ಪ್ರಕೃತಿ ಚಿಕಿತ್ಸೆ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿನ ಅಪೂರ್ವ ಕೆಲಸಗಳಿಗಾಗಿ ಪದ್ಮಭೂಷಣ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಸೀತಾರಾಮ್ ಜಿಂದಾಲ್

ಹೆಸರಾಂತ ಲೋಕೋಪಕಾರಿ ಮತ್ತು ದಾರ್ಶನಿಕ, ಡಾ. ಸೀತಾರಾಮ್ ಜಿಂದಾಲ್, ಆರೋಗ್ಯ ಮತ್ತು ಶಿಕ್ಷಣದಲ್ಲಿನ ಪರಿವರ್ತನಕಾರಿ ಕಾರ್ಯಗಳಿಂದ ಗುರುತಿಸಲ್ಪಟ್ಟಿದ್ದಾರೆ

 

ಬೆಂಗಳೂರು : ಸಮಾಜಸೇವೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಜನಪ್ರಿಯ ಹೆಸರಾಗಿರುವ ಡಾ. ಸೀತಾರಾಮ್ ಜಿಂದಾಲ್ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅವರ ಅಪ್ರತಿಮ ಸಮಾಜಸೇವೆ ಕೆಲಸಗಳಿಗೆ, ವಿಶೇಷವಾಗಿ ಪ್ರಕೃತಿ ಚಿಕಿತ್ಸೆ ಕ್ಷೇತ್ರದಲ್ಲಿನ ಅವರ ಮಹತ್ವದ ಕೊಡುಗೆಗಳ ಕಾರಣಕ್ಕೆ ಈ ಪುರಸ್ಕಾರವು ಪ್ರಾಪ್ತವಾಗಿದೆ. ಡಾ. ಜಿಂದಾಲ್ ಅವರ ಔಷಧ ರಹಿತ ಚಿಕಿತ್ಸೆಗೆ ಮತ್ತು ಜಿಂದಾಲ್ ನೇಚರ್ಕ್ಯೂರ್ ಇನ್ಸ್ಟಿಟ್ಯೂಟ್ (ಜೆಎನ್ಐ) ಸ್ಥಾಪನೆಗೆ ಅವರಿಗೆ ಈ ಗೌರವಾನ್ವಿತ ಮನ್ನಣೆ ಸಂದಿದೆ.

1932ರಲ್ಲಿ ಹರಿಯಾಣದ ನಲ್ವಾ ಎಂಬ ದೂರದ ಹಳ್ಳಿಯಲ್ಲಿ ಜನಿಸಿದ ಡಾ. ಜಿಂದಾಲ್ ಅವರು ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಕಿಬ್ಬೊಟ್ಟೆಯ ಕ್ಷಯರೋಗಕ್ಕೆ ತುತ್ತಾದರು. ಅಲ್ಲಿಂದ ಅವರ ನೇಚರ್ಕ್ಯೂರ್ ಪ್ರಯಾಣ ಆರಂಭವಾಯಿತು. ಗುಣಪಡಿಸಲಾಗದಂತಹ ಅತೀವ ಸಂಕಷ್ಟದ ಸ್ಥಿತಿಯನ್ನು ಎದುರಿಸಿದ ಅವರು ಕಡೆಗೆ ಸಣ್ಣ ನೇಚರ್ಕ್ಯೂರ್ ಕ್ಲಿನಿಕ್ ಆಶ್ರಯ ಪಡೆದರು. ಅಲ್ಲಿ ಉಪವಾಸ, ಎನಿಮಾಗಳು ಮತ್ತು ಇತರ ಅಸಾಂಪ್ರದಾಯಿಕ ವಿಧಾನಗಳ ಮೂಲಕ ಗುಣಮುಖರಾದರು. ಈ ವಿಶಿಷ್ಟ ಅನುಭವವು ಪ್ರಕೃತಿ ಚಿಕಿತ್ಸೆ ಮತ್ತು ಯೋಗದಲ್ಲಿ ಅವರಿಗೆ ಅಚಲವಾದ ನಂಬಿಕೆಯನ್ನು ಹುಟ್ಟುಹಾಕಿತು.

