ರೈತರ ಅನುಕೂಲಕ್ಕಾಗಿ ಶೀಥಲೀಕರಣ ಘಟಕ

ಚಿಕ್ಕಬಳ್ಳಾಪುರ: ಜಿಲ್ಲೆಯ ತೋಟಗಾರಿಕಾ ರೈತರ ಅನುಕೂಲಕ್ಕಾಗಿ ಶೀಥಲೀಕರಣ ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಇದರಿಂದ ರೈತರಿಗೆ ಸಹಕಾರಿಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ. ಸುಧಾಕರ್ ಅವರು ಅಭಿಪ್ರಾಯಪಟ್ಟರು.
ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರೊಂದಿಗೆ ಮಂಗಳವಾರ ನಗರ ಹೊರವಲಯದ ಜಡಲತಿಮ್ಮನಹಳ್ಳಿ ಬಳಿ ರಾಜ್ಯ ಬೀಜ ನಿಗಮ ನಿಯಮಿತ (ಕೆಎಫ್ಎಸ್ ಸಿ) ಆವರಣದಲ್ಲಿ ಆರ್ ಐಡಿಎ–27 ಯೋಜನೆಯಡಿ ಶೀಥಲೀಕರಣ ಘಟಕ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ನಂತರ ಮಾತನಾಡಿದ ಅವರು, 3.76 ಲಕ್ಷ ರೂ. ವೆಚ್ಚದಲ್ಲಿ ಸಮಗ್ರ ಕೃಷಿ ಪದ್ಧತಿ ಶ್ರೇಷ್ಠತೆ ಕೇಂದ್ರ ಹಾಗೂ 9.15 ಲಕ್ಷ ರೂ. ವೆಚ್ಚದಲ್ಲಿ ಶೀಥಲ ಘಟಕದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.


ದ್ರಾಕ್ಷಿ, ಆಲೂಗಡ್ಡೆ, ಈರುಳ್ಳಿ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳನ್ನು ಶೀಥಲೀಕರಣ ಘಟಕದಲ್ಲಿ ಉಳಿಸಿಕೊಂಡು ಉತ್ತಮ ಬೆಲೆ ಬಂದಾಗ ಮಾರಾಟ ಮಾಡಲು ರೈತರಿಗೆ ಸಹಕಾರಿಯಾಗಲಿದೆ. ಇದರಿಂದ ಕಡಿಮೆ ಬೆಲೆಗೆ ಮಾರಾಟ ಮಾಡಿ ನಷ್ಟ ಅನುಭವಿಸುವುದನ್ನು ರೈತರಿಗೆ ತಪ್ಪಿಸಿದಂತಾಗುತ್ತದೆ ಎಂದು ಅವರು ಹೇಳಿದರು.
ಜಿಲ್ಲೆಯ ರೈತರ ಅನುಕೂಲಕ್ಕಾಗಿ ಕೃಷಿ ಸಚಿವರು ಶೀಥಲೀಕರಣ ಘಟಕ ಮಂಜೂರು ಮಾಡಿದ್ದು, ಜಿಲ್ಲೆಯ ರೈತರ ಪರವಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ ಆರೋಗ್ಯ ಸಚಿವರು, ಜಿಲ್ಲೆಯ ರೈತರಿಗೆ ಶೀಘ್ರದಲ್ಲಿಯೇ ಈ ಕಟ್ಟಡ ಸಮರ್ಪಣೆಯಾಗಲಿದೆ ಎಂದು ತಿಳಿಸಿದರು. ಎರಡು ವರ್ಷದಲ್ಲಿ ಎತ್ತಿನಹೊಳೆ ನೀರು
ಮುಂದಿನ ಎರಡು ವರ್ಷದಲ್ಲಿ ಅವಿಭಜಿತ ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಹೇಳಿದರು. ಇತ್ತೀಚಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಈ ಬಗ್ಗೆ ಮಾತನಾಡಲಾಗಿದ್ದು, ಎತ್ತಿನಹೊಳೆ ಯೋಜನೆಯಿಂದ ಮುಂದಿನ ಎರಡು ವರ್ಷದಲ್ಲಿ ನೀರು ನೀಡುವ ಭರವಸೆ ನೀಡಿದ್ದಾರೆ. ಈ ಬಗ್ಗೆ ಯಾವುದೇ ಅನುಮಾನ ಅಗತ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.


