ಮೋಜು, ಮಸ್ತಿಯಲ್ಲಿರುವ ರಾಜ್ಯ ಸರಕಾರ: ಎನ್.ರವಿಕುಮಾರ್

ಬೆಂಗಳೂರು: ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ರಾಜ್ಯದಲ್ಲಿ ಬರ ಇಲ್ಲ. ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಇಲ್ಲ ಎಂಬಂತೆ ಸರಕಾರ ಮೋಜು ಮಸ್ತಿಯಲ್ಲಿ ತೊಡಗಿದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಆಕ್ಷೇಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸದನದಲ್ಲಿ ಸೋಮವಾರ ಬೆಂಗಳೂರಿನ ನೀರಿನ ಸಮಸ್ಯೆ ಕುರಿತು ಚರ್ಚೆ ಮಾಡಲಿದ್ದೇವೆ ಎಂದು ತಿಳಿಸಿದರು. ನೀರು, ವಿದ್ಯುತ್ ಸಮಸ್ಯೆ ಇದ್ದರೂ, ಬರಗಾಲ ಕಿತ್ತು ತಿನ್ನುತ್ತಿದ್ದರೂ ಕೂಡ ರೈತರಿಗೆ ಒಂದು ನಯಾಪೈಸೆ ಪರಿಹಾರ ಕೊಟ್ಟಿಲ್ಲ. 2 ಸಾವಿರ ಕೊಟ್ಟು ಕೈತೊಳೆದುಕೊಂಡಿದ್ದಾರೆ ಎಂದು ಅವರು ಟೀಕಿಸಿದರು.

ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಾಗ ರೈತರಿಗೆ ಕೇಂದ್ರದಿಂದ 6 ಸಾವಿರ, ರಾಜ್ಯದಿಂದ 4 ಸಾವಿರ ಸೇರಿ 10 ಸಾವಿರ ಕೊಡುತ್ತಿದ್ದು, ರೈತರಿಗೆ ಸಹಾಯ ಆಗುತ್ತಿತ್ತು. ಕರ್ನಾಟಕ ಸರಕಾರವು ಹಣಕಾಸಿನ ತೊಂದರೆ ಇಲ್ಲವೆಂದು ಹೇಳುತ್ತ ಹೇಳುತ್ತ ಸಚಿವರು ಸೇರಿ 84 ಜನರಿಗೆ ಕ್ಯಾಬಿನೆಟ್ ದರ್ಜೆ ಕೊಟ್ಟಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಕ್ಯಾಬಿನೆಟ್ ದರ್ಜೆ ಕೊಡುವ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದರು.

 

ಒಂದು ಕ್ಯಾಬಿನೆಟ್ ದರ್ಜೆ ಎಂದರೆ ಒಂದು ತಿಂಗಳಿಗೆ 5 ಲಕ್ಷ ಎಂದರೆ 84 ಜನರಿಗೆ ಒಂದು ತಿಂಗಳಿಗೆ ಎಷ್ಟು ಖರ್ಚಾಯಿತು ಎಂದು ಪ್ರಶ್ನಿಸಿದರು. ಸರಕಾರ ಈ ಕುರಿತು ಯೋಚಿಸಬೇಕು ಎಂದ ಅವರು, 34 ಹೊಸ ಇನೋವಾ ಕಾರುಗಳನ್ನು ಖರೀದಿಸಲಾಗಿದೆ ಎಂದು ಹೇಳಿದರು. ಸಿದ್ದರಾಮಯ್ಯನವರ ಮನೆ ನವೀಕರಣಕ್ಕೆ 6.40 ಕೋಟಿ ಖರ್ಚಾದ ಬಗ್ಗೆ ಪತ್ರಿಕೆಯಲ್ಲಿ ನೋಡಿದ್ದೇನೆ ಎಂದು ತಿಳಿಸಿದರು.

ಯಥಾ ರಾಜಾ ತಥಾ ಪ್ರಜಾ..

ಯಥಾ ರಾಜಾ ತಥಾ ಪ್ರಜಾ ಎಂಬಂತೆ ಸಚಿವರು ತಮ್ಮ ಮನೆ, ಕಚೇರಿಗಳನ್ನು ನವೀಕರಿಸಲು ಮುಂದಾಗಿದ್ದಾರೆ. ಹೊಸ ಹೊಸ ಕಾರುಗಳನ್ನು ಖರೀದಿಸುತ್ತಿದ್ದಾರೆ. ನೀವು ಒಂದು ಕಡೆ ದುಡ್ಡಿಲ್ಲದ್ದಕ್ಕಾಗಿ ದೇವಸ್ಥಾನದಿಂದ ಶೇ 10 ಹಣ ಕೊಡಿ ಎಂದು ಕೇಳಲು ಯೋಚಿಸುತ್ತೀರಿ. ಇನ್ನೊಂದು ಕಡೆ ಖರ್ಚು, ಮೋಜು ಮಾಡುತ್ತಿದ್ದೀರಿ ಎಂದು ಎನ್.ರವಿಕುಮಾರ್ ಅವರು ದೂರಿದರು. ಈ ಸರಕಾರದ ನೀತಿ ಏನು? ಏನು ಮಾಡುತ್ತಿದೆ ಈ ಸರಕಾರ? ಎಂದು ಪ್ರಶ್ನಿಸಿದರು.

