ಮನುಷ್ಯತ್ವ ಇಲ್ಲದ ರಾಜ್ಯ ಸರಕಾರ: ಪಿ.ರಾಜೀವ್

ಬೆಂಗಳೂರು: ಚಾರ್ಟರ್ ವಿಮಾನದಲ್ಲಿ ದೆಹಲಿಗೆ ಜಮೀರ್ ಅಹ್ಮದ್ ಅವರ ಜೊತೆ ತೆರಳುವ ಮುಖ್ಯಮಂತ್ರಿಗಳು, ಈ ಸರಕಾರಕ್ಕೆ ಹಾಲಿನ ಪ್ರೋತ್ಸಾಹಧನ ನೀಡಲು ಮನುಷ್ಯತ್ವ ಇಲ್ಲ. ಹಾಗಾಗಿ ಈ ದನಗಳನ್ನು ತೆಗೆದುಕೊಂಡು ನಾವು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಎಚ್ಚರಿಕೆ ನೀಡಿದರು.

 

ಬಿಜೆಪಿ ಬೆಂಗಳೂರು ಮಹಾನಗರ ವತಿಯಿಂದ ಇಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಬೃಹತ್ ಪ್ರತಿಭಟನೆ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಸರಕಾರದ ವಿರುದ್ಧ ಜಾನುವಾರುಗಳು ತಿರುಗಿ ಬಿದ್ದಿವೆ. ಜಾನುವಾರುಗಳಿಗೆ ಪಶು ಆಸ್ಪತ್ರೆಗಳಿಲ್ಲ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಪಶು ಆಸ್ಪತ್ರೆಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡುವ ಮುಖಾಂತರ ಬೆಂಗಳೂರಿನಲ್ಲಿ ಹಾಲು ಉತ್ಪಾದಕರೂ ಇರಬಾರದು; ಹಾಲು ಕೊಡುವ ಗೋವುಗಳೂ ಇರಬಾರದು ಎಂಬ ಗೋವಿರೋಧಿ ಸರಕಾರ ರಾಜ್ಯದ್ದು ಎಂದು ಟೀಕಿಸಿದರು.

ಹಾಲಿನ ಮನಸ್ಸುಗಳನ್ನು ವಿರೋಧಿಸುವ ಸರಕಾರ ರಾಜ್ಯದಲ್ಲಿದೆ. ಜಾನುವಾರುಗಳ ಜೊತೆ ನಾವು ವಿಧಾನಸೌಧ ಮುತ್ತಿಗೆಗೆ ಹೋಗುತ್ತೇವೆ ಎಂದು ಪ್ರಕಟಿಸಿದರು. ರೈತರಿಗೆ ಯಡಿಯೂರಪ್ಪನವರು ನೀಡುತ್ತಿದ್ದ 4 ಸಾವಿರ ಮೊತ್ತವನ್ನು ನಿಲ್ಲಿಸಿದ್ದಾರೆ. ಯಂತ್ರಧಾರೆಯ ಡೀಸೆಲ್ ಹಣವನ್ನು ನಿಲ್ಲಿಸಿದ್ದಾರೆ. ರೈತ ವಿದ್ಯಾಸಿರಿ ಸ್ಕಾಲರ್‍ಶಿಪ್ಪನ್ನು ಸ್ಥಗಿತಗೊಳಿಸಿದ್ದಾರೆ ಎಂದು ಟೀಕಿಸಿದರು.

 

ರೈತರಿಗೆ ಕೃಷಿ ಇಲಾಖೆಯ ಸಬ್ಸ್ಸಿಡಿ ಯಂತ್ರಗಳನ್ನೂ ಕೊಡುತ್ತಿಲ್ಲ. 850ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯನವರು ಇದರ ಕುರಿತು ತುಟಿ ಬಿಚ್ಚಿಲ್ಲ ಎಂದು ಆರೋಪಿಸಿದರು. ರೈತರು ದುಡ್ಡಿನ ಆಸೆಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೃಷಿ ಸಚಿವರು ಅತ್ಯಂತ ಅನಾಗರಿಕವಾಗಿ ಮಾತನಾಡಿದ್ದಾರೆ ಎಂದು ಟೀಕಿಸಿದರು. ರೈತರು ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ಹಾಲಿನ ಪ್ರೋತ್ಸಾಹಧನ ನಿಲ್ಲಿಸಿದ್ದೀರಾ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್.ನಡಹಳ್ಳಿ ಅವರು ಮಾತನಾಡಿ, ಬಿಜೆಪಿ, ಯಡಿಯೂರಪ್ಪ ಅವರು ಜಾರಿಗೊಳಿಸಿದ ಎಲ್ಲ ರೈತಪರ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ಸ್ಥಗಿತಗೊಳಿಸಿದೆ ಎಂದು ಆಕ್ಷೇಪಿಸಿದರು. ಹಾಲಿನ ಪ್ರೋತ್ಸಾಹಧನ, ವಿದ್ಯಾಸಿರಿ ಶಿಷ್ಯವೇತನ ಸೇರಿ ಎಲ್ಲ ರೈತಪರ ಯೋಜನೆಗಳನ್ನು ನಿಲ್ಲಿಸಲಾಗಿದೆ ಎಂದು ಟೀಕಿಸಿದರು.

 

ಹಾಲಿನ ಪ್ರೋತ್ಸಾಹಧನ ನಿಲ್ಲಿಸಿ, ಅಧಿಕಾರ, ಮತಕ್ಕೋಸ್ಕರ ಖಜಾನೆಯಲ್ಲಿ ಇರುವ ದುಡ್ಡನ್ನು ಬೇಡದೆ ಇರುವವರಿಗೆಲ್ಲ ಖಾತೆಗೆ ಹಾಕುವ ಸರಕಾರ ಇದು ಎಂದು ದೂರಿದರು. ಹಾಲು ಉತ್ಪಾದಕ ರೈತರು, ರೈತ ಮಹಿಳೆಯರಿಗೆ ವಿಷ ಕೊಡುವ ಕೆಲಸವನ್ನು ಸಿದ್ದರಾಮಯ್ಯರ ಸರಕಾರ ಮಾಡುತ್ತಿದೆ ಎಂದು ತಿಳಿಸಿದರು. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಜಾನುವಾರುಗಳ ಜೊತೆ ಸಾಂಕೇತಿಕ ಹೋರಾಟ ಮಾಡಲಾಗುತ್ತಿದೆ ಎಂದರು.

ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top