ಬೆಂಗಳೂರು: ಕರ್ನಾಟಕದಲ್ಲಿ ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 100 ದಿನಗಳನ್ನು ತಲುಪಿದೆ. ಜನರಿಟ್ಟ ನಂಬಿಕೆ, ವಿಶ್ವಾಸಕ್ಕೆ ಈ ಸರಕಾರ ದ್ರೋಹ ಬಗೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ಟೀಕಿಸಿದರು.
ನಗರದಲ್ಲಿ ಇಂದು ರಾಜ್ಯ ಕಾಂಗ್ರೆಸ್ ಸರಕಾರದ 100 ದಿನಗಳ ಆಡಳಿತ ಕುರಿತ ಕಿರು ಹೊತ್ತಗೆಯನ್ನು ಬಿಡುಗಡೆ ಮಾಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಗ್ಯಾರಂಟಿಗಳ ಘೋಷಣೆ ಮಾಡಿತ್ತು. ಭ್ರಷ್ಟಾಚಾರದ ವಿರುದ್ಧ ಪುಂಖಾನುಪುಂಖ ಭಾಷಣ ಮಾಡಿದ್ದರು. ಅಧಿಕಾರಕ್ಕೆ ಬಂದ ಬಳಿಕ 100 ದಿನಗಳಲ್ಲಿ ನೂರಾರು ತಪ್ಪುಗಳನ್ನು ಈ ಸರಕಾರ ಮಾಡಿದೆ ಎಂದು ಆಕ್ಷೇಪಿಸಿದರು. ಗ್ಯಾರಂಟಿ ಯೋಜನೆಗಳಿಗೆ ಮಾನದಂಡಗಳನ್ನು ವಿಧಿಸಿ ಇವತ್ತು ಈ ಸರಕಾರ ಮಾತು ತಪ್ಪಿದೆ ಎಂದು ನುಡಿದರು.
ಇಬ್ಬರು ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಬಂದಾಗ ಅವರ ರಾಜೀನಾಮೆ ಪಡೆಯುವುದರಲ್ಲೂ ವಿಫಲವಾಗಿದೆ. ನಮ್ಮ ಆಡಳಿತ ಇದ್ದಾಗ, ಯಡಿಯೂರಪ್ಪ, ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದಾಗ ಗರಿಷ್ಠ ಬಂಡವಾಳ ಹೂಡಿಕೆ ಬರುತ್ತಿತ್ತು. ಇವತ್ತು ವಿದ್ಯುತ್ ಅಭಾವ, ಅತಿ ಹೆಚ್ಚು ದರದಿಂದ ಹೂಡಿಕೆದಾರರು ವಾಪಸ್ ಹೋಗುತ್ತಿದ್ದಾರೆ. ಒಂದೆಡೆ ವಿದ್ಯುತ್ ಉಚಿತವೆಂದು ಘೋಷಿಸಿ ಅಘೋಷಿತ ವಿದ್ಯುತ್ ಕಡಿತ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಳೆ ಇಲ್ಲ; ರೈತರು ಗಂಟೆಗಟ್ಟಲೆ ಕಾದು ಪಂಪುಗಳನ್ನು ಚಾಲನೆ ಮಾಡುವ ಸ್ಥಿತಿ ಬಂದಿದೆ. ವಿದ್ಯುತ್ ಅಭಾವ ಕಾಡುತ್ತಿದೆ. ಬಜೆಟ್‍ನಲ್ಲಿ ರೈತಪರ ಯೋಜನೆಗಳನ್ನು ಈ ಸರಕಾರ ಘೋಷಿಸಿಲ್ಲ. ರೈತ ಸಮ್ಮಾನ್ ಯೋಜನೆಯಡಿ ಕೇಂದ್ರದ ಮೋದಿಜಿ ಸರಕಾರ 6 ಸಾವಿರ ಮತ್ತು ಯಡಿಯೂರಪ್ಪ- ಬೊಮ್ಮಾಯಿಯವರ ಸರಕಾರಗಳು 4 ಸಾವಿರ ನೀಡುತ್ತಿದ್ದವು. ಆ 4 ಸಾವಿರ ನೀಡುವುದನ್ನು ಈ ಸರಕಾರ ರದ್ದು ಮಾಡಿದೆ ಎಂದು ವಿವರಿಸಿದರು.
