತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ, ಕನಕಪುರ ಸೇರಿ ರಾಜ್ಯದ 28ಕ್ಕೆ 28 ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ. ಕಳೆದ ಬಾರಿಯ 25 ಸ್ಥಾನಗಳ ಬದಲು 28 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ವಿಧಾನಸಭೆಯಲ್ಲಿ 66 ಶಾಸಕರು ಕೂಡ ವಿರೋಧ ಪಕ್ಷದ ನಾಯಕರಿಲ್ಲದೆ ಸಮರ್ಥವಾಗಿ ವಿಪಕ್ಷ ಕೆಲಸ ಮಾಡಿದ್ದೇವೆ. ಪ್ರಬಲವಾದ ಹೋರಾಟವನ್ನು ಬಿಜೆಪಿ ಮಾಡಿದೆ ಎಂದರು. ಎಲ್ಲ ಹಿರಿಯರ ಕಿರಿಯರ ಸಹಕಾರ, ವಿಶ್ವಾಸದೊಂದಿಗೆ ಹೋರಾಟ ರೂಪಿಸುವುದಾಗಿ ತಿಳಿಸಿದರು.

 

ಕಾಂಗ್ರೆಸ್ ದುರಾಡಳಿತದ ವಿರುದ್ಧ ನಿರಂತರ ಹೋರಾಟ ಮಾಡುವುದಾಗಿ ಅವರು ಪ್ರಕಟಿಸಿದರು. ಪಕ್ಷ ನನಗೆ ಸ್ಥಾನ ಕೊಟ್ಟಿದೆ. ಎಲ್ಲ ಶಾಸಕರನ್ನು ಪ್ರೀತಿ, ವಿಶ್ವಾಸದಿಂದ ಒಯ್ಯುವುದಾಗಿ ತಿಳಿಸಿದರು. ಯಡಿಯೂರಪ್ಪನವರ ಮಾರ್ಗದರ್ಶನದಡಿ ಮೋದಿಜಿ ಅವರ ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಮಾದರಿಯಲ್ಲಿ ಮುನ್ನಡೆಯುವುದಾಗಿ ತಿಳಿಸಿದರು.

ಯಡಿಯೂರಪ್ಪ ಅವರು ವಿಪಕ್ಷ ನಾಯಕರಾಗಿ 34 ಜನ ಇದ್ದಾಗ, 79 ಜನರಿದ್ದರೂ ಕೆಲಸ ಮಾಡಿದ್ದರು. ಅವರ ಮಾರ್ಗದರ್ಶನ, ಬಸವರಾಜ ಬೊಮ್ಮಾಯಿಯವರ ಸಹಕಾರದೊಂದಿಗೆ ಮುನ್ನಡೆಯೋಣ ಎಂದು ತಿಳಿಸಿದರು. ಸೋಲಿನ ಭಯ ಬಿಟ್ಟು, ಮತ್ತೆ ಸೂರ್ಯ ಉದಯಿಸುವ ಮತ್ತು ಮತ್ತೊಮ್ಮೆ ಕಮಲ ಅರಳುವ ವಿಶ್ವಾಸದೊಂದಿಗೆ ಹಾಗೂ ಘೋಷಣೆಯ ಜೊತೆ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

 

ಲೋಕಸಭೆ, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ತರುವ ಸವಾಲು ನಮ್ಮ ಎದುರಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡೋಣ ಎಂದು ತಿಳಿಸಿದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ವಾಸ ಅನುಭವಿಸಿದ್ದನ್ನು ನೆನಪಿಸಿಕೊಂಡ ಅವರು, ಅಯೋಧ್ಯೆ ವಿಚಾರದಲ್ಲೂ ಹೋರಾಟ ಮಾಡಿದ್ದಾಗಿ ತಿಳಿಸಿದರು. 45 ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದನ್ನೂ ನೆನಪಿಸಿಕೊಂಡರು.

ಭ್ರಷ್ಟ ಕಾಂಗ್ರೆಸ್ ತೊಲಗಿಸಿ, ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಕಮಲ ಅರಳಿಸುವ ಸದುದ್ದೇಶದಿಂದ ಮುನ್ನಡೆಯುವುದಾಗಿ ತಿಳಿಸಿದರು. ಕರ್ನಾಟಕದ ಜನತೆಗೆ ನಮಸ್ಕಾರಗಳನ್ನು ತಿಳಿಸಿದ ಅವರು, ನಿಮ್ಮ ಸಹಕಾರದಲ್ಲಿ ಮತ್ತೊಮ್ಮೆ ಬಿಜೆಪಿ ಆಡಳಿತ ತರಲು ಶ್ರಮಿಸುವುದಾಗಿ ಹೇಳಿದರು.

 

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಕುಮಾರ್ ಗೌತಮ್, ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಮತ್ತು ಶಾಸಕರು ಭಾಗವಹಿಸಿದ್ದರು.

Facebook
Twitter
LinkedIn
Telegram
Email
Print
WhatsApp

Leave a Comment

Your email address will not be published. Required fields are marked *

Translate »
Scroll to Top