ಚಾರ್ಮಾಡಿ ಘಾಟಿಯಲ್ಲಿ ಮುಂದುವರಿದ ಪ್ರವಾಸಿಗರ ಪುಂಡಾಟ

ಚಾರ್ಮಾಡಿ: ಘಾಟಿ ಪರಿಸರದಲ್ಲಿನ ತಾತ್ಕಾಲಿಕ ಜಲಪಾತಗಳಲ್ಲಿ ನೀರಿನ ಧುಮ್ಮಿಕ್ಕುವಿಕೆ ಕ್ಷೀಣಗೊಳ್ಳುತ್ತಿದ್ದರೂ ಕೂಡ ಪ್ರವಾಸಿಗರ ಮೋಜು, ಮಸ್ತಿ,ಪುಂಡಾಟ ಮುಂದುವರಿದಿದೆ.

ಮಳೆಗಾಲದಲ್ಲಿ ಚಾರ್ಮಾಡಿ ಘಾಟಿಯ ಗುಡ್ಡ ಪ್ರದೇಶಗಳಿಂದ ಬೀಳುವ ಮಳೆ ನೀರು ಝರಿಗಳಾಗಿ ಹರಿದು ಜಲಪಾತದಂತೆ ಬಂಡೆಗಳ ಮೂಲಕ ಹರಿದು ಬರುತ್ತದೆ. ಇದು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಚಾರ್ಮಾಡಿ ಘಾಟಿಯಲ್ಲಿ ವಾಹನಗಳನ್ನು ನಿಲ್ಲಿಸಿ ಪ್ರಕೃತಿ ವೀಕ್ಷಣೆಗೆ ಅವಕಾಶ ಇಲ್ಲದಿದ್ದರೂ ಇದರ ಬಗ್ಗೆ ಯಾವುದೇ ರೀತಿಯಲ್ಲಿ ಗಮನಹರಿಸದ ಪ್ರವಾಸಿಗರು ಇವುಗಳ ವೀಕ್ಷಣೆ ನೆಪದಲ್ಲಿ ಅಲ್ಲಲ್ಲಿ ವಾಹನಗಳನ್ನು ಅಡ್ಡಾಡಿದ್ದಿ ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡ್ಡಿ ಉಂಟುಮಾಡುವುದು, ಅಪಾಯಕಾರಿ ಗುಡ್ಡ, ಬೆಟ್ಟ, ಜಾರುವ ಬಂಡೆ, ತಡೆಗೋಡೆಗಳನ್ನು ಏರುವುದರ ಜತೆ ಅಪಾಯಗಳಿಗೆ ಆಹ್ವಾನ ನೀಡುವುದು ಸರ್ವೇಸಾಮಾನ್ಯವಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ, ಪತ್ರಿಕೆಗಳಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಇದರಿಂದ ಆಗಸ್ಟ್ ಮೊದಲ ವಾರದಲ್ಲಿ ಜಲಪಾತ ಪ್ರದೇಶ ಹಾಗೂ ಇತರ ಕೆಲವು ಸ್ಥಳಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಇಲಾಖೆ ತನ್ನ ಸಿಬ್ಬಂದಿಯನ್ನು ನಿಯೋಜಿಸಿ ಪ್ರವಾಸಿಗರ ಪುಂಡಾಟವನ್ನು ನಿಯಂತ್ರಿಸಿತ್ತು.

ಮಳೆ ಕಡಿಮೆಯಾಗಿ ಜಲಪಾತಗಳ ನೀರಿನ ಹರಿವು ಕೊಂಚ ಕ್ಷೀಣಿಸುತ್ತಿದ್ದಂತೆ ಪೊಲೀಸರು ಇಲ್ಲಿ ಗಸ್ತು ನಿಲ್ಲಿಸಿದ್ದಾರೆ. ಗಸ್ತು ಕಡಿಮೆಯಾಗುತ್ತಿದ್ದಂತೆ ಇದೀಗ ಮತ್ತೆ ಪ್ರವಾಸಿಗರು ಪುಂಡಾಟ ನಡೆಸುವುದು, ಸಂಚಾರಕ್ಕೆ ಅಡಚಣೆ ಉಂಟುಮಾಡುವುದು, ಘಾಟಿಯಲ್ಲಿ ಸಾಲು ಸಾಲು ವಾಹನಗಳನ್ನು ನಿಲ್ಲಿಸುವುದು ಮುಂದುವರಿದಿದೆ.

Facebook
Twitter
LinkedIn
WhatsApp
Email
Telegram
Print

Leave a Comment

Your email address will not be published. Required fields are marked *

Translate »
Scroll to Top