ರಾಜಕೀಯ ಪಲ್ಲಟ: ತೀವ್ರಗೊಂಡ ರಾಜಕೀಯ ಚರ್ಚೆ…!!!

Kannada Nadu
ರಾಜಕೀಯ ಪಲ್ಲಟ: ತೀವ್ರಗೊಂಡ ರಾಜಕೀಯ ಚರ್ಚೆ…!!!

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ರಾಜಕೀಯ ಪಲ್ಲಟಗಳ ಚರ್ಚೆ ಜೋರಾಗಿದ್ದು ಮುಖ್ಯಮಂತ್ರಿ ಬದಲಾವಣೆಯಷ್ಟೇ ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳು ಹಾಗೂ ಪ್ರಮುಖ ಖಾತೆಗಳ ಪರಿಷ್ಕರಣೆಯ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ. ಇದೀಗ ಹುಟ್ಟುಹಾಕಿರುವ ಚರ್ಚೆಗಳು ಯಾವ ಸ್ವರೂಪ ಪಡೆಯಲಿವೆ ಎಂಬ ಕುತೂಹಲ ಮನೆ ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ ಆಪ್ತ ಸಚಿವರಾದ ಸತೀಶ್‌ ಜಾರಕಿಹೊಳಿ, ಕೆ.ಜೆ.ಜಾರ್ಜ್‌, ಎಚ್‌.ಸಿ.ಮಹದೇವಪ್ಪ ಅವರ ಜೊತೆ ದೆಹಲಿಗೆ ಭೇಟಿ ನೀಡಿದ್ದರು. ಅಲ್ಲಿ ಸಚಿವರೊಟ್ಟಿಗೆ ಹೈಕಮಾಂಡ್‌ ನಾಯಕರು ಮೊದಲ ಸುತ್ತಿನ ಚರ್ಚೆ ನಡೆಸಿದ್ದು, ನಂತರ ಸಿದ್ದರಾಮಯ್ಯ ಅವರೊಂದಿಗೆ ಪ್ರತ್ಯೇಕವಾಗಿ ರಹಸ್ಯ ಸಮಾಲೋಚನೆ ನಡೆಸಿದ್ದಾರೆ. ಇದು ತೀವ್ರ ಕುತೂಹಲ ಕೆರಳಿಸಿದೆ.

ದೆಹಲಿಯ ಭೇಟಿಯ ವೇಳೆ ಡಿ.ಕೆ.ಶಿವಕುಮಾರ್‌ರವರ ವರ್ತನೆಗಳ ಬಗ್ಗೆ ದೂರುಗಳ ಸುರಿಮಳೆಯೇ ಆಗಿವೆ. ಕಾಂಗ್ರೆಸ್‌‍ನ ಶಾಸಕ ರಾಜು ಕಾಗೆ ಹೇಳಿದಂತೆ ಸಚಿವರು ಮುಖ ಕೊಟ್ಟು ಮಾತನಾಡುತ್ತಿಲ್ಲ. ಶಾಸಕರನ್ನು ಹಾದಿ ಮಧ್ಯೆಯೇ ನಿಲ್ಲಿಸಿ ಮನವಿ ತೆಗೆದುಕೊಳ್ಳುತ್ತಾರೆ, ಮತ್ತಿನ್ಯಾರೊಂದಿಗೋ ಮಾತನಾಡುತ್ತಾ ಮುಂದೆ ಹೋಗುತ್ತಿರುತ್ತಾರೆ, ಶಾಸಕರು ಅವರ ಹಿಂದೆ ಓಡಿಹೋಗಬೇಕು, ಈ ರೀತಿಯ ದುಸ್ಥಿತಿ ಯಾರಿಗೂ ಬೇಡ ಎಂದು ಹೇಳಿದ್ದರು.

