ಪ್ರಮುಖ ಬೇಡಿಕೆ ಇಡೇರಿಕೆಗೆ ಆಗ್ರಹಿಸಿ ಕಪ್ಪು ಪಟ್ಟಿ ಧರಿಸಿ ಶಿಕ್ಷಕರ ಪ್ರತಿಭಟನೆ

ಮಸ್ಕಿ : ಶಿಕ್ಷಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಕ್ಕಳ ಪಾಠ ಬೋಧನೆಗೆ ತೊಂದರೆಯಾಗದಂತೆ ಅ.21 ರಂದು ಕಪ್ಪು ಪಟ್ಟಿ ಧರಿಸಿ ಶಿಕ್ಷಕರು ಮಸ್ಕಿ ತಾಲೂಕಿನ ಎಲ್ಲ ಶಾಲೆಗಳಲ್ಲಿ ಶಿಕ್ಷಕರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ಅ.ದಿನಾಂಕ 29 ರ ವರೆಗೆ ನಡೆಯಲಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಬಾಲಸ್ವಾಮಿ ಹಂಪನಾಳ ತಿಳಿಸಿದರು. ಶಿಕ್ಷಕರ ಪ್ರಮುಖ ಬೇಡಿಕೆಯಾದ ವರ್ಗಾವಣೆ ಕಳೆದ 2 ವರ್ಷದಿಂದ ನಡೆದಿರುವುದಿಲ್ಲ. NPS ರದ್ದು ಪಡಿಸಿ OPS ಜಾರಿಗೆ ತರಬೇಕು. ಪ್ರಾಥಮಿಕ ಶಾಲಾ ಶಿಕ್ಷಕ ಪದವೀಧರರಿಗೆ ಪದವೀಧರ ಶಿಕ್ಷಕರೆಂದು ಪರಿಗಣಿಸಿ 6-8 ನೇ ತರಗತಿಗೆ ಅವರನ್ನು ಪರಿಗಣಿಸಬೇಕು. ಭಡ್ತಿಯಲ್ಲಿ ಆದ್ಯತೆ ನೀಡಬೇಕು. 2008 ಕ್ಕೆ ಪೂರ್ವದಲ್ಲಿ ನೇಮಕವಾದ ಎಲ್ಲಾ ಶಿಕ್ಷಕರಿಗೆ ವರ್ಗಾವಣಾ ಸಂದರ್ಭಗಳಲ್ಲಿ ಖಾಲಿ ಇದ್ದ ಎಲ್ಲಾ ಹುದ್ದೆಗಳನ್ನು ನೀಡುವಂತಾಗಬೇಕು. ಗ್ರಾಮೀಣ ಕ್ರಪಾಂಕದಿಂದ ವಂಚಿತರಾದ ಶಿಕ್ಷಕರಿಗೆ ಹಿಂದಿನ ಸೇವೆಯನ್ನು ಪರಿಗಣಿಸಿ ಆರ್ಥಿಕ ಸೌಲಭ್ಯ ನೀಡುವಂತಾಗಬೇಕು.

ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹಿಂದಿ ಶಿಕ್ಷಕರಿಗೆ ಖಾಲಿ ಹುದ್ದೆ ತೋರಿಸುವಂತಾಗಬೇಕು. ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಮುಖ್ಯ ಶಿಕ್ಷಕರುಗಳಿಗೆ 15, 20, 25 ರ ವಾರ್ಷಿಕ ಭಡ್ತಿ, ದೈಹಿಕ ಶಿಕ್ಷಕರ ಸಮಸ್ಯೆಗಳು ಇವುಗಳನ್ನು ಬಗೆಹರಿಸಬೇಕು. ಪ್ರೌಢ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಗೊಂಡು ಬಾಹ್ಯವಾಗಿ M.A. M.Ed, M.Sc ಪದವಿಗಳಿಸಿದ ಶಿಕ್ಷಕರಿಗೆ ಕಾಲೇಜು ಲೆಕ್ಚರ್ ಆಗಿ ಭಡ್ತಿ ನೀಡಲಾಗಿದೆ. ಅದೇ ರೀತಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಗೊಂಡು ಬಾಹ್ಯವಾಗಿ B.A. B.Ed, M.A. M.Ed. ಪದವಿಗಳಿಸಿದ ಶಿಕ್ಷಕರಿಗೆ ಯಾಕೆ ಪದವೀಧರ ಶಿಕ್ಷಕರೆಂದು ಪರಿಗಣಿಸಬಾರದು ಎಂಬುದು ಶಿಕ್ಷಕರ ಪ್ರಶ್ನೆಯಾಗಿದೆ. ಭಡ್ತಿ ನೀಡುವಾಗ, ವರ್ಗಾವಣೆ ಮಾಡುವಾಗ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆಯ ಮಾನದಂಡ ಪ್ರೌಢ ಶಾಲೆಗಳಿಗಿಂತ ಪ್ರಾಥಮಿಕ ಶಾಲೆಗಳಿಗೆ ಏಕೆ ವಿಭಿನ್ನವಾಗಿದೆ? ಈ ತಾರತಮ್ಯ ಏಕೆ ಎಂಬುದು ಶಿಕ್ಷಕ ಸಮುದಾಯದ ಅಸಮಾಧಾನವಾಗಿದೆ.

