ಗನ್ ತೋರಿಸಿ ಚಿನ್ನಾಭರಣ ಕಿತ್ತು ಪರಾರಿ

ದೇವನಹಳ್ಳಿ ,ಜನವರಿ,,18 : ಪಟ್ಟಣದ ಜೂನಿಯರ್ ಕಾಲೇಜಿನ ಮುಂಭಾಗದಲ್ಲಿರುವ ಖಾಸಗಿ ಕ್ಲಿನಿಕ್ ವೈದ್ಯ ಡಾ.ರಾಜಕುಮಾರ್‌ ಅವರ ಮನೆಗೆ ಸೋಮವಾರ ರಾತ್ರಿ 8:45 ರ ಸಮಯಕ್ಕೆ 4 ಮಂದಿ ಅಪರಿಚಿತರು ಮನೆಗೆ ನುಗ್ಗಿ ಮನೆಯಲ್ಲಿದ್ದವರಿಗೆ ಗನ್ ಹಾಗೂ ಚಾಕು ತೋರಿಸಿ , ಚಿನ್ನ ಹಾಗೂ ಹಣವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಹೆಚ್ಚು ಜನಸಂದಣಿ ಇದ್ದರೂ ಮನೆಗೆ ನುಗ್ಗಿರುವ ದುಷ್ಕರ್ಮಿಗಳು , ಮನೆಯಲ್ಲಿದ್ದ ವೈದ್ಯನ ಪತ್ನಿ , ಪುತ್ರಿ , ಹಾಗೂ ಮೊಮ್ಮಗನಿಗೆ ಗನ್ ತೋರಿಸಿ , ವೈದ್ಯರ ಪತ್ನಿ ಬಳಿಯಿದ್ದ 60 ಗ್ರಾಂ ಚಿನ್ನದ ಸರ , ಪುತ್ರಿಯ ಕತ್ತಿನಲ್ಲಿದ್ದ 90 ಗ್ರಾಂ ಚಿನ್ನದ ಸರ, ಬಳೆಗಳು ಹಾಗೂ 5 ಸಾವಿರ ರೂ ನಗದು ಕಸಿದು, ಪರಾರಿಯಾಗಿದ್ದಾರೆ. ಮಾಸ್ಕ್ ಧರಿಸಿಕೊಂಡು ಮನೆಯೊಳಗೆ ನುಗ್ಗಿದ್ದ ಮೂರು ಮಂದಿ ಹಿಂದಿ ಹಾಗೂ ಇಂಗ್ಲಿಷ್ ಭಾಷೆ ಮಾತನಾಡುತ್ತಿದ್ದರು. ಹಣ ಎಷ್ಟಿದೆ ಕೊಡಿ ಎಂದು ಒತ್ತಾಯಿಸಿದರು. ಜೋರಾಗಿ ಕೂಗಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದರು . ಸಿನಮೀಯ ರೀತಿಯಲ್ಲಿ ಗನ್ ಹಾಗೂ ಚಾಕು ತೋರಿಸಿ ಪರಾರಿಯಾದರು ಎಂದು ಕುಟುಂಬದವರು ಘಟನೆಯ ಕುರಿತ ಎಲ್ಲಾ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ.

ಅಪರಿಚಿತರ ಚಹರೆಗಳ ಕುರಿತು ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಬೆಂಗಳೂರು ಗ್ರಾಮಾಂತರ ಎಸ್ ಪಿ ವಂಶಿಕೃಷ್ಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಮಾತನಾಡಿ, ರಾತ್ರಿ 8 , 8:30 ರ ಸಮಯವಾದ್ದರಿಂದ ವೈದ್ಯರ ಮೊಮ್ಮಗ ಲ್ಯಾಬ್ ಸಿಬ್ಬಂದಿಯವರು ಸಾಮಾನ್ಯವಾಗಿ ಬಂದಿರುವ ಸಮಯ ಎಂದು ಮನೆ ಬಾಗಿಲು ತೆಗೆದಿದ್ದಾನೆ. ಆದರೆ ಅಚಾನಕ್ಕಾಗಿ ಗನ್ ತೋರಿಸಿ ಒಳ ನುಗ್ಗಿದ ದರೋಡೆಕೋರರು ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರ, ಕೈಯಲ್ಲಿದ್ದ ಬಳೆಗಳು, ಕೈಬೆರಳಿನಲ್ಲಿ ಇದ್ದ ಉಂಗುರ, 5 ಸಾವಿರ ಹಣ ಕಸಿದು ತಕ್ಷಣ ಪರಾರಿಯಾಗಿದ್ದಾರೆ. ರಾತ್ರಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದ್ದು, ಕಳ್ಳರ ಚಹರೆ ಗುರುತಿಸಲು ಚಿತ್ರ ಬಿಡಿಸುವವರು ಇಂದು ಬರಲಿದ್ದಾರೆ. ಇಂತಹ ಸರಗಳ್ಳರ ಗುಂಪನ್ನು ಈ ಹಿಂದೆ ಹಿಡಿದು ಬಂಧಿಸಿದ್ದು, ನಮ್ಮ ತಂಡ ಚುರುಕಾಗಿ ಕೆಲಸ ಮಾಡಿ ಈ ಪ್ರಕರಣವನ್ನು ಶೀಘ್ರವಾಗಿ ಬೇಧಿಸಲಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಸಿ ಟಿವಿ ಕ್ಯಾಮೆರಾ ಇರುವುದನ್ನು ಪರಿಶೀಲಿಸಲಾಗುತ್ತಿದೆ. ದೇವನಹಳ್ಳಿ ಅಥವಾ ಸುತ್ತಮುತ್ತ ಇಂತಹ ಪ್ರಕರಣ ಸಂಭವಿಸಿರುವ ಬಗ್ಗೆಯೂ ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಕೋಟ್:
” ಕಳೆದ ಬಾರಿ 13 ಸರಗಳ್ಳತನದ ಪ್ರಕರಣ ಬೇಧಿಸಿದ್ದು, ಅದರಲ್ಲಿ ವಿಜಯಪುರ ಮತ್ತು ಚನ್ನರಾಯಪಟ್ಟಣ ದಲ್ಲಿ ಆದ ಪ್ರಕರಣಗಳನ್ನು ಕಂಡು ಹಿಡಿದು ಕಳ್ಳರನ್ನು ಬಂಧಿಸಿದ್ದೇವೆ. ನಮ್ಮ ತಂಡ ಕಳ್ಳರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು, ಈ ಪ್ರಕರಣದ ಆರೋಪಿಗಳು ಶೀಘ್ರ ಪತ್ತೆಯಾಗುವ ಭರವಸೆ ಇದೆ.”

  • ವಂಶಿಕೃಷ್ಣ, ಎಸ್ ಪಿ, ಬೆಂಗಳೂರು ಗ್ರಾಮಾಂತರ

Leave a Comment

Your email address will not be published. Required fields are marked *

Translate »
Scroll to Top