ಬೆಂಗಳೂರು : ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪಂಗಡವರ ಭೂ ಪರಭಾರೆ ನಿಷೇಧ ಕಾಯ್ದೆ (ಪಿಟಿಸಿಎಲ್ ಕಾಯ್ದೆ)ಗೆ ತಿದ್ದುಪಡಿ ತರಲು ಸುಪ್ರೀಂಕೋರ್ಟ್ ಆದೇಶವಾಗಿದ್ದು, ರಾಜ್ಯದಲ್ಲಿ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಸದಾಸಿದ್ದವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಸಂವಿಧಾನ ಶಿಲ್ಪಿ, ಭಾರತ ರತ್ನ, ಬಾಬಾ ಸಾಹೇಬ ಡಾ|| ಬಿ.ಆರ್.ಅಂಬೇಡ್ಕರ್ ರವರ 131ನೇ ಜನ್ಮದಿನಾಚರಣೆ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಡಾ | | * ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪ್ರದಾನ* ಮಾಡಿ ಮಾತನಾಡಿದರು. ಎಸ್ ಸಿ ಎಸ್ ಟಿ ವರ್ಗಗಳಿಗೆ 75 ಯೂನಿಟ್ ಗಳ ವಿದ್ಯುಚ್ಛಕ್ತಿಯನ್ನು ಉಚಿತವಾಗಿ ನೀಡಲಾಗುವುದು. ಭೂಮಿ ಒಡೆತನ ಯೋಜನೆಯಡಿ 20 ಲಕ್ಷ ಧನಸಹಾಯ. 75 ಸಾವಿರ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ. 50 ಸಾವಿರ ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ಎಸ್ ಸಿ ಎಸ್ ಟಿ, ಓಬಿಸಿ , ಅಲ್ಪಸಂಖ್ಯತಾರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವಂತೆ ವಸತಿ ನಿಲಯಗಳ ಕ್ಲಸ್ಟರ್ ಗಳನ್ನು ನಿರ್ಮಿಸಲಾಗುವುದು. ಈ ಯೋಜನೆಯಡಿ 1000 ಕೊಠಡಿಗಳ ಬಹುಮಹಡಿ ವಿದ್ಯಾರ್ಥಿನಿಲಯ ಸಮುಚ್ಛಯಗಳನ್ನು 280 ಕೋಟಿ ರೂ.ಗಳಲ್ಲಿ ನಿರ್ಮಿಸಲಾಗುವುದು ಎಂದರು.
ದುರ್ಬಲವರ್ಗಗಳ ಅಭ್ಯುದಯ : ದುರ್ಬಲವರ್ಗಗಳ ಅಭ್ಯುದಯಕ್ಕೆ ಶಿಕ್ಷಣ,ಉದ್ಯೋಗ, ಸಬಲೀಕರಣ ಬದಲಾವಣೆಯ ಮೆಟ್ಟಿಲುಗಳಾಗಿವೆ.100 ಅಂಬೇಡ್ಕರ್ ಹಾಸ್ಟೆಲ್ ಗಳನ್ನು ನಿರ್ಮಿಸಲಾಗುವುದು. 10 ಸಾವಿರ ಜನರಿಗೆ ಸ್ವಯಂ ಉದ್ಯೋಗಕ್ಕಾಗಿ ನೀಡಲಾಗುತ್ತಿದ್ದ 50 ಸಾವಿರ ಮಿತಿಯ ಸಹಾಯಧನವನ್ನು 1 ಲಕ್ಷರೂ. ಏರಿಸಲಾಗಿದೆ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲು ತೀರ್ಮಾನಿಸಲಾಗಿದೆ ಎಂದರು.