ರಾಜು ಕಾಗೆ ಹೆಸರು ಹೇಳದೇ ಇದ್ದರೂ ಅದು ಡಿ.ಕೆ.ಶಿವಕುಮಾರ್‌ ಕುರಿತಾದ ವ್ಯಾಖ್ಯಾನಗಳು ಕೂಡ ತೀವ್ರಗೊಂಡಿದೆ. ಬಹುತೇಕ ಶಾಸಕರು ಒಳಗೊಳಗೇ ಕುದಿಯುತ್ತಿದ್ದು, ಬಹಿರಂಗ ಟೀಕೆ ಮಾಡಲಾಗದೆ, ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.

ಶಾಸಕಾಂಗ ಸಭೆಯಲ್ಲಿ ಡಿ.ಕೆ.ಶಿವಕುಮಾರ್‌ರವರನ್ನು ವೇದಿಕೆಯಲ್ಲಿ ಕೂರಿಸಿ ದೂರು ಕೇಳಿದರೆ ಯಾರು ತಾನೇ ಮಾತನಾಡಲು ಸಾಧ್ಯ. ಅದರ ಬದಲು ಶಾಸಕರಿಗೆ ಸಮಯ ಕೊಟ್ಟು ವೈಯಕ್ತಿಕವಾಗಿ ಅಭಿಪ್ರಾಯ ಆಲಿಸಿದರೆ ಸತ್ಯಾಂಶ ತಿಳಿಯಲಿದೆ. ಇದು ಮುಂದಿನ ದಿನದಲ್ಲಿ ಪಕ್ಷ ಸಂಘಟನೆಗೂ ಸಹಾಯವಾಗಲಿದೆ. ಇಲ್ಲವಾದರೆ ಸ್ಥಳೀಯ ಸಂಸ್ಥೆಗಳಲ್ಲೇ ಕಾಂಗ್ರೆಸ್‌‍ ಮುಗ್ಗರಿಸಲಿದೆ ಎಂಬ ಅಭಿಪ್ರಾಯವನ್ನು ದೆಹಲಿಗೆ ತಲುಪಿಸಲಾಗಿದೆ.

ಡಿ.ಕೆ.ಶಿವಕುಮಾರ್‌ರವರ ಬಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಉಪಮುಖ್ಯಮಂತ್ರಿ ಹುದ್ದೆ, ಬೆಂಗಳೂರು ನಗರಾಭಿವೃದ್ಧಿ ಮತ್ತು ಜಲಸಂಪನೂಲಗಳಂತಹ ಪ್ರಮುಖ ಖಾತೆಗಳಿವೆ. ಇವುಗಳು ಜನಸಂಪರ್ಕ ಇರುವ ಹಾಗೂ ಹೆಚ್ಚಿನ ಅನುದಾನ ಪಡೆಯುವ ಸಚಿವಾಲಯಗಳಾಗಿವೆ.
ಡಿ.ಕೆ.ಶಿವಕುಮಾರ್‌ ಹಿಂದಿನ ಸರ್ಕಾರದ ಬಾಕಿ ಬಿಲ್‌ನ ನೆಪದಲ್ಲಿ ಹೊಸ ಯೋಜನೆಗಳಿಗೆ ಅನುಮೋದನೆ ನೀಡುತ್ತಿಲ್ಲ. ಶಾಸಕ ಎಚ್‌.ಸಿ.ಬಾಲಕೃಷ್ಣ ಹೇಳಿದಂತೆ ಡಿ.ಕೆ.ಶಿವಕುಮಾರ್‌ರವರಿಗೆ ಜೈ ಎನ್ನುವವರಿಗೆ ಅನುದಾನ ದೊರೆಯುತ್ತಿದೆ. ಉಳಿದವರನ್ನು ಉದ್ದೇಶಪೂರಕವಾಗಿ ಕಡೆಗಣಿಸಲಾಗುತ್ತಿದೆ ಎಂದು ದೂರಲಾಗಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ವಿರುದ್ಧವೂ ಆಕ್ಷೇಪಗಳು ಕೇಳಿಬಂದಿವೆ. ಈ ಹಿಂದೆ ಕೆ.ಸಿ.ವೇಣುಗೋಪಾಲ್‌ ಬೆಂಗಳೂರಿಗೆ ಬಂದಾಗ ನಾಯಕರುಗಳ ಜೊತೆ ವೈಯಕ್ತಿಕ ಸಮಾಲೋಚನೆ ನಡೆಸುತ್ತಿದ್ದರು. ದೂರು ದುಮಾನಗಳನ್ನು ಕೇಳಿ ಬಗೆಹರಿಸುತ್ತಿದ್ದರು. ಸುರ್ಜೇವಾಲ ಕೇವಲ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯನವರನ್ನು ಮಾತ್ರ ಕೇಂದ್ರೀಕರಿಸಿ ಸಭೆ ನಡೆಸುತ್ತಿದ್ದಾರೆ. ಶಾಸಕರುಗಳ ವೈಯಕ್ತಿಕ ಭೇಟಿಗೆ ಸಮಯ ನೀಡುತ್ತಿಲ್ಲ ಎಂಬ ಆರೋಪಗಳಿವೆ.

