ಹುಬ್ಬಳ್ಳಿ ಪ್ರಕರಣವನ್ನು ಸಾಮಾನ್ಯ ಎಂದು ಪರಿಗಣಿಸಿಲ್ಲ -ಬೊಮ್ಮಾಯಿ

ಹುಬ್ಬಳ್ಳಿ : ಹುಬ್ಬಳ್ಳಿ ಪ್ರಕರಣವನ್ನು ಸಾಮಾನ್ಯ ಗಲಭೆ ಎಂದು ಪರಿಗಣಿಸಿಲ್ಲ. ಷಡ್ಯಂತ್ರ ಮಾಡಿ ಪೊಲೀಸ್ ಠಾಣೆಯ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡಿರುವುದನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗಿದೆ. ಕೆಲವೇ ದಿನಗಳಲ್ಲಿ ಇದರ ಹಿಂದಿರುವ ಸಂಘಟನೆ, ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಪ್ರಕರಣದಲ್ಲಿ ಬೇರೆ ಬೇರೆ ಶಕ್ತಿಗಳ ಹುನ್ನಾರ, ಕುಮ್ಮಕ್ಕು ಏನಿದೆ ಎಂದು ತನಿಖೆಯಾಗುತ್ತಿದೆ. ಈಗಾಗಲೇ ಬಂಧಿಸಿರುವವರಿಂದ ಹೇಳಿಕೆಗಳನ್ನು ಪೊಲೀಸರು ಪಡೆದಿದ್ದಾರೆ ಎಂದರು

ಶಾಲೆಗಳಿಗೆ ಬೆದರಿಕೆ ಇ- ಮೇಲ್ :ಪೂರ್ಣಪ್ರಮಾಣದ ತನಿಖೆ : ಶಾಲೆಗಳಿಗೆ ಬಂದಿರುವ ಇ-ಮೇಲ್ ಪಾಕಿಸ್ತಾನದಿಂದ ಬಂದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಇಲ್ಲೇ ಕುಳಿತು ದುಬೈ, ಸೌದಿ ಅರೇಬಿಯಾ, ವಿಳಾಸ ಬಳಸುವ ಪ್ರಸಂಗಗಳೂ ಇವೆ. ಪೂರ್ಣಪ್ರಮಾಣದಲ್ಲಿ ತನಿಖೆ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಇ. ಮೇಲ್ ಎಲ್ಲಿಂದ ಬಂದಿದೆ ಎಂದು ಪತ್ತೆ ಹಚ್ಚಿ, ಕೇಂದ್ರ ಸರ್ಕಾರದ ಸಹಾಯದಿಂದ, ಯಾವ ರಾಷ್ಟ್ರದಲ್ಲಿ , ಯಾರು ಇದನ್ನು ಮಾಡಿದ್ದಾರೆ, ಅವರನ್ನು ಬಂಧಿಸುವ ಬಗ್ಗೆ ಆ ದೇಶದ ಸಹಾಯ ಪಡೆಯಲಾಗುವುದು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇದರ ಬುಡಕ್ಕೆ ಹೋಗಿ ಪತ್ತೆ ಹಚ್ಚಲಾಗುವುದು ಎಂದರು.

ಪಿ.ಎಸ್.ಐ ನೇಮಕಾತಿ:ಸಮಗ್ರ ತನಿಖೆ : ಪಿ.ಎಸ್.ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ವೀಡಿಯೋ ವೈರಲ್ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಹತ್ತು ಹಲವಾರು ಪ್ರಕರಣಗಳು ಹೊರಬೀಳುತ್ತಿವೆ. ಆಡಿಯೋ, ವೀಡಿಯೋ ಪರೀಕ್ಷೆ ಗಳಲ್ಲಿ ಅಕ್ರಮ ಎಸಗುವ ವಿಧಾನಗಳು ಹೊರಬೀಳುತ್ತಿವೆ. ಸಿಐಡಿ ಸಮಗ್ರ ತನಿಖೆ ಮಾಡುವಂತೆ ಸೂಚಿಸಿದೆ. ಯಾರೇ ಇರಲಿ, ಎಷ್ಟೇ ಪ್ರಭಾವಿಗಳು, ಚಾಣಾಕ್ಷರಿರಲಿ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕೆಂದು ಆದೇಶ ನೀಡಲಾಗಿದೆ ಎಂದರು. ಪಿ.ಎಸ್.ಐ ನೇಮಕಾತಿ ನ್ಯಾಯಸಮ್ಮತವಾಗಿ ಆದರೆ ನ್ಯಾಯಸಮ್ಮತ ಪೊಲೀಸ್ ಪಡೆ ನಿರ್ಮಾಣವಾಗುತ್ತದೆ ಎಂದರು.

ಕರ್ನಾಟಕ ಮಾದರಿ : ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿ ಪ್ರಕರಣದಲ್ಲಿ ಕೈಗೊಂಡಂತೆ ಹಲವಾರು ಕಾನೂನಿನ ಬಲವೂ ಇದೆ. ಇದು ಕರ್ನಾಟಕ ಮಾದರಿ. ದಿವ್ಯಾ ಹಾನರಗಿ ಇನ್ನೂ ಬಂಧನಕ್ಕೊಳಗಾಗಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರ ಸಂಸ್ಥೆ, ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದರು.

Leave a Comment

Your email address will not be published. Required fields are marked *

Translate »
Scroll to Top