ದೇವನಹಳ್ಳಿ: ಊರ ಕಾಯುವ ದೇವತೆ, ಇಷ್ಟಾರ್ಥ ಸಿದ್ಧಿಯ ಗಂಗಮ್ಮ ತಾಯಿಯ 52 ನೇ ಜಾತ್ರಾ ಮಹೋತ್ಸವ ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಜಾತ್ರಾ ಮಹೋತ್ಸವಕ್ಕೆ ಮೇ 3 ನೇ ತಾರೀಖಿನಿಂದಲೇ ಹಲವಾರು ಪೂಜಾ ವಿಧಿ ವಿಧಾನಗಳು ಆರಂಭಗೊಂಡು, ಪ್ರತಿ ನಿತ್ಯ ತಾಯಿಗೆ ವಿಶೇಷ ಪೂಜೆ ನಡೆಯುತ್ತಿತ್ತು. ಮೇ. 10 ರ ಬೆಳಗ್ಗೆ ಗಂಗಮ್ಮ ತಾಯಿಯ 52 ನೇ ವರ್ಷದ ಜಾತ್ರಾ ಮಹೋತ್ಸವ ಸಂಪ್ರದಾಯ ಬದ್ಧವಾಗಿ ನೆರವೇರಿತು. ಊರಿಗೇ ಊರೇ ಹಬ್ಬ ಆಚರಿಸಿದ್ದರಿಂದ ಎಲ್ಲರ ಮನೆ ಮುಂದೆ ಸಗಣಿ ಇಂದ ಸಾರಿಸಿ ರಂಗೋಲಿ ಇಟ್ಟು ಹೂಗಳಿಂದ ಅಲಂಕರಿಸಲಾಗಿತ್ತು. ಮನೆಯಲ್ಲಿ ಮಡಿಯಿಂದ ದೇವಿಗೆ ತಂಬಿಟ್ಟಿನ ಆರತಿ ಸಿದ್ದ ಮಾಡಿಕೊಂಡು ಹೆಂಗಳೆಯರು ಸಿದ್ದರಾಗಿ ಕಳಸ ಹಾಗೂ ದೀಪಾರತಿ ಹಿಡಿದು ದೇವಾಲಯವನ್ನು ತಲುಪಿ ದೇವರಿಗೆ ಮಡಿಲಕ್ಕಿ ಕಟ್ಟಿ, ಹಣ್ಣು ಕಾಯಿ ಮಾಡಿಸಿ ಗಂಗಮ್ಮ ತಾಯಿಗೆ ದೀಪ ಬೆಳಗಿದರು. ಬೆಳಗ್ಗಿನಿಂದ ಸಹಸ್ರಾರು ಭಕ್ತಾದಿಗಳು ಸಾಲು ಸಾಲಾಗಿ ಬಂದು ತಾಯಿಯ ದರ್ಶನ ಪಡೆದರು. ಊರಿನ ಜನರಷ್ಟೇ ಅಲ್ಲದೆ ಈ ಜಾತ್ರೆಗೆ ನೆಂಟರಿಷ್ಟರು ಬಂಧು ಬಳಗ ಎಂಬಂತೆ ಮತ್ತಷ್ಟು ಜನ ತಾಯಿಯ ದರ್ಶನ ಪಡೆಯಲು ಊರಿಂದ ಊರಿಗೆ ಬರುತ್ತಾರೆ. ತಾಯಿಗೆ ಹರಕೆ ಕಟ್ಟಿ ಕೊಳ್ಳುತ್ತಾರೆ. ಹರಕೆ ತೀರಿದವರು ದೇವಿಗೆ ವಿಶೇಷ ಪೂಜೆ ಮಾಡಿಸಿ ಕೈ ಮುಗಿದು ಆಕೆಯ ಕರುಣೆಗೆ ಕೃತಾರ್ಥರಾಗುತ್ತಾರೆ.