ಚುನಾವಣೆಗಳು ಸಮೀಪಿಸುತ್ತಿದ್ದಂತೆ ವಿರೋಧಪಕ್ಷಗಳು ನಾನಾ ರೀತಿಯ ಹೋರಾಟ ಮಾಡುವುದು ಸಹಜವಾಗಿದ್ದು, ಪ್ರಸ್ತುತ ಕಾಂಗ್ರೆಸ್ ನಡೆಸುತ್ತಿರುವ ಹೋರಾಟ ಹಾದಿತಪ್ಪಿದಂತಿದೆ ಎಂದು ಸಚಿವರು ಹೇಳಿದರು. ನಿರಂತರ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಉತ್ತಮ ರಾಜಕೀಯಕ್ಕೆ ಖ್ಯಾತಿ ಪಡೆದಿರುವ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಹಾದಿತಪ್ಪಿದ ರಾಜಕೀಯ ಹೋರಾಟ ಮಾಡುತ್ತಿದೆ ಎಂದು ಹೇಳಿದರು. ರಾಜಧಾನಿ ಮೀರಿದ ಅಭಿವೃದ್ಧಿ ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ರಾಜಧಾನಿಯನ್ನೂ ಮೀರಿಸುವ ರೀತಿಯಲ್ಲಿ ಆರೋಗ್ಯ ಸಚಿವರು ಅಭಿವೃದ್ಧಿ ಪಡಿಸಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಶ್ಲಾಘನೆ ವ್ಯಕ್ತಪಡಿಸಿದರು. ನಗರ ಹೊರವಲಯದಲ್ಲಿ ಶೀಥಲೀಕರಣ ಘಟಕ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಶೀಥಲೀಕರಣ ಘಟಕ ಆರಂಭಿಸುತ್ತಿರುವ 14ನೇ ಜಿಲ್ಲೆ ಇದಾಗಿದ್ದು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತೋಟಗಾರಿಕಾ ಬೆಳೆಗಳನ್ನು ಹೆಚ್ಚು ಬೆಳೆಯುತ್ತಿದ್ದು, ರೈತರ ಶ್ರೇಯೋಭಿವೃದ್ಧಿಗಾಗಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು.


2,500 ಮೆಟ್ರಿಕ್ ಟನ್ ಸಾಮರ್ಥ್ಯದ ಶೀಥಲೀಕರಣ ಘಟಕ ಇದಾಗಿದ್ದು, ರೈತರು ತಾವು ಬೆಳೆದ ಬೆಳೆಗಳನ್ನು ಈ ಶೀಥಲೀಕರಣ ಘಟಕಗಳಲ್ಲಿ ಶೇಖರಿಸಿಟ್ಟು, ಉತ್ತಮ ಬೆಲೆ ಬಂದಾಗ ಮಾರಾಟ ಮಾಡಲು ಅವಕಾಶವಾಗಲಿದೆ. ಜಿಲ್ಲೆಯಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ಸರ್ಕಾರದಿಂದ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಕೆ.ವಿ. ನಾಗರಾಜ್, ಜಿಲ್ಲಾಧಿಕಾರಿ ಆರ್. ಲತಾ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾಕಾರಿ ಪಿ. ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಜಿ.ಕೆ. ಮಿಥುನ್ ಕುಮಾಮಾರ್, ಕೃಷಿ ಇಲಾಖೆಯ ಜಂಟಿ ಉಪನಿರ್ದೇಶಕಿ ರೂಪಾ ಹಾಗೂ ವಿವಿಧ ಇಲಾಖೆಗಳ ಅಕಾರಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

Translate »
Scroll to Top