ಸಂವಿಧಾನ ಶಿಲ್ಪಿ ಅಂಬೇಡ್ಕರ್ ಯುಗದ ಶಕ್ತಿ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು

ಬಳ್ಳಾರಿ: ಸಮಾಜವು ಬೆಳವಣಿಗೆ ಹೊಂದಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಎಂಬುದು ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವಾಗಿತ್ತು, ಅದರಂತೆಯೇ ಅವರ ಕನಸು ನನಸಾಗಬೇಕೆಂದರೆ ಶಿಕ್ಷಣದಿಂದಲೇ ಕ್ರಾಂತಿ ಮಾಡಬೇಕು ಮತ್ತು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜಕುಮಾರರ ರಸ್ತೆಯ ಮುನ್ಸಿಪಾಲ್ ಕಾಲೇಜು ಮೈದಾನದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಾನ್ ಮಾನವತಾವದಿ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ 131ನೇ ಜಯಂತಿ ಹಾಗೂ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ರವರ 115ನೇ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ವಲಯಗಳಲ್ಲಿ ಮೀಸಲಾತಿ ಸೃಷ್ಟಿಸಿದ್ದು ಮಹಾನ್ ಮಾನವತಾವಾದಿ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಹೇಳಿದರು.


ಸಮಾಜದ ಯಾವುದೇ ರಂಗದಲ್ಲಿ ಮಹಿಳೆಯರು ಪುರುಷರಿಗೆ ಸಮಾನರಾಗಿ ಜೀವಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಬಾಬಾ ಸಾಹೇಬರು, ಅವರು ಅಂದು ಮಹಿಳೆಯರ ಸಮಾನತೆಗೆ ಹಚ್ಚಿದ ಕಿಚ್ಚಿನ ಫಲ, ಇವತ್ತು ಮಹಿಳೆಯರು ಎಲ್ಲಾ ರಂಗಗಳಲ್ಲೂ ಪುರುಷರಿಗೆ ಸಮನಾಗಿ ನಿಂತಿದ್ದಾರೆ ಮತ್ತು ಸಾಧನೆ ಮಾಡಿದ್ದಾರೆ. ಬಾಬ ಸಾಹೇಬರು ದೇಶ ಕಂಡ ಮಹಾನ್ ಮಾನವತಾವಾದಿ, ವಿಚಾರವಾದಿ, ನ್ಯಾಯವಾದಿ, ಅರ್ಥಿಕ ತಜ್ಞ, ಸಮಾಜ ಸುಧಾರಕರಾಗಿದ್ದರು. ಬಡ ಕುಟುಂಬವೊದರಲ್ಲಿ ಜನಿಸಿ ಇವತ್ತು ನಾನು ಮಂತ್ರಿ ಆಗಿ ನಿಮ್ಮ ಮುಂದೆ ಇದ್ದೇನೆ ಎಂದರೆ ಅದರ ಹಿಂದಿನ ಶಕ್ತಿ ಬಾಬಾ ಸಾಹೇಬರು ಎಂದು ಭಾವುಕರಾಗಿ ನುಡಿದರು. ಇವತ್ತು ಸರ್ಕಾರಿ ಮತ್ತು ಖಾಸಗಿ ಕಚೇರಿಯಲ್ಲಿ ಕೆಲಸದ ವೇಳೆಯು 12ರಿಂದ 8 ಗಂಟೆಗಳ ವರೆಗೆ ತಿದ್ದುಪಡಿ, ಕೆಲಸಕ್ಕೆ ತಕ್ಕ ವೇತನ ಮಾಡಿದವರು ಬಾಬಾ ಸಾಹೇಬರು ಎಂದು ಹೇಳಿದರು. 1935ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಸ್ಥಾಪನೆಯಲ್ಲಿ ಅವರ ಪಾತ್ರ ಪ್ರಮುಖವಾಗಿದ್ದು, ಹಿಮಾಚಲ ಪ್ರದೇಶದ ಭಾಕ್ರಾ ನಂಗಲ್ ಡ್ಯಾಂ, ಒಡಿಸ್ಸಾದ ಹಿರಾಕುಡ್ ಡ್ಯಾಂ, ಜಾಖರ್ಂಡ್-ಪಶ್ಚಿಮ ಬಂಗಾಳದ ದಾಮೋದರ ವ್ಯಾಲಿ ಸೇರಿದಂತೆ ಅನೇಕ ಪ್ರಾಜೆಕ್ಟ್‍ಗಳಿಗೆ ಚಾಲನೆ ನೀಡಿದ್ದೇ ಡಾ.ಅಂಬೇಡ್ಕರ್ ಅವರು ಎಂದು ಹೇಳಿದರು.