ಬಿ.ಬಿ.ಎಂ.ಪಿ.ಮಾಜಿ ಸದಸ್ಯ ಹಾಗೂ ಕ್ಷೇತ್ರದ ಶಾಸಕ ಆಕಾಂಕ್ಷಿ ಆನಂದ್ ಕುಮಾರ್ ಮಾತನಾಡಿ, ನಾನು ದೇವನಹಳ್ಳಿ ತಾಲ್ಲೂಕಿನವನೇ ಆಗಿದ್ದು ಶಾಲಾ ವಿದ್ಯಾಭ್ಯಾಸ ಇದೇ ತಾಲ್ಲೂಕಿನಲ್ಲಿ ವ್ಯಾಸಂಗ ಮಾಡಿದ್ದೇನೆ ಕಾಂಗ್ರೆಸ್ ಪಕ್ಷದಿಂದ ನಾನು ಟಿಕೇಟ್ ಆಕಾಂಕ್ಷಿಯಾಗಿದ್ದು ದೇವರ ಆಶೀರ್ವಾದದಿಂದ ನನಗೆ ಅವಕಾಶ ಮಾಡಿಕೊಟ್ಟರೆ ತಾಲ್ಲೂಕಿನ ಜನರ ಸೇವೆ ಮಾಡುತ್ತೇನೆ ಕ್ಷೇತ್ರವನ್ನು ಅಭಿವೃದ್ದಿ ಹೊಂದಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕೊರೋನಾ ದೂರವಾಗಿ ರೈತರಿಗೆ ಜನಸಾಮಾನ್ಯರಿಗೆ ಉತ್ತಮ ಮಳೆ ಬೆಳೆ ಆಗಲಿ ಎಲ್ಲರೂ ಸುಭಿಕ್ಷವಾಗಿರಲಿ ಎಂದುಹಾರೈಸಿದರು.ಜಾತ್ರೆ ದೀಪಾರತಿ ಕಮಿಟಿ ಅಧ್ಯಕ್ಷ ಎಂ. ನಾಗರಾಜ್ ಮಾತನಾಡಿ, ಜಾತ್ರೆಗೆ ಸುಮಾರು 15 ಸಾವಿರಕ್ಕೂ ಮೀರಿ ಭಕ್ತರು ಬಂದು ತಾಯಿಯ ದರ್ಶನ ಪಡೆಯುತ್ತಾರೆ. ಅದರಲ್ಲೂ ಪ್ರತಿ ವರ್ಷ ಜಾತ್ರೆ ವೈಶಾಕ ಮಾಸ ಅಂದರೆ ಮೇ ತಿಂಗಳಿನಲ್ಲಿ ನಡೆಯಲಿದ್ದು ಈ ಸಮಯದಲ್ಲಿ ಕಟ್ಟಿಕೊಂಡ ಹರಕೆ ಫಲಿಸುತ್ತದೆ ಎಂಬ ನಂಬಿಕೆ ಇದೆ. ಅದರಂತೆ ವರ್ಷ ವರ್ಷವೂ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಆರಕ್ಷಕರ ಸಹಕಾರವೂ ಇದ್ದು, ಶಾಂತಿಯುತ ರೀತಿಯಲ್ಲಿ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ ಎಂದು ತಿಳಿಸಿದರು.ಗಂಗಾತಾಯಿ ಜಾತ್ರಾ ಮಹೋತ್ಸವ ಸಮಿತಿ ಕಾರ್ಯದರ್ಶಿ ರುದ್ರಮೂರ್ತಿ ಮಾತನಾಡಿ, ಗಂಗಾತಾಯಿ ಜಾತ್ರೆಗೆ ಎಲ್ಲ ಜನಾಂಗದವರು ದೇವರಿಗೆ ದೀಪಾರತಿ ಬೆಳಗುವ ಪದ್ದತಿ ಜಾರಿಯಲ್ಲಿದ್ದು, ಬೆಳಗ್ಗೆ 6 ಗಂಟೆ ಇಂದ ಭಕ್ತರು ತಾಯಿಯ ದರ್ಶನಕ್ಕೆ ಬರುತ್ತಿದ್ದಾರೆ. ಮಕ್ಕಳನ್ನು ಗಂಗಾತಾಯಿ ಮಡಿಲಿಗೆ ಹಾಕುವ ಪದ್ದತಿ.