ಬೊಮ್ಮಾಯಿಯವರ ದೂರದೃಷ್ಟಿಯ ಯೋಜನೆ ರೈತ ವಿದ್ಯಾನಿಧಿಗೆ ಕತ್ತರಿ ಹಾಕಿದ ರೈತ ವಿರೋಧಿ ಸರಕಾರ ರಾಜ್ಯದ್ದು. ಪಂಚಾಯಿತಿ ಕಚೇರಿಯಿಂದ ಸಿಎಂ ಕಚೇರಿವರೆಗೆ ಭ್ರಷ್ಟಾಚಾರ ಇವತ್ತು ಸದ್ದು ಮಾಡುತ್ತಿದೆ. ಸಿಎಂ ಕಚೇರಿ ಭ್ರಷ್ಟಾಚಾರದ ಬಗ್ಗೆ ಅವರ ಶಾಸಕರೇ ಹೇಳುತ್ತಿದ್ದಾರೆ. ಹಿಂದಿನಿಂದ 2 ಶಕ್ತಿಗಳು ಮುಖ್ಯಮಂತ್ರಿಗಳನ್ನು ನಿಯಂತ್ರಿಸುವ ಬಗ್ಗೆ ಅವರ ಪಕ್ಷದವರೇ ಹೇಳುತ್ತಾರೆ ಎಂದು ನುಡಿದರು.
ಈ ಸರಕಾರವು ದ್ವೇಷದ ರಾಜಕಾರಣ ಮಾಡುತ್ತಿದೆ. ನಮ್ಮ ಸರಕಾರದ ಕಾನೂನುಗಳನ್ನು ರದ್ದು ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಬೊಮ್ಮಾಯಿಯವರ ಸರಕಾರದ ಯೋಜನೆಗಳನ್ನು ನಿಲ್ಲಿಸುವ ಕೆಲಸ ಮಾಡಿದ್ದಾರೆ. ನಮ್ಮ ಕಾರ್ಯಕರ್ತರ ವಿರುದ್ಧ ಸುಳ್ಳು ಆರೋಪ ಹೊರಿಸಿ ಕೇಸು ದಾಖಲಿಸಿ ಜೈಲಿಗೆ ಹಾಕುವ ಕೆಲಸ ನಡೆದಿದೆ ಎಂದು ಟೀಕಿಸಿದರು.
ಸೋಷಿಯಲ್ ಮೀಡಿಯದಲ್ಲಿ ಬರೆದವರನ್ನು ಜೈಲಿಗೆ ಅಟ್ಟುತ್ತಿದ್ದಾರೆ. ಮಾಧ್ಯಮದವರ ಮೇಲೂ ದಬ್ಬಾಳಿಕೆ ನಡೆದಿದೆ. ಇದು ಹಿಂದಿನ ತುರ್ತು ಪರಿಸ್ಥಿತಿಯನ್ನು ನೆನಪಿಸುವಂತಿದೆ. ಕಾನೂನು- ಸುವ್ಯವಸ್ಥೆ ವಿಚಾರದಲ್ಲೂ ಈ ಸರಕಾರ ಸೋತಿದೆ. ಹತ್ತಾರು ಕೊಲೆ ನಡೆದಿದೆ. ಜೈನ ಮುನಿ ಹತ್ಯೆಯಾಗಿದೆ. ಹಿಂದೂ ಜಾಗರಣ ವೇದಿಕೆ ಪ್ರಮುಖರ ಕೊಲೆಯಾಗಿದೆ. ಉಡುಪಿ ಘಟನೆಯನ್ನು ಕ್ಷುಲ್ಲಕವಾಗಿ ಗೃಹಸಚಿವರು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಸರ್ವಾಧಿಕಾರ ಧೋರಣೆಯ ಸರಕಾರ ಇಲ್ಲಿದೆ ಎಂದರು.
ಸಾಮಾಜಿಕ ಜಾಲತಾಣ, ಮಾಧ್ಯಮಕ್ಕೆ ಅಂಕುಶ, ವಾಕ್ ಸ್ವಾತಂತ್ರ್ಯಕ್ಕೆ ದಮನ ನೀತಿ ಪ್ರಾರಂಭವಾಗಿದೆ ಎಂದ ಅವರು, ಅಂಗನವಾಡಿ, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳದ ಭರವಸೆ ಈಡೇರಿಲ್ಲ ಎಂದು ತಿಳಿಸಿದರು. ಸಮರ್ಪಕವಾಗಿ ವೇತನ ನೀಡಲಾಗದ ಸ್ಥಿತಿ ಸರಕಾರದ್ದು ಎಂದು ತಿಳಿಸಿದರು.
ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಹಿಂದೆ ನೀಡಿದ ಅನುದಾನವನ್ನೂ ಬಿಡುಗಡೆ ಮಾಡುತ್ತಿಲ್ಲ. 3 ತಿಂಗಳುಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಬಿಡುಗಡೆ ಆಗಿಲ್ಲ. ಕೈ ಕೊಟ್ಟ ಯೋಜನೆಗಳು, ಹಳಿ ತಪ್ಪಿದ ಆಡಳಿತದ ಕುರಿತು ಜನರ ಮುಂದೆ ಮಾಹಿತಿ ಕೊಡುತ್ತಿದ್ದೇವೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಗೋವಿಂದ ಕಾರಜೋಳ, ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.