ಬೆಂಗಳೂರು: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಇಂದು ನಗರದ ಬಿಎಂಟಿಸಿ ೪ನೇ ಡಿಪೋಗೆ ದಿಢೀರ್ ಭೇಟಿ ನೀಡಿದರು.
ಅವರನ್ನು ಕಂಡ ಸಿಬ್ಬಂದಿ ಹೌಹಾರಿದರು. ತಬ್ಬಿಬ್ಬುಗೊಂಡರು. ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಅಲ್ಲದೆ ಅವರೊಂದಿಗೆ ಸೆಲ್ಫಿ ಕೂಡ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಡಿಪೋಗೆ ಭೇಟಿ ನೀಡುವ ಮೊದಲು ನಟ ರಜನಿಕಾಂತ್ ರವರು ತಾವು ಚಿಕ್ಕನಿಂದ ನೋಡಿ ಆಡಿ ಬೆಳೆದ ಸೀತಾಪತಿ ಆಗ್ರಹಾರದ ಶ್ರೀ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು. ಬೆಂಗಳೂರಿಗೆ ಭೇಟಿ ನೀಡಿರುವ ನಟ ರಜನಿಕಾಂತ್ ಅವರು ತಮ್ಮ ಆತ್ಮೀಯ ಗೆಳೆಯ ಲಾಲ್ ಬಹುದ್ದೂರ್ ಅವರೊಂದಿಗೆ ಎಂದಿನಂತೆ ಸಂತಸದಿಂದ ಬೆಂಗಳೂರು ನಗರದ ವಿವಿಧೆಡೆ ಸುತ್ತಾಡಿ ಸಂಭ್ರಮಿಸಿದ್ದಾರೆ.ಬೆಂಗಳೂರಿನ ಜಯನಗರದ ಟಿ ಬ್ಲಾಕ್‌ನಲ್ಲಿರುವಂತ ೨೬ನೇ ಮುಖ್ಯರಸ್ತೆಯ ಬಿಎಂಟಿಸಿ ಡಿಪೋ-೪ರಲ್ಲಿ ಎಂದಿನಂತೆ ಇಂದು ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲಿಗೆ ಸಾಮಾನ್ಯರಂತೆ ಬಂದಂತ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್, ಡಿಪೋ ಒಳಗೆ ಬರಬಹುದಾ ಎಂಬುದಾಗಿ ಅಲ್ಲಿನ ಸಿಬ್ಬಂದಿಗೆ ಕೇಳಿದ್ದಾರೆ. ಈ ವೇಳೆ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ನೋಡಿ ಅಧಿಕಾರಿಗಳು, ಸಿಬ್ಬಂದಿಗಳಿಗೆ ಕ್ಷಣ ಕಾಲ ಇದು ನಿಜವೋ, ಕನಸೋ ಒಂದೂ ಗೊತ್ತಾಗದಂತೆ ಆಶ್ಚರ್ಯ ಚಕಿತರಾಗಿದ್ದರು.
ಬಳಿಕ ಆತ್ಮೀಯವಾಗಿ ಬಿಎಂಟಿಸಿ ಡಿಪೋ-4ಕ್ಕೆ ಅವರನ್ನು ಬರಮಾಡಿಕೊಂಡು ರಜನಿಕಾಂತ್ ಜತೆ ಕೆಲಹೊತ್ತು ಮಾತುಕತೆ ನಡೆಸಿದರು. ಅಲ್ಲದೇ ಡಿಪೋ-4ರಲ್ಲಿ ಒಂದು ಸುತ್ತು ಹಾಕಿದಂತ ಅವರು, ಅಲ್ಲಿನ ಸಿಬ್ಬಂದಿಯೊಂದಿಗೆ ಪೋಟೋ ಕೂಡ ತೆಗೆಸಿಕೊಂಡಿದ್ದಾರೆ.
ಚಿತ್ರರಂಗ ಪ್ರವೇಶಿಸುವ ಮುನ್ನ ಸಾರಿಗೆ ಸಂಸ್ಥೆಯ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ರಜನಿಕಾಂತ್ ಸೀತಾಪತಿ ಅಗ್ರಹಾರದಲ್ಲಿ ರಾಯರ ದರ್ಶನ ಬಳಿಕ ಬಿಎಂಟಿಸಿ ಬಸ್ ಡಿಪೋಗೆ ಭೇಟಿ ನೀಡಿ ನೌಕರರೊಡನೆ ಕೆಲ ಕಾಲ ಚರ್ಚಿಸಿದರು.