ಸಮಗ್ರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆಸ್ಪತ್ರೆಯನ್ನು ಸ್ಥಾಪಿಸುವ ದೂರದೃಷ್ಟಿಯಿಂದ ಡಾ. ಜಿಂದಾಲ್ 1977-79ರಲ್ಲಿ ಬೆಂಗಳೂರಿನ ಹೊರವಲಯದಲ್ಲಿ ವಿಶಾಲವಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡರು. ಇದು ಜೆಎನ್ಐನ ಆರಂಭ ಎಂದೇ ಗುರುತಿಸಲ್ಪಟ್ಟಿದೆ. ಜೆಎನ್ಐಯು ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್ (ಜಎಎಲ್)ನಿಂದ ಪಡೆದ ಉದಾರ ಧನಸಹಾಯದಿಂದ ರಚಿಸಿದ ಸಂಶೋಧನಾ ವಿಭಾಗವನ್ನು ಹೊಂದಿದೆ. ಅದು ಪ್ರಕೃತಿ ಚಿಕಿತ್ಸೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಡಾ. ಜಿಂದಾಲ್ ಅವರ ಬದ್ಧತೆಗೆ ಸಾಕ್ಷಿಯಾಗಿದೆ.

 

ಆ ಸಮಯದಲ್ಲಿ ಪ್ರಚಲಿತದಲ್ಲಿದ್ದ ಸಾಂಪ್ರದಾಯಿಕ ಪ್ರಕೃತಿ ಚಿಕಿತ್ಸೆಯ ಚಿಕಿತ್ಸೆಗಳಿಗೆ ಸಂಪೂರ್ಣ ವ್ಯತಿರಿಕ್ತವಾಗಿ ಡಾ. ಜಿಂದಾಲ್ ಈ ವಿಜ್ಞಾನವನ್ನು ಆಧುನೀಕರಿಸುವ ಮತ್ತು ಆವಿಷ್ಕರಿಸುವ ಕಾರ್ಯ ಪ್ರಾರಂಭಿಸಿದರು. ಸಾಂಪ್ರದಾಯಿಕ ಪ್ರಕೃತಿ ಚಿಕಿತ್ಸಾ ಪದ್ಧತಿಗಳಲ್ಲಿ ಅಭಿವೃದ್ಧಿಯ ಕೊರತೆಯನ್ನು ಗುರುತಿಸಿ, ಅವರು ಔಷಧರಹಿತ ಚಿಕಿತ್ಸೆಗಳನ್ನು ಒದಗಿಸಲು ಮತ್ತು ಹೆಚ್ಚು ಹೆಚ್ಚು ಬಳಸುವಂತೆ ಮಾಡುವ ನಿಟ್ಟಿನಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡರು. 1969ರಲ್ಲಿ ಸ್ಥಾಪಿತವಾದ ಎಸ್ ಜೆ ಫೌಂಡೇಶನ್, ಅವರ ದಾನ ಕಾರ್ಯಗಳಿಗೆ ಆರ್ಥಿಕ ಆಧಾರಸ್ತಂಭವಾಯಿತು. ಅದು ಸರ್ಕಾರ ಅಥವಾ ಇತರ ವ್ಯಕ್ತಿಗಳಿಂದ ನೆರವನ್ನು ಪಡೆಯದೆ, ಜೆಎಎಲ್‘ನ ಕೊಡುಗೆಗಳ ಮೇಲೆ ಮಾತ್ರ ಅವಲಂಬಿತವಾಗಿತ್ತು.

ಅಸ್ತಮಾ, ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ ಮತ್ತು ಕೆಲವು ಕ್ಯಾನ್ಸರ್ ಪ್ರಕರಣಗಳು ಸೇರಿದಂತೆ ವಿವಿಧ ಕಾಯಿಲೆಗಳ ಚಿಕಿತ್ಸೆಗಾಗಿ ವಿಶೇಷ ವಿಶ್ವ ದರ್ಜೆಯ ಸೌಲಭ್ಯವಾದ ಜೆಎನ್ಐ ಅನ್ನು ಸ್ಥಾಪಿಸಿದ ಡಾ. ಜಿಂದಾಲ್ ಅವರ ದಣಿವರಿಯದ ಪ್ರಯತ್ನಗಳು ಔಷಧರಹಿತ ಚಿಕಿತ್ಸೆ ಕ್ಷೇತ್ರದಲ್ಲಿ ಗಣನೀಯವಾದ ಪ್ರಭಾವವನ್ನು ಬೀರಿದೆ. ಆ ಇನ್ ಸ್ಟಿಟ್ಯೂಟ್ 550 ಹಾಸಿಗೆಗಳ ಹೆಗ್ಗಳಿಕೆ ಹೊಂದಿದ್ದು, ತಮ್ಮ ಆರೋಗ್ಯ ಕಾಳಜಿಗಾಗಿ ಔಷಧ-ಮುಕ್ತ ಪರ್ಯಾಯ ಚಿಕಿತ್ಸೆಗಳನ್ನು ಬಯಸುವವರಿಗೆ ಭರವಸೆಯ ದಾರಿದೀಪವಾಗಿದೆ.

