ಬಿಜೆಪಿಗೆ ಹೋಗಲ್ಲ ಅಂದಿದ್ದ ಶೆಟ್ಟರ್ ಅವರು ಯಾಕೆ ಹೋಗಿದ್ದಾರೋ ಗೊತ್ತಿಲ್ಲ, ಇದು ಅವರ ಆತ್ಮಸಾಕ್ಷಿಗೆ ಬಿಟ್ಟ ವಿಚಾರ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು : ಜಗದೀಶ್ ಶೆಟ್ಟರ್ ಅವರು ನಿನ್ನೆ ಕೂಡ ಬಿಜೆಪಿಗೆ ಹೋಗುವುದಿಲ್ಲ ಎಂದಿದ್ದರು. ಇಂದು ಯಾಕೆ ಬಿಜೆಪಿ ಸೇರಿದ್ದಾರೋ, ಅವರಿಗೆ ಯಾವ ಒತ್ತಡವಿತ್ತೋ ಗೊತ್ತಿಲ್ಲ. ಇದು ಅವರ ಆತ್ಮಸಾಕ್ಷಿಗೆ ಬಿಟ್ಟ ವಿಚಾರಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಅವರು ಮತ್ತೆ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕೆಪಿಸಿಸಿ ಕಚೇರಿ ಬಳಿ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:

ಮತ್ತೆ ನನ್ನನ್ನು ಬಿಜೆಪಿಗೆ ವಾಪಸ್ ಬರುವಂತೆ ತಮ್ಮ ಕ್ಷೇತ್ರದ ನಾಯಕರು, ಕಾರ್ಯಕರ್ತರ ಮೂಲಕ ಆಹ್ವಾನಿಸಲಾಗುತ್ತಿದೆ ಎಂದು ಶೆಟ್ಟರ್ ಅವರು ನಿನ್ನೆ ನನಗೆ ಮಾಹಿತಿ ನೀಡಿದ್ದರು. ಕಾಂಗ್ರೆಸ್ ಪಕ್ಷ ನನಗೆ ರಾಜಕೀಯವಾಗಿ ಮರುಜೀವ ಕೊಟ್ಟಿದೆ. ಹೀಗಾಗಿ ಬಿಜೆಪಿಗೆ ಹೋಗುವುದಿಲ್ಲ ಎಂದಿದ್ದರು. ಅವರ ಮಾತಿನ ಮೇಲೆ ವಿಶ್ವಾಸ ಇಟ್ಟು, ಅವರು ಮತ್ತೆ ಬಿಜೆಪಿಗೆ ಹೋಗುವುದಿಲ್ಲ ಎಂದು ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದೆ. ಈಗ ಮಾಧ್ಯಮಗಳ ಮೂಲಕ ಶೆಟ್ಟರ್ ಅವರು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರಿದ್ದಾರೆ ಎಂಬ ಸುದ್ದಿ ತಿಳಿಯಿತು.

 

ಅವರು ಹಿರಿಯ ನಾಯಕರು ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಅವರನ್ನು ಬಹಳ ಗೌರವದಿಂದ ನಡೆಸಿಕೊಂಡಿತ್ತು. ಇತ್ತೀಚೆಗೆ ರಾಮಮಂದಿರ ವಿಚಾರದಿಂದ ಹಿಡಿದು ಬೇರೆ, ಬೇರೆ ವಿಷಯಗಳ ಬಗ್ಗೆ ಶೆಟ್ಟರ್ ಅವರು ಬಿಜೆಪಿ ವಿರುದ್ಧ ಅನೇಕ ಹೇಳಿಕೆಗಳನ್ನು ನೀಡಿದ್ದರು. ನಾವು ಅವರ ಮೆಲೆ ಇಟ್ಟದ್ದ ವಿಶ್ವಾಸಕ್ಕೆ ಧಕ್ಕೆಯಾಗಿದೆ ಎಂದು ಮಾಧ್ಯಮಗಳೇ ವಿಶ್ಲೇಷಣೆ ಮಾಡುತ್ತಿವೆ. ವಿಧಾನ ಪರಿಷತ್ ಸಭಾಪತಿಗಳಿಗೆ ಅವರು ಕರೆ ಮಾಡಿ ಫ್ಯಾಕ್ಸ್ ಮೂಲಕ ರಾಜೀನಾಮೆ ಕಳುಹಿಸಿಕೊಡುವುದಾಗಿ ಹೇಳಿದ್ದಾರೆ ಎಂದು ಅಧಿಕಾರಿಗಳ ಮೂಲಕ ಮಾಹಿತಿ ಬಂದಿದೆ. ಅವರನ್ನು ಒತ್ತಡದ ಹಾಕಿ ಬಲವಂತವಾಗಿ ಕರೆದುಕೊಂಡು ಹೋಗಲಾಗಿದೆಯೋ ಎಂಬುದು ಗೊತ್ತಿಲ್ಲ. ಅವರ ಹೇಳಿಕೆ ನೋಡಿ  ನಂತರ ಪ್ರತಿಕ್ರಿಯಿಸುತ್ತೇನೆ