ದೇಶದ ಕಾನೂನು ಸಚಿವರಾಗಿದ್ದ ಸಂದರ್ಭದಲ್ಲಿ ಬಾಬಾ ಸಾಹೇಬರು ಹಿಂದೂ ಕೋಡ್ ಬಿಲ್‍ನ್ನು ಕಾನೂನಾಗಿ ತಂದರು. ಅಂಬೇಡ್ಕರ್ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಪ್ರಗತಿ ಕುರಿತಾಗಿ ಅನೇಕ ಚಿಂತನೆಗಳನ್ನು ನಡೆಸಿದ್ದಾರೆ ಎಂದು ಹೇಳಿದ ಅವರು ಇಂದು ಅಂಬೇಡ್ಕರ್ ಜಯಂತಿಯ ಅಂಗವಾಗಿ ಭಾರತದ ಎಲ್ಲಾ ಪ್ರಧಾನಿಗಳ ಜೀವನ ಹಾಗೂ ಸಾಧನೆ ಬಿಂಬಿಸುವ ಮ್ಯೂಸಿಯಂ ಹಾಗೂ ಪ್ರದರ್ಶನ ಮಳಿಗೆಗಳನ್ನು ಪ್ರಧಾನಿ ಮೋದಿಜಿ ಲೋಕಾರ್ಪಣೆ ಮಾಡಲಿದ್ದಾರೆ ಹಾಗೂ ರಾಜ್ಯದಲ್ಲಿ ಸುಮಾರು 25 ಕೋಟಿ ರೂ.ವೆಚ್ಚದಲ್ಲಿ “ಸ್ಫೂರ್ತಿ ಭವನ” ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಇಂದು ಚಾಲನೆ ನೀಡಿದ್ದಾರೆ ಎಂದು ವಿವರಿಸಿದರು. ರಾಜ್ಯ ಸರ್ಕಾರವು ಎಲ್ಲಾ ನ್ಯಾಯಾಲಯಗಳಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರದ ಜೊತೆಗೆ ಡಾಕ್ಟರ್ ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರ ಮನವೊಲಿಸುವ ನಿಟ್ಟಿನಲ್ಲಿ ಕೇಂದ್ರ ಕಾನೂನು ಸಚಿವರಿಗೆ ಪತ್ರ ಬರೆದಿದ್ದು, ಮುಖ್ಯಮಂತ್ರಿಗಳು ಖುದ್ದು ಅವರನ್ನು ಭೇಟಿ ಮಾಡಿ ವಿನಂತಿ ಮಾಡಲಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ ಅಂಬೇಡ್ಕರ್ ಅವರು ಭೇಟಿ ಕೊಟ್ಟ ಸ್ಥಳಗಳನ್ನ ಅಭಿವೃದ್ಧಿ ಪಡಿಸುವುದಾಗಿ ಸಿ.ಎಂ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದಾರೆ ಎಂದು ವಿವರಿಸಿದ ಸಚಿವ ಶ್ರೀರಾಮುಲು ಅವರು ಕಳೆದ ಬಜೆಟ್‍ನಲ್ಲಿ 26,005 ಕೋಟಿ ರೂ. ಇದ್ದ ಎಸ್‍ಸಿಪಿ ಮತ್ತು ಟಿಎಸ್‍ಪಿ ಅನುದಾನವನ್ನು 28,234ಕೋಟಿ ರೂ.ಗೆ ಹೆಚ್ಚಿಸಲಾಗಿದ್ದು, ಅಂದರೆ 2,229 ಕೋಟಿ ಹೆಚ್ಚಳವಾಗಿದೆ. ಈ ಮೂಲಕ ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿಗೆ ಬದ್ಧ ಎಂದು ಈ ಮೂಲಕ ತೋರಿಸಿದೆ.ಈ ವರ್ಷ 750 ಕೋಟಿ ರೂ.ವೆಚ್ಚದಲ್ಲಿ 100 ಡಾ. ಬಿ.ಆರ್ ಅಂಬೇಡ್ಕರ್ ವಿದ್ಯಾರ್ಥಿ ನಿಲಯಗಳನ್ನು ಹಾಗೂ 10 ಕ್ರೈಸ್ ವಸತಿ ಕಟ್ಟಡಗಳನ್ನು ನಿರ್ಮಿಸಲಾಗುವುದು ಮತ್ತು ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ – ಎಲ್ಲಾ ಯೋಜನೆಗಳಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರಿಗೆ ಶೇಕಡ 25 ರಷ್ಟು ಮೀಸಲಾತಿ ಒದಗಿಸಲಾಗಿದೆ ಎಂದು ವಿವರಿಸಿದರು.


ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮಗಳಿಗೆ ಒಟ್ಟಾರೆ 800 ಕೋಟಿಗಳನ್ನು ಹಂಚಿಕೆ ಮಾಡಲಾಗಿದ್ದು, ಎಸ್ಸಿ,ಎಸ್ಟಿ,ಓಬಿಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರಗಳು ಹಲವು ಯೋಜನೆಗಳನ್ನು ರೂಪಿಸುತ್ತಿವೆ, ಅದನ್ನ ಸಮರ್ಪಕವಾಗಿ ಅನುμÁ್ಠನಕ್ಕೆ ತರಬೇಕಿದೆ ಎಂದು ತಿಳಿಸಿದ ಸಚಿವ ಶ್ರೀರಾಮುಲು ಅವರು ಸಮಾಜದಲ್ಲಿ ಶೋಷಣೆ, ದೌರ್ಜನ್ಯ ಪ್ರಕರಣಗಳು ನಿಂತಿಲ್ಲ. ಇದರ ತಡೆಗೆ ನಮ್ಮ ಸರ್ಕಾರಗಳು ಕ್ರಮ ವಹಿಸುತ್ತಿದ್ದು, ಇನ್ನು ಮುಂದೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ(ಸ್ವಾಯತ್ತ)ನ ಉಪನ್ಯಾಸಕಾರದ ಡಾ.ಬಿ.ಶ್ರೀನಿವಾಸಮೂರ್ತಿ ಅವರು ಡಾ.ಬಾಬು ಜಗಜೀವನ ರಾಮ್‍ರವರ ಕುರಿತು ಹಾಗೂ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಟಿ.ಆರ್.ಚಂದ್ರಶೇಖರ್ ಅವರು ವಿಶೇಷ ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಅತ್ಯುತ್ತಮ ನೌಕರರಿಗೆ ಪ್ರಶಸ್ತಿ ಪತ್ರ, 2020-21ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು. ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳ ನಾಮಫಲಕಗಳು ಮತ್ತು ಭಿತ್ತಿಚಿತ್ರಗಳು ಗಮನ ಸೆಳೆದವು. ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕರಾದ ಸೋಮಶೇಖರ ರೆಡ್ಡಿ, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ, ಜಿಲ್ಲಾ ಪಂಚಾಯತ್ ಸಿಇಒ ಜೆ.ಲಿಂಗಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಸಹಾಯಕ ಆಯುಕ್ತರಾದ ಡಾ.ಆಕಾಶ್ ಶಂಕರ್, ಮಹಾನಗರ ಪಾಲಿಕೆಯ ಮೇಯರ್ ರಾಜೇಶ್ವರಿ ಸೇರಿದಂತೆ ದಲಿತ ಸಮುದಾಯದ ಮುಖಂಡರುಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top