ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರ ಅಮಾನತು

ಬೆಂಗಳೂರು:  ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸಿಡಿದೆದ್ದಿರುವ ಬಂಡಾಯಗಾರರನ್ನು ಶಮನಗೊಳಿಸುವ ಪ್ರಯತ್ನಗಳು ಬಹುತೇಕ ವಿಫಲಗೊಂಡಿದ್ದು, ಹಿನ್ನೆಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರನ್ನು ಅಮಾನತು ಇಲ್ಲವೇ ವಜಾಗೊಳಿಸಲು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವವರು, ಅಧಿಕೃತ ಅಭ್ಯರ್ಥಿಗಳ ವಿರುದ್ಧ ಪ್ರಚಾರ ನಡೆಸುತ್ತಿರುವವರ ವಿರುದ್ಧ ಶಿಸ್ತು ಕ್ರಮಕ್ಕೆ ಪಕ್ಷ ಮುಂದಾಗಿದೆ.

 

ಪ್ರಾರಂಭದಿಂದಲೂ ಚುನಾವಣಾ ಕಣದಿಂದ ದೂರ ಉಳಿದ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರನ್ನು ಅಮಾನತು ಮಾಡಲು ತೀರ್ಮಾನಿಸಲಾಗಿದೆ.

ತಮ್ಮ ಪುತ್ರನಿಗೆ ಟಿಕೆಟ್ ತಪ್ಪಿತೆಂಬ ಕಾರಣಕ್ಕೆ ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿರುವ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ವಜಾಗೊಳಿಸುವ ಸಾಧ್ಯತೆಯಿದೆ.

 

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಕೆಲವು ಮುಖಂಡರು ಹಾಗೂ ಹಾಲಿ ಶಾಸಕರಿಗೆ ನೀಡಿದ್ದ ಗಡುವು ಮುಗಿದ ನಂತರವೂ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ತೋರದ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಕಠಿಣ ತೀರ್ಮಾನಕ್ಕೆ ಬಂದಿದ್ದಾರೆ.

ಹಾಸನದಲ್ಲಿ ಪ್ರೀತಂ ಗೌಡ, ತುಮಕೂರಿನಲ್ಲಿ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, ಕೊಪ್ಪಳದಲ್ಲಿ ಕರಡಿ ಸಂಗಣ್ಣ, ಚಿಕ್ಕಬಳ್ಳಾಪುರದಲ್ಲಿ ಶಾಸಕ ವಿಶ್ವನಾಥ್, ಮಂಡ್ಯದಲ್ಲಿನ ಕೆಲವು ಮುಖಂಡರು, ಚಿತ್ರದುರ್ಗದಲ್ಲಿ ಶಾಸಕ ಚಂದ್ರಪ್ಪ ಸೇರಿದಂತೆ ಹಲವು ನಾಯಕರುಗಳು ಪಕ್ಷದ ತೀರ್ಮಾನವನ್ನು ಪ್ರಶ್ನಿಸಿದ್ದರು.

ರಾಜ್ಯ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ಬಿಜೆಪಿಯ ರಾಧಾ ಮೋಹನ್ ದಾಸ್, ಭಿನ್ನಾಭಿಪ್ರಾಯಗಳನ್ನು ತೊಡೆದುಹಾಕಲು ಹಲವು ಸುತ್ತಿನ ಮಾತುಕತೆ ನಡೆಸಿ ಬಂಡಾಯ ಶಮನಗೊಳಿಸುವಲ್ಲಿ ಸಫಲವಾಗಿದ್ದರು.

ಬಂಡಾಯದ ಸಾಲಿನಲ್ಲಿ ಮುಂದುವರಿದವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೇ ಕಳೆದ ಬುಧವಾರದವರೆಗೆ ಗಡುವು ನೀಡಿದ್ದರು.

ಅಮಿತ್ ಷಾ ಅವರ ಎಚ್ಚರಿಕೆಯಿಂದ ಎಚ್ಚೆತ್ತ ವಿಶ್ವನಾಥ್, ಪ್ರೀತಂ ಗೌಡ ತಕ್ಷಣವೇ ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿ ಮನಸ್ಸಿಲ್ಲದಿದ್ದರೂ, ಪಕ್ಷ ಅಥವಾ ಎನ್ಡಿಎ ಕೂಟದ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದರು.

ಮಾಧುಸ್ವಾಮಿ, ಸಂಸದ ಕರಡಿ ಸಂಗಣ್ಣ ಮೊದ ಮೊದಲು ಬಹಿರಂಗವಾಗಿ ಟೀಕೆ ಮಾಡುತ್ತಿದ್ದವರು ಈಗ ಮೌನಕ್ಕೆ ಶರಣಾಗಿ ತಟಸ್ಥವಾಗಿ ಉಳಿದಿದ್ದಾರೆ.

ಬಹಿರಂಗವಾಗಿಯೇ ಕಾಂಗ್ರೆಸ್ ಪರ

ಷಾ ಅವರ ಎಚ್ಚರಿಕೆ ಮೀರಿ ಪಕ್ಷದ ಇಬ್ಬರು ಶಾಸಕರು ಬಹಿರಂಗವಾಗಿಯೇ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದಿದ್ದಾರೆ, ಇನ್ನು ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರಬಿ.ವೈ.ರಾಘವೇಂದ್ರ ವಿರುದ್ಧ ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಮತ್ತೆ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲ ನಾಳೆಯೇ ನಾಮಪತ್ರ ಸಲ್ಲಿಸುವುದಾಗಿಯೂ ಘೋಷಿಸಿದ್ದಾರೆ.

ಪಕ್ಷದ ನೆಲೆಗಟ್ಟಿನ ಸಿದ್ಧಾಂತದ ಮೇಲೆ ಬಂದವರೇ ಬಂಡಾಯ ಎದ್ದರೆ ಉಳಿದ ಕಾರ್ಯಕರ್ತರಿಗೂ, ಮುಖಂಡರಿಗೂ ಭಯ ಇಲ್ಲದಂತಾಗುತ್ತದೆ ಎಂಬ ಹಿನ್ನೆಲೆಯಲ್ಲಿ ದೆಹಲಿ ವರಿಷ್ಠರು ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ.

 

ಶಾಸಕರನ್ನು ವಜಾಗೊಳಿಸಿದರೆ ಕಾಂಗ್ರೆಸ್ಗೆ ಸೇರ್ಪಡೆಗೊಳ್ಳಲು ದಾರಿ ಸುಗಮವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಅವರನ್ನು ಸದ್ಯ ಅಮಾನತ್ತಿನಲ್ಲಿಡಲು ಪಕ್ಷ ತೀರ್ಮಾನಿಸಿದೆ ಎನ್ನಲಾಗಿದೆ.

Facebook
Twitter
LinkedIn
WhatsApp
Telegram
Email
Facebook

Leave a Comment

Your email address will not be published. Required fields are marked *

Translate »
Scroll to Top