ಬೆಂಗಳೂರು : ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಗಟ್ಟಿಯಾದ ಸಂವಿಧಾನ ಹೊಂದಿದೆ. ದೇಶದ ಸಾರ್ವಭೌಮತೆಯನ್ನು ರಕ್ಷಿಸಲು ಯುವ ಜನಾಂಗ ನೇತೃತ್ವವಹಿಸಬೇಕು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ ಕರೆ ನೀಡಿದ್ದಾರೆ.
ಮೈಸೂರು ರಸ್ತೆಯ ಆರ್.ವಿ. ಕಾಲೇಜು ಸಮೀಪವಿರುವ ಜ್ಞಾನಬೋಧಿನಿ ಶಿಕ್ಷಣ ಸಂಸ್ಥೆಯಲ್ಲಿ ಈ ಬಾರಿ ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಿದ್ದು, ಒಂದು ಸಾವಿರಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳ ನೇತೃತ್ವದಲ್ಲಿ 75 ಮೀಟರ್ ಉದ್ದದ ತಿರಂಗಾ ಜಾಥಗೆ ಚಾಲನೆ ನೀಡಿ, ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಉಳಿದು ಬೆಳೆಯಬೇಕಾದರೆ ಭ್ರಷ್ಟಾಚಾರ ಮುಕ್ತ ವಾತಾವರಣ ನಿರ್ಮಾಣ ಮಾಡಬೇಕು. ಯುವ ಜನಾಂಗ ನೊಂದವರ ಸಮಸ್ಯೆ ನಿವಾರಣೆಗೆ ಒತ್ತು ನೀಡಬೇಕು. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು.
ಸಂವಿಧಾನದ ಮೌಲ್ಯಗಳ ಬಗ್ಗೆ ಹಳೆಯ ವಿದ್ಯಾರ್ಥಿಗಳು ಅರಿವು ಮೂಡಿಸಿದರು. ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಗಣರಾಜ್ಯೋತ್ಸವಕ್ಕೆ ಮೆರಗು ತಂದಿತು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ದಿ ಅರ್ಸುಲೈನ್ ಫ್ರಾನ್ಸಿಸ್ಕಾನ್ ವಿದ್ಯಾಸಂಸ್ಥೆಯ ಮೈಸೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿ ಲಲ್ಲಿ ಫೆರ್ನಾಂಡೀಸ್, ಪ್ರಾಂಶುಪಾಲರಾದ ಜೆಸಿಂತ ಪಿರೇರಾ, ಪೋಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ರೂಪ ವಿನಯ್ ಮತ್ತಿತರರು ಉಪಸ್ಥಿತರಿದ್ದರು.