ಬೆಂಗಳೂರು,ಮಾ,9 : ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ವಿಶೇಷ ಜಾಗೃತಿ ಮತ್ತು ನೋಂದಣಿ ಆಭಿಯಾನ ಆರಂಭಿಸಿದೆ. ಬುಧವಾರ ನಗರದ ಕಾರ್ಮಿಕ ಭವನದ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರು “ಆಜಾದಿಕ ಅಮೃತ ಮಹೋತ್ಸವ್” ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾರ್ಮಿಕ ಇಲಾಖೆ ಕಲ್ಯಾಣ ಮಂಡಳಿ ವತಿಯಿಂದ ಶ್ರಮಿಕ ವರ್ಗದ ಮತ್ತು ಅವರ ಕುಟುಂಬ ವರ್ಗದವರ ಶ್ರೇಯೋಭಿವೃದ್ಧಿಗೆ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಜಾರಿ ಮಾಡುತ್ತಿದೆ. ಈ ಸವಲತ್ತುಗಳನ್ನು ಬಳಸಿಕೊಂಡು ಕಾರ್ಮಿಕರು ದೇಶದ ಪ್ರಗತಿಯಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಪಿಂಚಣಿ, ಬಸ್‌ಪಾಸ್, ಆರೋಗ್ಯ ಸೌಲಭ್ಯ ಸೇರಿದಂತೆ ಸಹಾಯಧನ, ಶ್ರಮಿಕ್ ಸಂಜೀವಿನ, ಕಾರ್ಮಿಕ ಮಕ್ಕಳಿಗೆ ಕೆಪಿಎಸ್‌ಸಿ/ ಯುಪಿಎಸ್‌ಸಿ ತರಬೇತಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಸಚಿವರು ತಿಳಿಸಿದರು. ಪ್ರಸಕ್ತ ವರ್ಷದ ಮುಂಗಡ ಪತ್ರದಲ್ಲೂ ಸಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ಶ್ರಮಿಕ ವರ್ಗದ ಸಂಕ್ಷೇಮಕ್ಕೆ ಹಲವು ಯೋಜನೆಗಳನ್ನು ನೀಡಿರುವುದಕ್ಕೆ ಮುಖ್ಯಮಂತ್ರಿಗಳಿಗೆ ತಾವು ಕೃತಜ್ಞತೆ ಅರ್ಪಿಸುತ್ತಿರುವುದಾಗಿ ಸಚಿವ ಹೆಬ್ಬಾರ್ ತಿಳಿಸಿದರು.

ರಾಜ್ಯದಾದ್ಯಂತ ಈ ಜಾಗೃತಿ ಅಭಿಯಾನ ಇದೇ ೧೩ರವರೆಗೆ ನಡೆಯಲಿದ್ದು, ವ್ಯಾಪಕ ಪ್ರಚಾರ ಮತ್ತು ಅಭಿಯಾನಗಳ ಮೂಲಕ ಕಾರ್ಮಿಕರಿಗೆ ಇಲಾಖೆ ನೀಡುತ್ತಿರುವ ಸವಲತ್ತುಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ನೋಂದಣಿಗೆ ಪ್ರೇರೇಪಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷ, ಕಾರ್ಯದರ್ಶಿ ಎಂ.ಪಿ. ಗುರುಪ್ರಸಾದ್, ಜಂಟಿ ಕಾರ್ಯದರ್ಶಿ ಶಿವಪುತ್ರ ಸೇರಿದಂತೆ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಶ್ರಮಿಕ ವರ್ಗದವರು ಉಪಸ್ಥಿತರಿದ್ದರು.

ಕಲ್ಯಾಣ ಮಂಡಳಿ ನೌಕರರಿಗೆ ನೀಡುತ್ತಿರುವ ಸವಲತ್ತುಗಳು:
ಪಿಂಚಣಿ ಸೌಲಭ್ಯ, ಕುಟುಂಬ ಪಿಂಚಣಿ ಸೌಲಭ್ಯ, ದುರ್ಬಲತೆ ಪಿಂಚಣಿ, ಕನ್ನಡಕ, ಶ್ರವಣ ಯಂತ್ರ, ಕೃತಕ ಕೈಕಾಲು ಮತ್ತು ಗಾಲಿ ಕುರ್ಚಿ, ಟ್ರೆöÊನಿಂಗ್-ಕಮ್-ಟೂಲ್‌ಕಿಟ್ ಸೌಲಭ್ಯ (ಶ್ರಮ ಸಾಮರ್ಥ್ಯ), ಶ್ರಮ ಸಂಸಾರ ಸಾಮರ್ಥ್ಯ ತರಬೇತಿ ಸೌಲಭ್ಯ, ವಸತಿ ಸೌಲಭ್ಯ (ಕಾರ್ಮಿಕ ಗೃಹ ಭಾಗ್ಯ), ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್), ಶಿಶು ಪಾಲನಾ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಹಾಯಧನ (ಕಲಿಕೆ ಭಾಗ್ಯ), ವೈದ್ಯಕೀಯ ಸಹಾಯಧನ (ಕಾರ್ಮಿಕ ಆರೋಗ್ಯ ಭಾಗ್ಯ), ಅಪಘಾತ ಪರಿಹಾರ, ಮದುವೆ ಸಹಾಯಧನ (ಗೃಹ ಲಕ್ಷ್ಮೀ ಬಾಂಡ್), ಬಸ್ ಪಾಸ್ ಸೌಲಭ್ಯ, ತಾಯಿ ಮಗು ಸಹಾಯ ಹಸ್ತ, ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ).