ಶಿಕ್ಷಕರ ಸಮಸ್ಯೆ ಬಗೆಹರಿಯದೇ ಹೋದಲ್ಲಿ ಸರಕಾರ ಅಥವಾ ಇಲಾಖೆ ಶಿಕ್ಷಕರ ಪ್ರಮುಖ ಬೇಡಿಕೆಗಳಿಗೆ ಸ್ಪಂದಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ದಿನಾಂಕ 30-10-2021 ರಿಂದ 10-11-2021 ರ ವರೆಗೆ ಶಾಲಾ ಮಧ್ಯಾಹ್ನದ ಬಿಸಿ ಊಟದ ಮಾಹಿತಿಯನ್ನು ಅಪ್ ಡೇಟ್ ಮಾಡದೇ ಅಸಹಕಾರ ವ್ಯಕ್ತಪಡಿಸುವುದು. ದಿನಾಂಕ 11-11-2021 ರಿಂದ 18-11-2021 ರವರೆಗೆ STS ಮಾಹಿತಿಯನ್ನು ಅಪ್ ಲೋಡ್ ಮಾಡದೇ ಶಿಕ್ಷಕರ ಸಮಸ್ಯೆಗಳ ಕುರಿತು ಗಮನಸೆಳೆಯುವುದು. ಇದಾದ ನಂತರ ಶಿಕ್ಷಕರ ಸಂಘಕ್ಕೆ ಆಯ್ಕೆಯಾದ ಎಲ್ಲಾ ಸದಸ್ಯರೂ ರಾಜ್ಯ ಮಟ್ಟದಲ್ಲಿ ರ್ಯಾಲಿ ಹಾಗೂ ಧರಣಿ ಸತ್ಯಾಗ್ರಹ ಮಾಡುವುದು. ಹೀಗೆ ಸಂಘ ಹೋರಾಟವನ್ನು ಕೈಗೆತ್ತಿಕೊಳ್ಳಲಿದೆ.

ಸರ್ಕಾರದ ಎಲ್ಲಾ ಕಾರ್ಯಕ್ರಮಗಳಲ್ಲಿ ಇಲಾಖೆಗೆ ಎಲ್ಲಾ ಮಾಹಿತಿಗಳನ್ನು ನೀಡುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರಾಮಾಣಿಕವಾಗಿಕ ಕಾರ್ಯ ನಿರ್ವಹಿಸುತ್ತಿದ್ದರೂ ಶಿಕ್ಷಕರಿಗೆ ನ್ಯಾಯವಾಗಿ ಸಿಗಬೇಕಾದ ಸೌಲಭ್ಯಗಳನ್ನು ನೀಡುವಲ್ಲಿ ಸರ್ಕಾರ ಮತ್ತು ಇಲಾಖೆ ಮೀನಾಮೇಷ ಎಣಿಸುತ್ತಿರುವುದು ತುಂಬಾ ನೋವಿನ ಸಂಗತಿಯಾಗಿದೆ ಎಂದು ತಾಲೂಕು ಸಂಘದ ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದರು. ಅದರಂತೆ ಮಸ್ಕಿ ತಾಲೂಕು ಕೇಂದ್ರಗಳಲ್ಲಿ ಮಾನ್ಯ ಶಿಕ್ಷಣ ಮಂತ್ರಿಗಳು, ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ಹಾಗೂ ಮಾನ್ಯ ಆಯುಕ್ತರಿಗೆ ಕ್ಷೇತ್ರಶಿಕ್ಷಣಾಧಿಕಾರಿಗಳ ಮೂಲಕ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಸಂಘದ ಮುಂದಿನ ನಡೆಯ ಬಗ್ಗೆ ಮನವಿ ಸಲ್ಲಿಸುವ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಕ, ರಾ, ಪ್ರಾ, ಶಾ, ಶಿ,ಸಂಘ (ರಿ )ಮಸ್ಕಿ ತಾಲೂಕು ಅಧ್ಯಕ್ಷರು ಶ್ರೀ ಬಾಲಸ್ವಾಮಿ ಹಂಪನಾಳ, ತಾಲೂಕು ನೌಕರರ ಸಂಘದ ಅಧ್ಯಕ್ಷರು, ಶ್ರೀ ಶಂಕರಗೌಡ ಪಾಟೀಲ್, ಪಂಪಾಪತಿ ಹೂಗಾರ್ ಪ್ರಧಾನ ಕಾರ್ಯದರ್ಶಿ, ಶ್ರೀಮತಿ ನೇತ್ರಾವತಿ ಉಪಾಧ್ಯಕ್ಷರು, ಅಂಬರೀಶ್ ಉದ್ಬಾಳ ಸಂಘಟನಾ ಕಾರ್ಯದರ್ಶಿ, ಶ್ರೀ ಮಂಜುನಾಥ ಹಾಲಾಪುರ್ ಕಾರ್ಯದರ್ಶಿ, ಶ್ರೀ ಕಾಂತಮ್ಮ ನಿರ್ದೇಶಕರು, ಹಾಗೂ ಬಸನಗೌಡ, ಮಲ್ಲಮ್ಮ, ಛತ್ರಪ್ಪ, ಅರವಿಂದ್ ಪಾಟೀಲ್, ಮೋಹನ್ ಬಾವಿಮನಿ, ಪರಶುರಾಮ್, ಶ್ರೀಮತಿ ಕುರುಡಿ ಹಾಗೂ ಇತರೆಶಿಕ್ಷಕರು ಭಾಗಿಯಾಗಿದ್ದರು.

Leave a Comment

Your email address will not be published. Required fields are marked *

Translate »
Scroll to Top