ಜೆಎನ್ಐ ಜೊತೆಗೆ, ಡಾ. ಜಿಂದಾಲ್ ಹಲವಾರು ದತ್ತಿ ಚಟುವಟಿಕೆಗಳಿಗೆ ನೆರವಾಗಿದ್ದಾರೆ. ಆ ಮೂಲಕ ಸಾಮಾಜಿಕ ಸುಧಾರಣೆದೆಡೆಗಿನ ಅವರ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಅಲೋಪತಿ ಆಸ್ಪತ್ರೆಗಳು, ಶಾಲೆಗಳು ಮತ್ತು ಕಾಲೇಜುಗಳ ಸ್ಥಾಪನೆ, ಗ್ರಾಮೀಣಾಭಿವೃದ್ಧಿ ಉಪಕ್ರಮಗಳು, ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಗ್ರಾಮಗಳ ದತ್ತು ಮತ್ತು ಆರೋಗ್ಯ ಮತ್ತು ಶಿಕ್ಷಣದಲ್ಲಿ ದಣಿವರಿಯಿಲ್ಲದೆ ಕೆಲಸ ಮಾಡುವ ವಿವಿಧ ಎನ್ಜಿಓಗಳಿಗೆ ಅವರು ನೆರವು ನೀಡಿದ್ದಾರೆ.

ಡಾ. ಜಿಂದಾಲ್ ಅವರ ಲೋಕೋಪಕಾರಿ ಪ್ರಯತ್ನಗಳು ಪ್ರಕೃತಿ ಚಿಕಿತ್ಸೆಯ ಆಚೆಗೂ ವಿಸ್ತರಿಸಿವೆ. ಅವರ ಹುಟ್ಟೂರಾದ ನಲ್ವಾದಲ್ಲಿ ಎಂಟು ದತ್ತಿ ಘಟಕಗಳ ಸ್ಥಾಪನೆ ಮಾಡಿದ್ದಾರೆ. ಅವು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಹಳಷ್ಟು ಜನಸಂಖ್ಯೆಗೆ ಪ್ರಯೋಜನವನ್ನು ಒದಗಿಸುತ್ತಿವೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಬದ್ಧವಾಗಿರುವ ಎನ್ಜಿಓಗಳ ಮೂಲಕ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಆರ್ಥಿಕ ಬೆಂಬಲ ನೀಡುವ ಅವರ ಕೆಲಸಗಳಿಂದ ಸಮಾಜ ಕಲ್ಯಾಣದ ಅವರ ಕನಸು ತಿಳಿಯಬಹುದಾಗಿದೆ.

ಡಾ. ಜಿಂದಾಲ್ ಅವರ ಕೆಲಸಗಳ ಪರಿಣಾಮವು ಜೆಎನ್ಐಯನ್ನು ಮೀರಿದ್ದಾಗಿದೆ. ಅವರು ಪ್ರಕೃತಿ ಚಿಕಿತ್ಸೆ ಮತ್ತು ಯೋಗಕ್ಕೆ ಒತ್ತು ನೀಡಿರುವುದು ಜಾಗತಿಕವಾಗಿ ಲಕ್ಷಾಂತರ ಜನರ ಜೀವನ ಪರಿವರ್ತಿಸಿದೆ. ನಿರೋಧಕ ಚಿಕಿತ್ಸೆಯಲ್ಲಿನ ಅವರ ಬದ್ಧತೆ ಮತ್ತು ಔಷಧಿಗಳ ಅಡ್ಡ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಇತ್ಯಾದಿಗಳು ಹಾಗು ಪ್ರಕೃತಿ ಚಿಕಿತ್ಸೆಯು ಅಲೋಪತಿ ಆಸ್ಪತ್ರೆಗಳ ಮೇಲಿನ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂಬ ಅವರ ನಂಬಿಕೆಯೊಂದಿಗೆ ಹೊಂದಿಕೆಯಾಗುತ್ತದೆ.

