ತುಮಕೂರು: ಮಧುಗಿರಿ ತಾಲ್ಲೂಕಿನ ನಿಟ್ಟರಹಳ್ಳಿ ಅಭಯಹಸ್ತೆ ಆದಿಲಕ್ಷಿ ಸಂಸ್ಥಾನ ಮತ್ತು ವಿಶ್ವಕರ್ಮ ಸಂಪನ್ಮೂಲ ಚಾರಿಟಬಲ್ ಟ್ರಸ್ಟ್ ಹಾಗೂ ನಿಜಶರಣ ಕಮ್ಮಾರ ಕಲ್ಲಯ್ಯ ಮಠದಿಂದ ಜುಲೈ 1 ಮತ್ತು 2ರಂದು ನವದುರ್ಗಾಧಾಮದ 6ನೇ ವಾರ್ಷಿಕೋತ್ಸವ, ಮಹಾಚಂಡಿಕಾ ಹೋಮ ಮತ್ತು ನವದುರ್ಗಾನುಷ್ಠಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆದಿಲಕ್ಷಿಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನೀಲಕಂಠಾಚಾರ್ಯ ಸ್ವಾಮೀಜಿ, 800 ವರ್ಷದ ಹಿಂದೆ ನಿಟ್ಟರಹಳ್ಳಿ ಕ್ಷೇತ್ರದಲ್ಲಿ ಸ್ವಯಂ ಉದ್ಬವವಾದ ಶ್ರೀ ಲಕ್ಷಿಪೀಠವು ವಿಶ್ವಕರ್ಮ ಸೇರಿ ಸರ್ವಧರ್ಮೀಯರಿಗೆ ಪೂಜನೀಯ ಕ್ಷೇತ್ರವಾಗಿದೆ. ನವದುರ್ಗಿ ಅವತಾರದ ಪ್ರತೀಕವಾಗಿ ನವದುರ್ಗಾಧಾಮವನ್ನು ಕ್ಷೇತ್ರದಲ್ಲಿ ನಿರ್ಮಿಸಿದ್ದು, ಇದರ 6ನೇ ವಾರ್ಷಿಕೋತ್ಸವ ನಿಮಿತ್ತ ಜು.2ರಂದು ಮಹಾಚಂಡಿಕಾಹೋಮ ಏರ್ಪಡಿಸಲಾಗಿದೆ. ಎರಡು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ ಎಂದರು.

ರಾಜ್ಯ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ.ಬಿ.ಎಂ.ಉಮೇಶ್ ಕುಮಾರ್ ಮಾತನಾಡಿ, ನಾಡಿಗೆ ಒಳಿತಾಗಲಿ ಎಂಬ ಆಶಯದೊಂದಿಗೆ ಡಾ.ನೀಲಕಂಠಾಚಾರ್ಯಸ್ವಾಮೀಜಿ ಅವರು ಸಿದ್ದರಬೆಟ್ಟ, ಎಲೆರಾಂಪುರ, ತಗ್ಗಿಹಳ್ಳಿ ರಾಮಕೃಷ್ಣಾಶ್ರಮ ಸ್ವಾಮೀಜಿಗಳನ್ನು ಆಹ್ವಾನಿಸಿ 2 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದೆ. ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ಶಾಸಕರಾದ ಟಿ.ಬಿ.ಜಯಚಂದ್ರ, ಪ್ರದೀಪ್‌ಈಶ್ವರ್, ಚಿತ್ರನಟಿ ಭವ್ಯ, ಶ್ರುತಿ ಸೇರಿ ಹಲವು ಗಣ್ಯರು, ಜಿಲ್ಲೆಯ ಸಮಾಜದ ಮುಖಂಡರುಗಳು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಅತ್ಯಂತ ಕಡಿಮೆ ಅನುದಾನವಿದ್ದು, ಅನುದಾನಕ್ಕೆ ಸಮಾಜದ ಸ್ವಾಮೀಜಿಗಳ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.
ಕರ್ನಾಟಕರಾಜ್ಯ ಕಮ್ಮಾರ ಸಂಘಗಳ ಒಕ್ಕೂಟದ ಪ್ರಧಾನಕಾರ್ಯದರ್ಶಿ ಎಲ್.ಎನ್.ಮಂಜುನಾಥ್, ಚಿನ್ನಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಶಶಿಧರ್ ಬಿ.ಎಸ್.ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.