ಬೆಂಗಳೂರು ಚಿರತೆ ಕಾರ್ಯಪಡೆ ಸಿಬ್ಬಂದಿಗೆ ತರಬೇತಿ

ಬನ್ನೇರುಘಟ್ಟ : ಬೆಂಗಳೂರು ನಗರದ ಬೊಮ್ಮನಹಳ್ಳಿ ಕೂಡ್ಲು ಗೇಟ್ ಬಳಿ ಚಿರತೆ ಕಾಣಿಸಿಕೊಂಡ ಬಳಿಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಆದೇಶದ ಮೇಲೆ ರಚಿಸಲಾದ ಬೆಂಗಳೂರು ನಗರಕ್ಕೆ ಸಮರ್ಪಿತವಾದ ಕ್ಷಿಪ್ರ ಚಿರತೆ ಕಾರ್ಯಪಡೆಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಬೆಂಗಳೂರು ನಗರದ ಚಿರತೆ ಕಾರ್ಯಪಡೆಯ 100ಕ್ಕೂ ಹೆಚ್ಚು ಸಿಬ್ಬಂದಿಗೆ ಕಾರ್ಯಾಚರಣೆಯ ಕಾರ್ಯ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಯಿತು.

ಹೊಳೆಮತ್ತಿ ಪ್ರತಿಷ್ಠಾನದ ವನ್ಯಜೀವಿ ಸಂರಕ್ಷಕ ಹಾಗೂ ಸಂಪನ್ಮೂಲ ವ್ಯಕ್ತಿ ಸಂಜಯ್ ಗುಬ್ಬಿ ಮತ್ತು ಡೆಹರಾಡೂನ್ ನಲ್ಲಿ ವನ್ಯಜೀವಿ ಕಾರ್ಯಾಚರಣೆಯ ತರಬೇತಿ ಪಡೆದಿರುವ ಹಿರಿಯ ಅಧಿಕಾರಿಗಳು ಕಾರ್ಯಪಡೆ ಸಿಬ್ಬಂದಿಗೆ ಕೌಶಲ್ಯಗಳ ಬಗ್ಗೆ ತಿಳಿಸಿಕೊಟ್ಟರು.

 

ಕಾಡಿನಂಚಿನ ಹೊಲಗದ್ದೆ, ತೋಟಗಳಲ್ಲಿ ಉರುಳಿಗೆ ಸಿಲುಕುವ ಚಿರತೆ ಮತ್ತು ವನ್ಯ ಜೀವಿಗಳ ಪ್ರಾಣ ರಕ್ಷಣೆ ಮಾಡುವ ವಿಧಾನ, ಚಿರತೆಗಳು ನಾಡಿಗೆ ಬಂದಾಗ ಅವುಗಳ ಚಲನವಲನದ ಬಗ್ಗೆ ನಿಗಾ ಹೇಗೆ ಇಡಬೇಕು, ಚಿರತೆ ಹೆಜ್ಜೆ ಗುರುತಿಸುವುದು ಹೇಗೆ, ಚಿರತೆ ಸೆರೆ ಹಿಡಿಯಲು ಬೋನುಗಳನ್ನು ಹೇಗೆ ಅಳವಡಿಸಬೇಕು, ಪಶುವೈದ್ಯರು ಅರವಳಿಕೆ ಚುಚ್ಚುಮದ್ದು ನೀಡಿದ ಬಳಿಕ ಹೇಗೆ ಸೆರೆ ಹಿಡಿಯಬೇಕು, ಬಲೆಗಳನ್ನು ಹೇಗೆ ಬಳಸಬೇಕು, ಕಾರ್ಯಾಚರಣೆಯ ವೇಳೆ ಯಾವ ಯಾವ ಸುರಕ್ಷತಾ ಸಾಧನ ಧರಿಸಬೇಕು, ರಾತ್ರಿಯ ವೇಳೆ ಹೇಗೆ ಕಟ್ಟೆಚ್ಚರ ವಹಿಸಬೇಕು ಮತ್ತು ಥರ್ಮನ್ ಡ್ರೋನ್ ಕ್ಯಾಮರಾಗಳ ಬಳಕೆ ಹೇಗೆ ಮಾಡಬೇಕು ಎಂಬಿತ್ಯಾದಿ ಹಲವು ಅಂಶಗಳ ಬಗ್ಗೆ ಕಾರ್ಯಪಡೆ ಸಿಬ್ಬಂದಿಗೆ ತರಬೇತಿ ನೀಡಲಾಯಿತು.

ಬೆಂಗಳೂರು ನಗರದ ಹೊರ ವಲಯಗಳಲ್ಲಿ ಚಿರತೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನರು ಭೀತಿಗೊಳಗಾದಾಗ ಬೆಂಗಳೂರಿಗೆ ಸಮರ್ಪಿತವಾದ  ಚಿರತೆಯ ಕ್ಷಿಪ್ರ ಕಾರ್ಯಪಡೆ ರಚಿಸಿ, ಸಿಬ್ಬಂದಿಗೆ ಅಗತ್ಯ ಸುರಕ್ಷತಾ ಸಾಧನ ಸಲಕರಣೆ ಒದಗಿಸಿ, ತರಬೇತಿ ನೀಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಚಿಸಲಾಗಿರುವ ಪಡೆಗೆ ಇಂದು ಒಂದು  ದಿನದ ತರಬೇತಿ ನೀಡಲಾಯಿತು. ಈ ತರಬೇತಿ ವಿವಿಧ ಹಂತದಲ್ಲಿ ಮುಂದುವರಿಯಲಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

 

ಬೆಂಗಳೂರು ನಗರ ವಿಭಾಗದ  ಅರಣ್ಯ ಸಂರಕ್ಷಣಾಧಿಕಾರಿ ಶಿವ ಶಂಕರ್, ಬೆಂಗಳೂರು ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಮತ್ತಿತರರು  ಪಾಲ್ಗೊಂಡಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top