ಬೆಂಗಳೂರು ಎಲ್ಲಾ ಜನ ಸಮುದಾಯದ ಅಭಿವೃದ್ಧಿಯನ್ನು ಕೇಂದ್ರೀಕರಿಸಿರುವ 2023 – 24 ನೇ ಸಾಲಿನ ಬಜೆಟ್ ಬಡವರು, ಮಹಿಳೆಯರು, ಯುವ ಸಮೂಹದಲ್ಲಿ ಹೊಸ ಆಶಾಕಿರಣ ಮೂಡಿಸಿದೆ ಎಂದು ಯುವ ಕಾಂಗ್ರೆಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಏಐಸಿಸಿ ಸದಸ್ಯ ಎಂ.ಎಸ್. ರಕ್ಷಾ ರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರತಿಪಾದಿಸುತ್ತಿರುವ ಸಾರ್ವತ್ರಿಕ ಮೂಲ ಆದಾಯ (Universal basic income] ಪರಿಕಲ್ಪನೆಯನ್ನು ದೇಶದಲ್ಲಿಯೇ ಮೊದಲ ಬಾರಿಗೆ ಅನುಷ್ಠಾನಕ್ಕೆ ತಂದಿದ್ದು, ಅಭಿವೃದ್ಧಿಗೆ ಇದು ಹೊಸ ಆಯಾಮ ಸೃಷ್ಟಿಸಲಿದೆ. ಐದು ಗ್ಯಾರೆಂಟಿ ಯೋಜನೆಗಳಿಂದ 1.30 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ. ಇಂತಹ ಜನಪರ ಕಾರ್ಯಕ್ರಮಕ್ಕೆ 52 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡುತ್ತಿದ್ದು, ದೇಶದ ಇತರೆ ರಾಜ್ಯಗಳಿಗೆ ಇದು ಮಾದರಿಯಾಗಿದೆ. ಶಕ್ತಿ ಯೋಜನೆ ಜನಪ್ರಿಯವಾಗಿದ್ದು, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಯುವ ನಿಧಿ ಕಾರ್ಯಕ್ರಮಗಳನ್ನು ರಾಜಕೀಯ ಇಚ್ಚಾಶಕ್ತಿ ಮೂಲಕ ಜಾರಿಗೊಳಿಸಲಿದ್ದಾರೆ. ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಬಡತನ ನಿರ್ಮೂಲನೆಗೆ ಇದು ನಾಂದಿಯಾಗಲಿದೆ. ನುಡಿದಂತೆ ನಡೆಯುವ ಸಿದ್ದರಾಮಯ್ಯ ಅವರ ಆರ್ಥಿಕ ಶಿಸ್ತು, ಜನಪರ ಕಾಳಜಿ ಇತರೆ ಮುಖ್ಯಮಂತ್ರಿಗಳಿಗೆ ಮಾದರಿಯಾಗಲಿದೆ ಎಂದು ಹೇಳಿದ್ದಾರೆ.
ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ರಕ್ಷಾ ರಾಮಯ್ಯ, ಸೋರಿಕೆಯನ್ನು ತಡೆಗಟ್ಟಿ,ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ, ಕೇಂದ್ರದಿಂದ ದೊರೆಯಬೇಕಾಗಿರುವ ನ್ಯಾಯಯುತ ಪಾಲು ಪಡೆಯುವ ಮೂಲಕ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಅವರು 14 ನೇ ಐತಿಹಾಸಿಕ ಬಜೆಟ್ ಮಂಡಿಸಿದ್ದು, ಈ ಬಜೆಟ್ ಹಿಂದೆಂಗಿಂತ ಹೆಚ್ಚಿನ ಕುತೂಹಲ ಕೆರಳಿಸಿತ್ತು. ಆದರೆ ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಮತ್ತು ನಾರಾಯಣಗುರುಗಳ ಆಶಯವನ್ನು ಸಾಕರಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರು ವಿಶ್ವಾಸದ ಹೆಜ್ಜೆ ಇಟ್ಟಿರುವುದಾಗಿ ಹೇಳಿದ್ದಾರೆ.