ಕೇಂದ್ರ ಓಬಿಸಿ ಪಟ್ಟಿಯಲ್ಲಿ ಲಿಂಗಾಯಿತ ವೀರಶೈವ ಸಮುದಾಯದ ಸೇರ್ಪಡೆಗೆ ಒತ್ತಾಯ

ಬೆಂಗಳೂರು : ಸಾಮಾಜಿಕ, ಆರ್ಥಿಕ ಅಂಶಗಳ ಆಧಾರದ ಮೇಲೆ ಹಿಂದುಳಿದಿರುವ ವೀರಶೈವ ಲಿಂಗಾಯಿತ ಸಮುದಾಯದ ಎಲ್ಲ ಉಪ ಪಂಗಡಗಳನ್ನು ಕೇಂದ್ರ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಪಕ್ಷಾತೀತವಾಗಿ ಪ್ರಯತ್ನ ಮಾಡುವ ಅಗತ್ಯವಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿಂದು ಸಭಾದಿಂದ ಆಯೋಜಿಸಲಾಗಿದ್ದ ನೂತನ ಶಾಸಕರು ಮತ್ತು ಸಚಿವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ವರಿಗೂ ಲೇಸು ಬಯಸುವ ವೀರಶೈವ ಲಿಂಗಾಯಿತ ಸಮಾಜ ಯಾರ ಮೀಸಲಾತಿಯನ್ನೂ ಕಸಿದುಕೊಳ್ಳುವುದಿಲ್ಲ. ಮೀಸಲು ನೀಡುವುದು ಸಾಮಾಜಿಕವಾಗಿ ದುರ್ಬಲರಾದವರಿಗೆ ನೀಡುವ ನ್ಯಾಯವಾಗಿದೆ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ನಮ್ಮ ಸಮುದಾಯದ ಒಂದು ಮಾತೃ ಸಂಸ್ಥೆಯಾಗಿದ್ದು, ಸಮುದಾಯದ ಸರ್ವಾಂಗೀಣ ಏಳಿಗೆಗೆ ಶ್ರಮಿಸುತ್ತಿದೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಾಮಾನ್ಯ ಸಂಘ ಸಂಸ್ಥೆಗಳಂತಲ್ಲ ಇದು ಸಮಾಜದ ಏಳಿಗೆಗೆ ಮುಡಿಪಾದ ಸಂಘಟನೆ ಎಂದರು.

ಇಂತಹ ಅಭಿನಂದನಾ ಸಮಾರಂಭಗಳು ಸನ್ಮಾನಿತರಿಗೆ ತಮ್ಮ ಜವಾಬ್ದಾರಿಯನ್ನು ನೆನಪಿಸುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ಸಮುದಾಯದ ಎಲ್ಲ ಆರ್ಥಿಕ ಬಲಿಷ್ಠರೂ ಸಮುದಾಯದ ಬಡ ಮತ್ತು ದುರ್ಬಲರ ಸಬಲೀಕರಣಕ್ಕಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಸರ್ವರಿಗೂ ಲೇಸು ಬಯಸುವ ಮತ್ತು ಇಡೀ ಜಗತ್ತಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಕೊಟ್ಟ ವೀರಶೈವ ಲಿಂಗಾಯಿತ ಸಮಾಜ ಇಂದು ತನಗೇ ನ್ಯಾಯ ಕೇಳುವ ಹಂತದಲ್ಲಿದೆ. ಇಂದು ಸಮಾಜದ ಹಲವು ಯುವಜನರು ರಾಜ್ಯದಲ್ಲಷ್ಟೇ ಅಲ್ಲ ಇಡೀ ದೇಶದಲ್ಲಿ ಉದ್ಯೋಗ ವಂಚಿರಾಗಿದ್ದಾರೆ, ಶಿಕ್ಷಣ ವಂಚಿತರಾಗಿದ್ದಾರೆ. ಉದ್ಯೋಗ ಅರಸಿ ತಾವು ಹುಟ್ಟಿ ಬೆಳೆದ ಊರು ತೊರೆದು ವಲಸೆ ಹೋಗುತ್ತಿದ್ದಾರೆ. ಅವರೆಲ್ಲರ ಸಂಕಷ್ಟಕ್ಕೆ ನಾವು ಧ್ವನಿಯಾಗಬೇಕು. ಅವರಿಗೆ ನೆರವಾಗಬೇಕು. ಕೇಂದ್ರದಿಂದ ಅವರಿಗೆ ಮೀಸಲು ಸೌಲಭ್ಯ ದೊರಕುವಂತೆ ಮಾಡಬೇಕು ಎಂದರು.

