ಡ್ಯಾಮ್‍ನ ಕ್ರಸ್ಟ್‍ಗೇಟ್‍ಗಳ ಅಳವಡಿಕೆಗೆ ರಾಜ್ಯ ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಲು ಒತ್ತಾಯ

Kannada Nadu
ಡ್ಯಾಮ್‍ನ ಕ್ರಸ್ಟ್‍ಗೇಟ್‍ಗಳ ಅಳವಡಿಕೆಗೆ ರಾಜ್ಯ ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಲು ಒತ್ತಾಯ

ಬಳ್ಳಾರಿ : ರೈತರು ಹಾಗೂ ಜನತೆಯ ಜೀವನಾಡಿ ತುಂಗಭದ್ರ ಜಲಾಶಯಕ್ಕೆ ನೂತನ `ಕ್ರಸ್ಟ್‍ಗೇಟ್’ಗಳ ಅಳವಡಿಕೆ ಕಾಮಗಾರಿಗೆ, ರಾಜ್ಯ ಸರ್ಕಾರವು ತನ್ನ ಪಾಲಿನ ಹಣ ನೀಡದಿದ್ದರೆ, ಜೂನ್ ಒಳಗಡೆ `ಗೇಟ್‍ಗಳ’ ಅಳವಡಿಕೆ ಕಾರ್ಯ ವಿಳಂಬವಾಗಲಿದೆ ಎಂದು ತಜ್ಞರಾದ ಕನ್ನಯ್ಯನಾಯ್ಡು ಅಭಿಪ್ರಾಯಪಟ್ಟಿರುವುದರಿಂದ, ರಾಜ್ಯ ಸರ್ಕಾರವು ಈ ಕೂಡಲೇ ಬಾಕಿ ಹಣವನ್ನು ನೀಡಬೇಕು ಎಂದು ತುಂಗಭದ್ರ ರೈತ ಸಂಘ ಒತ್ತಾಯಿಸಿದೆ.
ಸಂಘದ ಅಧ್ಯಕ್ಷ ಡಾ||ಪುರುಷೋತ್ತಮಗೌಡ ದರೂರು ಅವರು, ಇಂದು ಬೆಳಿಗ್ಗೆ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗ್ಗೆ ಮೂರು ದಿನಗಳ ಹಿಂದೆ ಕನ್ನಯ್ಯನಾಯ್ಡು ಅವರು ಡ್ಯಾಂನ ವೀಕ್ಷಣೆಗೆ ಆಗಮಿಸಿದಾಗ, ಆಂಧ್ರ ಸರ್ಕಾರವು ತನ್ನ ಪಾಲಿನ ಹಣ ನೀಡಿದ್ದರೂ, ಕರ್ನಾಟಕ ಸರ್ಕಾರ ತನ್ನ ಪಾಲಿನ ಹಣ ನೀಡುತ್ತಿಲ್ಲ ಎಂದು ಹೇಳಿದ್ದರು. ಇದರಿಂದಾಗಿ ಕ್ರಸ್ಟ್‍ಗೇಟ್‍ಗಳ ಅಳವಡಿಕೆ ಕೆಲಸ ವಿಳಂಬವಾಗಲಿದೆ. ಕಾರಣ ನಮ್ಮ ಸರ್ಕಾರ ತಕ್ಷಣವೇ ಹಣ ಬಿಡುಗಡೆ ಮಾಡುವಂತೆ ಕೋರಿದರು.
ಟಿ.ಬಿ.ಡ್ಯಾಮ್ ನಿರ್ಮಿಸಿ 70 ವರ್ಷಗಳಾಗಿವೆ. ಡ್ಯಾಮ್‍ನ ಗೇಟುಗಳು ತನ್ನ ಗುಣಮಟ್ಟ ಕಳೆದುಕೊಂಡಿರುವ ಸಾಧ್ಯತೆಗಳಿರುವುದರಿಂದ, ಅವುಗಳನ್ನು ಬದಲಿಸಲು ಸರ್ಕಾರ ಮುಂದಾಗಿದೆ. ಈವರೆಗೆ 3 ಗೇಟ್‍ಗಳನ್ನು ಮಾತ್ರ ಅಳವಡಿಸಲಾಗಿದೆ. ಇದೇ ರೀತಿ ಆದರೆ ಅನಗತ್ಯ ವಿಳಂಬವಾಗಲಿದೆ. ನೂತನ ಗೇಟ್‍ಗಳ ಅಳವಡಿಕೆ ಕಾರ್ಯವು ತ್ವರಿತ ಗತಿಯಲ್ಲಿ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲಿ ಎಂದು ಗೌಡರು ಹೇಳಿದರು.