ಮಹಿಳೆಯರ ಆರ್ಥಿಕ ಸಬಲೀಕರಣ : ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ 500 ಕೋಟಿ ರೂ. ವಿಶೇಷ ಕಾರ್ಯಕ್ರಮ, 50 ಕೋಟಿ ರೂ. ಎಸ್ ಸಿ ಎಸ್ ಟಿ ಮಹಿಳಾ ಸಂಘಗಳಿಗೆ ಅನುದಾನ ನೀಡಿ, ಆ್ಯಂಕರ್ ಬ್ಯಾಂಕ್ ಜೋಡಿಸಲಾಗುತ್ತದೆ. ಪೌರಕಾರ್ಮಿಕರಿಗೆ ರಿಸ್ಕ್ ಅಲೊವೆನ್ಸ್ 2000 ರೂ.ಗಳನ್ನು ಪ್ರಥಮ ಬಾರಿಗೆ ನೀಡಲಾಗುವುದು. ಅಂಗನವಾಡಿ ಕಾರ್ಯಕರ್ತರು, ಅಡಿಗೆ ಕೆಲಸ ಮಾಡುವವರು ಮಾಸಾಶನ ಹೆಚ್ಚಿಸಲಾಗಿದೆ. ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಬಡಜನರಿಗೆ ಆರೋಗ್ಯ ಕಾರ್ಡ್ ನೀಡಲು ತೀರ್ಮಾನಿಸಲಾಗಿದೆ.ಅಲೆಮಾರಿ ಜನಾಂಗಕ್ಕೆ ವಸತಿ ನಿಲಯ ಸೌಲಭ್ಯ ನೀಡಲಾಗುವುದು ಎಂದರು.
ಸಂವಿಧಾನದಿಂದ ಭಾರತ ಶಕ್ತಿಶಾಲಿ ರಾಷ್ಟ್ರ: ದೇಶದ ಅಂತರ್ಗತವಾದ ಸಂಸ್ಕೃತಿ, ಮಾನವೀಯತೆ, ದೇಶವನ್ನು ಒಗ್ಗೂಡಿಸುವ ಶಕ್ತಿ. ಚರಿತ್ರೆಯ ಜೊತೆ ಚಾರಿತ್ರ್ಯವಿರುವ ದೇಶ ಎಂದು ನಂಬಿದ್ದರು. ಸೂರ್ಯಚಂದ್ರರಿರುವವರೆಗೂ ಡಾ. ಅಂಬೇಡ್ಕರ್ ಅವರು ರಚಿಸಿರುವ ಭಾರತದ ಸಂವಿಧಾನ ಇರುತ್ತದೆ. ದೇಶದ ಭವಿಷ್ಯವಾದ ಸಂವಿಧಾನದಿಂದ ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಸಾಮಾಜಿಕ ಸಮಾನತೆಯ ಜೊತೆಗೆ ಸಂವಿಧಾನದಲ್ಲಿ ಆರ್ಥಿಕ ಸಮಾನತೆಯನ್ನೂ ಕೂಡ ಸಂವಿಧಾನದಲ್ಲಿ ಕಾಣಬಹುದು. ಮಹಿಳೆಯರ ಸಬಲೀಕರಣಕ್ಕೆ ಸಮಾನ ಅವಕಾಶಗಳನ್ನು ನೀಡುವುದು ಮುಖ್ಯ ಎಂದು ಪ್ರತಿಪಾದಿಸಿದ್ದರು. ಆಡಳಿತಗಾರರು ಡಾ.ಅಂಬೇಡ್ಕರ್ ಅವರ ಗುಣಧರ್ಮಗಳನ್ನು ಅಳವಡಿಸಿಕೊಂಡಾಗ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯ. ಅವಕಾಶ ವಂಚಿತ ವರ್ಗಗಳಿಗೆ ಮೀಸಲಾತಿ ನೀಡುವ ಮೂಲಕ ಸಮಾನತೆ ತತ್ವವನ್ನು ಪಾಲಿಸಲಾಗುತ್ತಿದೆ ಎಂದರು.
ಡಾ.ಅಂಬೇಡ್ಕರ್ ಅವರೇ ಸ್ಪೂರ್ತೀ : ಸರ್ಕಾರದ ಪ್ರಾಮಾಣಿಕ ಪ್ರಯತ್ನ ಇಚ್ಛಾಶಕ್ತಿಯಿಂದ ಬದಲಾವಣೆಯ ಪರ್ವವನ್ನು ತರಲಾಗುವುದು. ಈ ಆಶಯಕ್ಕೆ ಡಾ.ಅಂಬೇಡ್ಕರ್ ಅವರೇ ಸ್ಪೂರ್ತೀ. 52 ಕೋಟಿ ರೂ. ವೆಚ್ಚದಲ್ಲಿ ತಲೆಎತ್ತಲಿರುವ ಅಂಬೇಡ್ಕರ್ ಸ್ಪೂರ್ತಿಸೌಧ ತಳ ಸಮುದಾಯಗಳ ಎಲ್ಲ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ಎಲ್ಲ ಕಚೇರಿಗಳು ಈ ಕಟ್ಟಡದಲ್ಲಿ ಇರಲಿವೆ ಎಂದರು.