ಬಳ್ಳಾರಿ ನೂತನ ಮೇಯರ್ ಆಗಿ ಶ್ವೇತಾ ಸೋಮು ಆಯ್ಕೆ

ಬಳ್ಳಾರಿ : ಕಳೆದ ತಿಂಗಳಲ್ಲೇ ನಡೆಯಬೇಕಿದ್ದ ಮೇಯರ್ ಚುನಾವಣೆಯು ಕೆಲ ಕಾರಣಾಂತರಗಳಿಂದ ಎರಡು ಬಾರಿ ಮುಂದೂಡಲಾಗಿತ್ತು. ಈ ಬಾರಿಯೂ ಮತ್ತೆ ಮುಂದೂಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ನಿನ್ನೆಯಷ್ಟೇ ಮೇಯರ್ ಆಯ್ಕೆಯ ಸಂಬಂಧ ಕಾಂಗ್ರೆಸ್ ಹಿರಿಯ ನಾಯಕರು ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಂಡಿದ್ದರು. ಅದರಂತೆಯೇ ಇಂದು ನಡೆದ ಚುನಾವಣೆಯಲ್ಲಿ  ಮೇಯರ್ ‍ಆಗಿ ಬಿ.ಶ್ವೇತಾ ಅವರು ಆಯ್ಕೆ ಆಗಿದ್ದಾರೆ.

ಮೇಯರ್ ಸ್ಥಾನಕ್ಕೆ ಹಲವರು ಆಕಾಂಕ್ಷಿಗಳು ಇದ್ದರು. ಅದರಲ್ಲಿ ಪ್ರಮುಖವಾಗಿ ಮಿಂಚು ಶ್ರೀನಿವಾಸ್, ಕುಬೇರಾ, ಬಿ.ಶ್ವೇತಾ, ಹಾಗೆಯೇ ಹನುಮಂತು ಗುಡಿಗಂಟಿ ಅವರು ಕೂಡ ಮೇಯರ್ ಸ್ಥಾನದ ಆಕಾಂಕ್ಷಿಯಾಗಿದ್ದರು. ಇವರುಗಳ ನಡುವೆಯೇ ಬಣಗಳು ಕೂಡ ಏರ್ಪಟ್ಟಿದ್ದವು. ಹಾಗಾಗಿಯೇ ಕಳೆದ ಎರಡು ಬಾರಿಯೂ ಚುನಾವಣಾ ಪ್ರಕ್ರಿಯೆ ನಡೆದಿರಲಿಲ್ಲ.  ಅಂತೂ ಇಂದು ಮೇಯರ್ ಆಯ್ಕೆಯ ಚುನಾವಣೆಗೆ ತೆರೆ ಬಿದ್ದಿದ್ದು, ಶ್ವೇತಾ ಅವರು ಮೇಯರ್ ಆಗಿ ಆಯ್ಕೆ ಆಗಿ ಗೆಲುವಿನ ನಗೆ ಬೀರಿದ್ದಾರೆ.

 

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು, ವಿವಿಧ ಕಾರಣಗಳಿಂದ ಈ ಹಿಂದೆ ಚುನಾವಣೆ ಮುಂದೂಡಲಾಗಿತ್ತು. ಆದರೆ ಇದೀಗ ಸುಗಮವಾಗಿ ಚುನಾವಣೆ ನಡೆಸಿದ್ದೇವೆ. ಮೇಯರ್ ಆಗಿ ಬಿ.ಶ್ವೇತಾ ಅವರನ್ನು ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಸದಸ್ಯರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ಒಗ್ಗಟ್ಟಾಗಿಯೇ ಇದ್ದಾರೆ. ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್‍ ಸೇರಿದಂತೆ ಇನ್ನಿತರೆ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top