ಎಷ್ಟೋ ಸಮಾಜಗಳು ಶ್ರೀಮಂತ ನಾಗರಿಕತೆ ಇದ್ದರೂ, ಭವ್ಯ ಪರಂಪರೆ ಇದ್ದರೂ ನಾಶವಾಗಿರುವುದನ್ನು ನಾವು ನೋಡಿದ್ದೇವೆ.  ಈ ಆಧುನಿಕ ಯುಗದಲ್ಲಿ ನಾವು ನಮ್ಮ ತನವನ್ನು ಮರೆಯುತ್ತಿದ್ದೇವೆ. ಇದು ಅಪಾಯಕಾರಿ. ನಾವು ಎಷ್ಟೇ ಬೆಳೆದರೂ ನಮ್ಮ ಬೇರು ಮರೆಯಬಾರದು. ನಮ್ಮ ಪರಂಪರೆ ಮರೆಯಬಾರದು ಎಂದರು.

ಶರಣ ಪರಂಪರೆ ಉಳಿಸಿ: 

ಆಧುನಿಕ ಜಗತ್ತಿನಲ್ಲಿ ಇಡೀ ವಿಶ್ವವೇ ಒಂದು ಪುಟ್ಟ ಗ್ರಾಮವಾಗಿ ಪರಿವರ್ತನೆಯಾಗಿದೆ. ಕ್ಷಣ ಮಾತ್ರದಲ್ಲಿ ಜಗತ್ತಿನ ಆಗು ಹೋಗುಗಳು ನಮಗೆ ಬೆರಳ ತುದಿಯಲ್ಲಿ ಲಭಿಸುತ್ತಿವೆ. ಈ ಸನ್ನಿವೇಶದಲ್ಲಿ ಅನ್ಯ ಸಂಸ್ಕೃತಿಯ ವೈಭವಕ್ಕೆ ನಮ್ಮ ಮಕ್ಕಳು ಮರುಳಾಗುತ್ತಿದ್ದಾರೆ. ಅವರಿಗೆ ಭವ್ಯವಾದ ಶರಣ ಸಂಸ್ಕೃತಿ ಪರಂಪರೆಯನ್ನು ತಿಳಿಸಿಹೇಳುವ ಕಾರ್ಯ ಆಗಬೇಕಿದೆ. ಇದನ್ನು ಅರ್ಥಮಾಡಿಕೊಳ್ಳದಿದ್ದರೆ, ನಮ್ಮತನ ಉಳಿಸದಿದ್ದರೆ ಬದುಕಿಗೆ ಅರ್ಥವೂ ಇರುವುದಿಲ್ಲ. ಸಾರ್ಥಕತೆಯೂ ಇರುವುದಿಲ್ಲ ಎಂದು ಈಶ್ವರ ಖಂಡ್ರೆ ಹೇಳಿದರು.

ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಒಗ್ಗಟ್ಟಿಗೆ ಸರ್ವರೂ ಶ್ರಮಿಸಬೇಕು ಎಂದು ಕರೆ ನೀಡಿದರು. ಮಹಾಸಭಾದ ರಾಜ್ಯಾಧ್ಯಕ್ಷ ಡಾ. ಎನ್. ತಿಪ್ಪಣ್ಣ, ಉಪಾಧ್ಯಕ್ಷರು ಪ್ರಭಾಕರ ಕೋರೆ ಹಾಗೂ ಹಿರಿಯ ಮುಖಂಡ ವೀರಣ್ಣ ಮತ್ತಿಕಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರುಗಳಾದ ಎಂ.ಬಿ. ಪಾಟೀಲ್,  ಡಾ. ಶರಣಪ್ರಕಾಶ್ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಶರಣಬಸಪ್ಪ ದರ್ಶನಾಪೂರ್, ಎಸ್.ಎಸ್. ಮಲ್ಲಿಕಾರ್ಜುನ್, ಶಿವಾನಂದ ಎಸ್. ಪಾಟೀಲ್,  ಶಾಸಕರುಗಳಾದ ಲಕ್ಷ್ಮಣ ಸವದಿ, ವಿನಯ್ ಕುಲಕರ್ಣಿ, ಬಿ.ವೈ. ವಿಜಯೇಂದ್ರ ಸೇರಿದಂತೆ ಸಮುದಾಯದ ಅನೇಕ ಜನ ಪ್ರತಿನಿಧಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

Facebook
Twitter
LinkedIn
WhatsApp
Telegram
Email

Leave a Comment

Your email address will not be published. Required fields are marked *

Translate »
Scroll to Top