ಊರಿನಲ್ಲಿ ಯಾವ ಜನಾಂಗದಲ್ಲಿ ಮಕ್ಕಳು ಜನಿಸಿದರು. ಆ ಮಗುವನ್ನು ಮೊದಲು ಗಂಗಾತಾಯಿ ದೇವಾಲಯಕ್ಕೆ ಕರೆತಂದು ಪೂಜೆ ಸಲ್ಲಿಸುತ್ತಾರೆ. ಪೂಜೆಯ ನಂತರ ಮಗುವನ್ನು ಕೆಲ ಕ್ಷಣಗಳ ಕಾಲ ಗರ್ಭಗುಡಿಯಲ್ಲಿ ಇರುವ ಗಂಗಾತಾಯಿ ಮಡಿಲಿಗೆ ಹಾಕಿ ತನ್ನ ಮಗುವನ್ನು ನಿನ್ನ ಮಗುವಿನಂತೆ ಕಾಪಾಡು ಎಂದು ಹೇಳಿ ಕೇಳಿಕೊಳ್ಳುತ್ತಾರೆ. ನಂತರವೇ ಮಕ್ಕಳನ್ನು ಇತರ ದೇವಾಲಯಗಳಿಗೆ ಕರೆದುಕೊಂಡು ಹೋಗಬಹುದಾಗಿದೆ. ಹಾಗಾಗಿ ಊರ ತಾಯಿಯಾಗಿ ಗಂಗಮ್ಮ ಎಲ್ಲರನ್ನು ಕಾಪಾಡುತ್ತಾಳೆ. ಇಷ್ಟಾರ್ಥ ನೆರವೇರಿಸುತ್ತಾಳೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು. ಮುತ್ತೈದೆಯರು ಸ್ವತಃ ತಾವೇ ಹೂವಿನಿಂದ ಸಿಂಗರಿಸಿದ ದೀಪಾರತಿ ಮಾಡಿ ತಮ್ಮ ಬಳಗದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಮಟೆ ವಾದ್ಯದೊಂದಿಗೆ ದೀಪಾರತಿ ಹೊತ್ತು ಮೆರವಣಿಗೆ ನಡೆಸಿ ದೇವಿಯವರಿಗೆ ಪೂಜೆ ಸಲ್ಲಿಸಿದರು. ಇದೆ ದಿನ ವಿಜಯಪುರ ಪಟ್ಟಣದಲ್ಲಿನ ಗಂಗಾತಾಯಿ, ದುರ್ಗಾ ತಾಯಿ, ರೇಣುಕಾಎಲ್ಲಮ್ಮ ತಾಯಿ, ಚೌಡೇಶ್ವರಿ ತಾಯಿ, ಸಪ್ಪಲಮ್ಮ ತಾಯಿ, ಸತ್ಯಮ್ಮತಾಯಿಯವರಿಗೆ ವಿಶೇಷ ಅಲಂಕಾರ ಮಾಡಿ ಭಕ್ತರ ಇಷ್ಟಾರ್ಥಗಳಿಗೆ ದೇವಿಯಿಂದ ಆಶೀರ್ವಾದ ಪಡಿದರು. ತಾಲ್ಲೂಕಿನ ಗಣ್ಯರು ಮುಖಂಡರು ಆಗಮಿಸಿ ಗ್ರಾಮ ದೇವತೆಗಳ ಆಶೀರ್ವಾದ ಪಡೆದರು.