ಕರ್ನಾಟಕ ಸರಕಾರ ಎಲ್ಲ ಬೆಲೆಗಳನ್ನು ಹೆಚ್ಚು ಮಾಡಿದೆ. ಅಬಕಾರಿಯಂತೂ ಶೇ 30 ಹೆಚ್ಚಾಗಿದೆ. ಹೆಣ್ಮಕ್ಕಳಿಗೆ ಪ್ರತಿ ತಿಂಗಳು 2 ಸಾವಿರ ಕೊಡುವುದಾಗಿ ಹೇಳುತ್ತಾರೆ. ಒಂದು ದಿನಕ್ಕೆ ಒಬ್ಬ ವ್ಯಕ್ತಿ ಒಂದು ಕ್ವಾರ್ಟರ್ ಹೆಚ್ಚು ತೆಗೆದುಕೊಂಡರೂ ಕೂಡ ಒಬ್ಬನು 1,800 ರೂ. ತಿಂಗಳಿಗೆ ಕೊಡಬೇಕಾಗುತ್ತದೆ ಎಂದು ಅವರು ತಿಳಿಸಿದರು. ಏರಿಸಿದ ಬೆಲೆಯಿಂದಲೇ ಸರಕಾರಕ್ಕೆ 1,800 ರೂ. ಬರುತ್ತದೆ ಎಂದು ವಿವರಿಸಿದರು. ಮಹಿಳೆಯರಿಂದ ಕೊಡುವ ದುಡ್ಡು ಇದರಿಂದಲೇ ಬಂತು; ನೀವೇನು ಮಾಡಿದಂತಾಯಿತು ಎಂದು ಕೇಳಿದರು.

ಕೇಂದ್ರ ಸರಕಾರದತ್ತ ಬೆಟ್ಟು ಮಾಡಿ ತೋರಿಸುವ ಈ ಸರಕಾರಕ್ಕೆ ನಾಚಿಕೆ ಆಗಬೇಕು. 1 ಲಕ್ಷದ 5 ಸಾವಿರ ಕೋಟಿ ಸಾಲದ ಬಜೆಟ್ ಮಂಡಿಸಿದ್ದಾರೆ. ಈ ಸರಕಾರವು ಸಾಲ ತೀರಿಸಲು ಸಾಲ ಮಾಡಬೇಕಾಗಿದೆ. ಬಜೆಟ್‍ನಲ್ಲೂ ಹೋಪ್‍ಲೆಸ್ ಬಜೆಟ್ ಕೊಟ್ಟು, ವಿದ್ಯುತ್, ಅಬಕಾರಿ, ಹಾಲು, ದವಸ ಧಾನ್ಯ, ತರಕಾರಿ, ಬೆಲೆ ಏರಿಕೆಗಳ ಜೊತೆಗೆ ನೋಂದಣಿ ದರ ಹೆಚ್ಚಳ, ವಿದ್ಯುತ್ ಕಣ್ಣಾಮುಚ್ಚಾಲೆ ಮಾಡಿದ್ದಾರೆ. ರಾಜ್ಯದಲ್ಲಿ ಈಗ ವಿಧಾನಸಭಾ ಚುನಾವಣೆ ನಡೆದರೂ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತದೆ. ಲೋಕಸಭಾ ಚುನಾವಣೆಯು ಕರ್ನಾಟಕ ಸರಕಾರಕ್ಕೆ ಪಾಠ ಕಲಿಸುವ ಚುನಾವಣೆ ಆಗಲಿದೆ ಎಂದು ಅವರು ವಿಶ್ಲೇಷಿಸಿದರು.

ಬರದ ದಾಹ, ನೀರಿನ ಬೇಗೆ ಎಲ್ಲ ಕಡೆಗಳಲ್ಲಿ ನಾವು ಕಾಣುತ್ತಿದ್ದೇವೆ. ಬೆಂಗಳೂರಿನ ಅನೇಕ ಕಡೆಗಳಲ್ಲಿ ಕುಡಿಯಲು ಕೂಡ ನೀರಿಲ್ಲದೆ ಜನರು ಟ್ಯಾಂಕರ್‍ಗಳ ಮೊರೆ ಹೋಗುತ್ತಿದ್ದಾರೆ. 500 ರೂಪಾಯಿಗೆ ಒಂದು ಟ್ಯಾಂಕರ್ ಸಿಗುತ್ತಿದ್ದ ಜಾಗದಲ್ಲಿ 2,500 ರೂಪಾಯಿಯಿಂದ 3 ಸಾವಿರ ರೂಪಾಯಿಗೆ ಒಂದು ಟ್ಯಾಂಕರ್ ನೀರು ಸಿಗುವಂತಾಗಿದೆ ಎಂದು ವಿವರಿಸಿದರು.

 

ಆದರೆ, ಸರಕಾರ ಕಣ್ತರೆಯುತ್ತಿಲ್ಲ. ಬೋರ್‍ವೆಲ್ ಹಾಕಲು 1 ಸಾವಿರ ಅಡಿ, ಸಾವಿರದ ಇನ್ನೂರು, ಸಾವಿರದ ಐದು ನೂರು ಅಡಿ ವರೆಗೆ ಕೊರೆದರೂ ನೀರು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ನೀರಿನ ಬವಣೆ ಪರಿಹರಿಸಲು ತಕ್ಷಣವೇ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಸರಕಾರವನ್ನು ಆಗ್ರಹಿಸಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top