ತನ್ನ ಪ್ರಯಾಣದ ಉದ್ದಕ್ಕೂ, ಡಾ. ಜಿಂದಾಲ್ ಹಲವಾರು ಆವಿಷ್ಕಾರಗಳು ಮತ್ತು ಚಿಕಿತ್ಸೆಗಳನ್ನು ಪರಿಚಯಿಸಿದ್ದಾರೆ. ಹಲವಾರು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಸರಳವಾದ ಹೊಟ್ಟೆ ಪ್ಯಾಕ್(Abdomen pack) ಗಳಿಂದ ಹರ್ಬಲ್ ಟೀಗಳು, ಬೆನ್ನುಮೂಳೆಯ ಸ್ನಾನದ ತೊಟ್ಟಿಗಳು(ಸ್ಪೈನಲ್ ಬಾಟ್ ಟಬ್ ಗಳು) ಮತ್ತು ಶೀತ ಮತ್ತು ಬಿಸಿ ರಿಫ್ಲೆಕ್ಸೋಲಜಿ (reflexology) ಟ್ರ್ಯಾಕ್ಗಳವರೆಗಿನ ಅವರ ಕೊಡುಗೆಗಳು ಪ್ರಕೃತಿ ಚಿಕಿತ್ಸಾ ಕ್ಷೇತ್ರದ ವಿಸ್ತಾರವನ್ನು ಮತ್ತಷ್ಟು ಹೆಚ್ಚಿಸಿದೆ.

ಅವರ ದೂರದೃಷ್ಟಿಯ ನಾಯಕತ್ವ ಮತ್ತು ಅಪಾರ ಕೊಡುಗೆಗಳನ್ನು ಗುರುತಿಸಿ, ಡಾ. ಜಿಂದಾಲ್ ಅವರು ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಚಂದ್ರಶೇಖರ್, ಐ.ಕೆ ಗುಜ್ರಾಲ್, ಎಚ್.ಡಿ. ದೇವೇಗೌಡ, ಉಪಪ್ರಧಾನಿ ದೇವಿಲಾಲ್ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳಿಂದ ಗೌರವ ಪುರಸ್ಕಾರಗಳನ್ನು ಪಡೆದಿದ್ದಾರೆ.

ಸಮಾಜದ ಒಳಿತಿಗಾಗಿ ಡಾ. ಜಿಂದಾಲ್ ಅವರ ನಿರಂತರ ಅನ್ವೇಷಣೆಯು ಆರೋಗ್ಯ ರಕ್ಷಣೆಯನ್ನು ಮೀರಿ ವಿಸ್ತರಿಸಿದೆ. ಅವರು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್)ಗಾಗಿ ಅವರು ದೊಡ್ಡ ಧ್ವನಿಯಾಗಿದ್ದಾರೆ. ಬಡತನವನ್ನು ತೊಡೆದುಹಾಕಲು ತಮ್ಮ ಲಾಭದ ಒಂದು ಭಾಗವನ್ನು ವಿನಿಯೋಗಿಸಲು ಕೈಗಾರಿಕೋದ್ಯಮಿಗಳನ್ನು ಒತ್ತಾಯಿಸಿದ್ದಾರೆ. ಕಡ್ಡಾಯ ಸಿಎಸ್ಆರ್ ಪರ್ಸಂಟೇಜ್ ಹೆಚ್ಚಿಸಲು ಸರ್ಕಾರದೊಂದಿಗಿನ ಅವರ ನಿರಂತರ ಹೋರಾಟವು ಸಮಾಜ ಕಲ್ಯಾಣ ಕುರಿತ ಅವರ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

 

ಡಾ. ಸೀತಾರಾಮ್ ಜಿಂದಾಲ್ ಅವರ ಜೀವನ ಮತ್ತು ಕಾರ್ಯಗಳು, ವ್ಯವಹಾರದ ಯಶಸ್ಸು ಮತ್ತು ಮಾನವತ್ವಕ್ಕೆ ಸಹಾನುಭೂತಿಯುಳ್ಳ ಸೇವೆಯ ಸಾಮರಸ್ಯದ ಮಿಶ್ರಣವನ್ನು ಸೂಚಿಸುತ್ತದೆ. ಪ್ರಕೃತಿ ಚಿಕಿತ್ಸೆ ಮತ್ತು ಲೋಕೋಪಕಾರ ಕುರಿತಾದ ಅವರ ಬದ್ಧತೆಯು ಆರೋಗ್ಯ ಮತ್ತು ಸಮಾಜ ಸುಧಾರಣೆಯ ಕ್ಷೇತ್ರದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ ಮತ್ತು ಅವರನ್ನು ಪದ್ಮಭೂಷಣ ಪ್ರಶಸ್ತಿಗೆ ಅರ್ಹರನ್ನಾಗಿ ಮಾಡಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top