ಶೆಟ್ಟರ್ ಅವರು ದೇಶದ ಹಿತದೃಷ್ಟಿಯಿಂದ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿರುವುದಾಗಿ ಹೇಳಿದ್ದಾರೆ ಎಂದು ಕೇಳಿದಾಗ, “ಅವರಿಗೆ ಟಿಕೆಟ್ ತಪ್ಪಿದಾಗ ದೇಶದ ಹಿತಾಸಕ್ತಿ ಗೊತ್ತಿರಲಿಲ್ಲವೇ? ಕಾಂಗ್ರೆಸ್ ಪಕ್ಷ ಅವರನ್ನು ಗೌರವದಿಂದ ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದಾಗ ದೇಶದ ಹಿತ ಗೊತ್ತಿರಲಿಲ್ಲವೇಎಂದು ಮರುಪ್ರಶ್ನಿಸಿದರು.

ಅವರಿಗೆ ಆಮಿಷ ಒಡ್ಡಲಾಗಿದೆಯೇ ಎಂದು ಕೇಳಿದಾಗ, “ಈ ವಿಚಾರವಾಗಿ ಅವರೇ ಹೇಳಬೇಕು. ಕಾಂಗ್ರೆಸ್ ಪಕ್ಷ ಅವರನ್ನು ಬಹಳ ಗೌರವದಿಂದ ನಡೆಸಿಕೊಂಡಿದೆ. ನಮಗೂ ಆತ್ಮಸಾಕ್ಷಿ ಇದೆ. ಅವರಿಗೂ ಆತ್ಮಸಾಕ್ಷಿ ಇದೆ. ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯೇ ಬೇರೆ, ಬಿಜೆಪಿ ಕಾರ್ಯವೈಖರಿಯೇ ಬೇರೆ. ಕೆಪಿಸಿಸಿ ಅಧ್ಯಕ್ಷನಾಗಿ ನಾನು ಅವರಿಗೆ ಬಿ ಫಾರಂ ಕೊಟ್ಟಿದ್ದೆ. ನನಗೆ ಅವರ ರಾಜೀನಾಮೆ ಪತ್ರ ತಲುಪಿಲ್ಲಎಂದು ತಿಳಿಸಿದರು.

ಸಂಘ ಪರಿವಾರದವರು ನಂಬಿಕೆಗೆ ಅರ್ಹರಲ್ಲ ಎಂದು ಭಾವಿಸುತ್ತೀರಾ ಎಂದು ಕೇಳಿದಾಗ, “ಎಲ್ಲಾ ವಿಚಾರದಲ್ಲೂ ಈ ರೀತಿ ತಳುಕು ಹಾಕುವುದೇಕೆ? ಸಂಘದವರು ಅವರ ಕೆಲಸ ಮಾಡುತ್ತಾರೆ. ರಾಜಕಾರಣಿಗಳು ನಮ್ಮ ಕೆಲಸ ಮಾಡುತ್ತೇವೆ. ಸಂಘಕ್ಕೂ ಅದಕ್ಕೂ ಏನು ಸಂಬಂಧ ಕಲ್ಪಿಸಲಿ? ಸಂಘ ಪರಿವಾರದವರಾಗಿದ್ದರೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದರಾ? ಶೆಟ್ಟರ್ ಅವರು ರಾಜಕಾರಣಿ, ಅವರನ್ನು ಸಂಘದವರು ಎಂದು ಯಾಕೆ ನೋಡಲಿಎಂದು ಪ್ರಶ್ನಿಸಿದರು.

 

ಲಕ್ಷ್ಮಣ್ ಸವದಿ ಅವರೂ ಶೆಟ್ಟರ್ ಅವರ ಜತೆಯಲ್ಲೇ ಪಕ್ಷಕ್ಕೆ ಬಂದಿದ್ದು ಅವರನ್ನಾದರೂ ಉಳಿಸಿಕೊಳ್ಳುತ್ತೀರಾ ಎಂದು ಕೇಳಿದಾಗ, “ಶೆಟ್ಟರ್ ಅವರು ಯಾಕೆ ಹೋಗಿದ್ದಾರೋ ಅದು ಬೇರೆ ವಿಚಾರ. ಉಳಿದಂತೆ ಬೇರೆ ಯಾರೂ ಕೂಡ ಬಿಜೆಪಿಗೆ ಹೋಗುವುದಿಲ್ಲ. ಶೆಟ್ಟರ್ ಅವರನ್ನು ಜನ 35 ಸಾವಿರ ಮತಗಳಿಂದ ತಿರಸ್ಕರಿಸಿದರೂ ನಾವು ಅವರನ್ನು ಗೌರವಯುತವಾಗಿ ನಡೆಸಿಕೊಂಡು ಪರಿಷತ್ ಸ್ಥಾನ ನೀಡಿದ್ದೆವು. ಮಿಕ್ಕಿದ್ದು ಅವರ ಆತ್ಮಸಾಕ್ಷಿ ಹಾಗೂ ಜನರಿಗೆ ಬಿಟ್ಟ ವಿಚಾರ” ಎಂದು ತಿಳಿಸಿದರು. 

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top