ಡಿ.ಕೆ.ಶಿವಕುಮಾರ್‌ ಉಪಮುಖ್ಯಮಂತ್ರಿಯಾದ ಬಳಿಕ ರಾಜ್ಯದಲ್ಲಿ ಶಕ್ತಿ ಕೇಂದ್ರಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಜಾತಿವಾರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಲೋಕಸಭೆ ಚುನಾವಣೆಯ ವೇಳೆ ಬೇಡಿಕೆಗಳಿದ್ದವು. ಈಗ ಅದೇ ಬೇಡಿಕೆಗಳನ್ನು ಪುನರುಚ್ಚರಿಸಲಾಗಿದೆ.

ಹೈಕಮಾಂಡ್‌ ನಾಯಕರು ಡಿ.ಕೆ.ಶಿವಕುಮಾರ್‌ರವರ ಒತ್ತಡಕ್ಕೆ ಮಣಿದು ಜಾತಿ ಜನಗಣತಿಗೆ ಬ್ರೇಕ್‌ ಹಾಕಿದ್ದ ಬಗ್ಗೆಯೂ ಮುಖ್ಯಮಂತ್ರಿ ಮತ್ತವರ ತಂಡ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿರುವುದಾಗಿ ತಿಳಿಸಲಾಗಿದೆ.

ಡಿ.ಕೆ.ಶಿವಕುಮಾರ್‌ರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಹಿಂಪಡೆಯಬೇಕು. ಉಪಮುಖ್ಯಮಂತ್ರಿ ಹುದ್ದೆಯ ಜೊತೆಗೆ ಒಂದು ಇಲಾಖೆಯ ಜವಾಬ್ದಾರಿ ಮಾತ್ರ ವಹಿಸಬೇಕು ಎಂದು ಹೈಕಮಾಂಡ್‌ ಬಳಿ ಸಿದ್ದರಾಮಯ್ಯ ಮತ್ತವರ ಬೆಂಬಲಿಗರು ದೂರಿರುವುದಾಗಿ ತಿಳಿದುಬಂದಿದೆ.

ಈ ಬೇಡಿಕೆಗೆ ಹೈಕಮಾಂಡ್‌ ಸ್ಪಂದಿಸಿದ್ದು, ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸುವುದಾಗಿ ತಿಳಿದುಬಂದಿದೆ. ಎರಡೂವರೆ ವರ್ಷಗಳಲ್ಲಿ ಸಚಿವ ಸಂಪುಟ ಪುನರ್‌ರಚನೆಯಾಗಬೇಕು. ಆ ವೇಳೆ ಬಹಳಷ್ಟು ಬದಲಾವಣೆಗಳಾಗಲಿವೆ ಎಂದು ಹೈಕಮಾಂಡ್‌ ಸುಳಿವು ನೀಡಿವೆ. ಇದನ್ನು ಆಧರಿಸಿ ಸಿದ್ದರಾಮಯ್ಯನವರ ಬೆಂಬಲಿಗರು ರಾಜ್ಯ ರಾಜಕೀಯದಲ್ಲಿ ಸಣ್ಣಪ್ರಮಾಣದ ಬದಲಾವಣೆಗಳಾಗಲಿವೆ ಎಂದು ಮಾತನಾಡಲಾರಂಭಿಸಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";