ಡ್ಯಾಂನ ಎಲ್ಲಾ `ಕ್ರಸ್ಟ್‍ಗೇಟ್’ಗಳನ್ನೂ ನಿರ್ಮಿಸಿ, ಹೊಸದಾಗಿ ಅಳವಡಿಸಲು ಗುಜರಾತ್‍ನ ಖಾಸಗಿ ಕಂಪನಿಯೊಂದಕ್ಕೆ ತುಂಗಭದ್ರ ಮಂಡಳಿಯು 54 ಕೋಟಿ ರೂ.ಗಳಿಗೆ ಟೆಂಡರ್ ನೀಡಿದೆ. ರಾಜ್ಯ ಸರ್ಕಾರವು ಶೇ.60ರಷ್ಟು ಅಂದರೆ, 32.40 ಕೋಟಿ ರೂ.ಗಳನ್ನು, ಆಂಧ್ರ ಸರ್ಕಾರವು ಶೇ.40ರಷ್ಟು ಅಂದರೆ, 21.60 ಕೋಟಿ ರೂ.ಗಳನ್ನು ನೀಡಬೇಕು. ರಾಜ್ಯ ಸರ್ಕಾರ 10 ಕೋಟಿ ರೂ.ಗಳನ್ನು, ಆಂಧ್ರ ಸರ್ಕಾರ 20 ಕೋಟಿ ರೂ.ಗಳ ಹಣವನ್ನು ನೀಡಿವೆ. ಇನ್ನೂ 24 ಕೋಟಿ ರೂ. ನೀಡಬೇಕಾಗಿದೆ. ಇತ್ತೀಚೆಗೆ ಆಂಧ್ರ ಸರ್ಕಾರವು ಟಿ.ಬಿ.ಬೋರ್ಡ್‍ನ ಅಧಿಕಾರಿಗಳು, ಸಿಬ್ಬಂದಿಯ ವೇತನ ಮತ್ತು ಖರ್ಚು ವೆಚ್ಚಗಳಿಗಾಗಿ 35 ಕೋಟಿ ರೂ.ಗಳನ್ನು ನೀಡಿದೆ ಎಂದು ವಿವರಿಸಿದರು.
ರಾಜ್ಯ ಸರ್ಕಾರವು ಇದರಲ್ಲಿ 25 ಕೋಟಿ ರೂ.ಗಳನ್ನು ತುಂಗಭದ್ರ ಮಂಡಳಿಗೆ ನೀಡಿ, 10 ಕೋಟಿ ರೂ.ಗಳನ್ನು ತನ್ನಲ್ಲಿಯೇ ಉಳಿಸಿಕೊಂಡಿದೆ. ಇದರಿಂದಾಗಿ ಬೋರ್ಡ್‍ನ ಅಧಿಕಾರಿಗಳು ವೇತನವಿಲ್ಲದೇ ಕೆಲಸ ಮಾಡಬೇಕಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದುದರಿಂದ ರಾಜ್ಯ ಸರ್ಕಾರವು ಶೀಘ್ರವೇ ತನ್ನ ಪಾಲಿನ ಹಣವನ್ನು ಬಿಡುಗಡೆ ಮಾಡಬೇಕು ಎಂದು ಪುರುಷೋತ್ತಮ ಗೌಡ ಆಗ್ರಹಪಡಿಸಿದರು.
ನೂತನ ಕ್ರಸ್ಟ್‍ಗೇಟ್‍ಗಳ ಅಳವಡಿಕೆಯ ಜೊತೆ-ಜೊತೆಯಲ್ಲಿಯೇ, `ಚೈನ್’ಗಳನ್ನೂ ಬದಲಾಯಿಸುವ ಕಾರ್ಯವೂ ನಡೆಯಬೇಕಾಗಿದೆ ಎಂದು ನುಡಿದರು. ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದಲ್ಲಿ, ವಿಳಂಬ ನೀತಿ ಅನುಸರಿಸಿದಲ್ಲಿ, ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಧುರೀಣರುಗಳಾದ, ಡಿ.ಶಿವಯ್ಯ, ಶ್ರೀಧರಗಡ್ಡೆ ವೀರನಗೌಡ, ಕೆ.ಮಲ್ಲಾರೆಡ್ಡಿ, ಕೊಂಚಿಗೇರಿ ಗೋವಿಂದಪ್ಪ, ದರೂರು ವೀರಭದ್ರನಾಯಕ್, ರಾಜೇಗೌಡ, ಎಂ.ರಾಮಾಂಜನಿ ನಾಯಕ್, ರಾಜ, ಖಾಜಾಸಾಬ್, ಸೋಮಸಮುದ್ರ ಲಿಂಗಾರೆಡ್ಡಿ, ಗಾದಿಲಿಂಗಪ್ಪ, ತಾತಪ್ಪಸ್ವಾಮಿ, ಮತ್ತಿತರರು ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";