ಮೇ 7ರಂದು ಎರಡನೇ ಹಂತದ ಲೋಕಸಭಾ ಚುನಾವಣೆ  : ಉತ್ತರ ಕರ್ನಾಟಕ ಭಾಗದತ್ತ ಸಚಿವರು, ಶಾಸಕರು, ಪಕ್ಷದ ಮುಖಂಡರು

ಬೆಂಗಳೂರು:  ಮುಂದಿನ ತಿಂಗಳ ೭ರಂದು ಎರಡನೇ ಹಂತದಲ್ಲಿ ೧೪ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಸಚಿವರು, ಶಾಸಕರು, ಪಕ್ಷದ ಮುಖಂಡರು ಉತ್ತರ ಕರ್ನಾಟಕ ಭಾಗದತ್ತ ಕೇಂದ್ರೀಕೃತರಾಗಿದ್ದಾರೆ.

ಈ ಹಂತದಲ್ಲಿ ಸುಮಾರು ೨ ಕೋಟಿ ೫೦ ಲಕ್ಷ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣಾ ಕಣದಲ್ಲಿ ೨೨೭ ಅಭ್ಯರ್ಥಿಗಳಿದ್ದಾರೆ.

ಇವರ ಪೈಕಿ ೨೦೬ ಪುರುಷ ಅಭ್ಯರ್ಥಿಗಳು ಹಾಗೂ ೨೧ ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ. ಎರಡನೇ ಹಂತದ ಚುನಾವಣೆಗಾಗಿ ೨೮ ಸಾವಿರದ ೨೬೯ ಮತಗಟ್ಟೆಗಳನ್ನು ತೆರೆಯಲಾಗಿದೆ. ೧೨ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬಂಡಾಯದ ಕಾರಣ ಶಿವಮೊಗ್ಗ ಮತ್ತು ದಾವಣಗೆರೆ ಲೋಕಸಭಾ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಉಂಟಾಗಿದೆ. ಈ ನಡುವೆ, ಚುನಾವಣೆ ನಡೆಯುವ ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯ ಬಿರುಸುಗೊಂಡಿದೆ. ಮತದಾನಕ್ಕಾಗಿ ಜಿಲ್ಲೆಗಳಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ.

ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಮಧ್ಯ ಹಾಗೂ ಉತ್ತರ ಕರ್ನಾಟಕದತ್ತ ಲಗ್ಗೆಯಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿ.ಎಂ.ಗಳಾದ ಯಡಿಯೂರಪ್ಪ, ಹೆಚ್‌.ಡಿ.ಕುಮಾರಸ್ವಾಮಿ ಡಿಸಿಎಂ ಡಿಕೆ ಶಿವಕುಮಾರ್‌ ಸೇರಿದಂತೆ ಘಟಾನುಘಟಿ ನಾಯಕರು ಆಖಾಡಕ್ಕಿಳಿದಿದ್ದಾರೆ.

 

ನಾಳೆ ಉತ್ತರ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕುಂದಾನಗರಿ ಬೆಳಗಾವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರವಾಗಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಭಾನುವಾರವೇ ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಬಹಿರಂಗ ಪ್ರಚಾರ ನಡೆಸುವುದರಿಂದ ಏಟಿಗೆ ಏಟು ಮಾತಿನ ವಾಗ್ಬಣ ನಡೆಯಲಿದೆ.

ಅದರಲ್ಲೂ ಈ ಕ್ಷೇತ್ರಗಳ ಪೈಕಿ ಶಿವಮೊಗ್ಗ, ಬೆಳಗಾವಿ, ಚಿಕ್ಕೋಡಿ, ಹಾವೇರಿ ತೀವ್ರ ಕುತೂಹಲ ಕೆರಳಿಸಿದ ಕ್ಷೇತ್ರಗಳಾಗಿವೆ. ಬಳ್ಳಾರಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರ ಕಣದಲ್ಲಿದ್ದರೆ, ಚಿಕ್ಕೋಡಿಯಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಕಣದಲ್ಲಿದ್ದಾರೆ. ಅಲ್ಲದೆ ಬೀದರ್‌ನಲ್ಲಿ ನಲ್ಲಿ ಸಚಿವ ಈಶ್ವರ್‌ ಖಂಡ್ರೆ ಪುತ್ರ ಅಖಾಡಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಘಟನಾನುಘಟಿ ನಾಯಕರು ಈ ಕ್ಷೇತ್ರಗಳತ್ತ ದೌಡಾಯಿಸಲಿದ್ದಾರೆ.

ಇನ್ನು ಬಿಜೆಪಿಗೂ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ. ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಈಶ್ವರಪ್ಪ ಬಂಡಾಯ ಸಾರಿದ್ದಾರೆ. ಬಿವೈ ರಾಘವೇಂದ್ರ ವಿರುದ್ಧ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ. ಹೀಗಾಗಿ ಎಲ್ಲರ ಚಿತ್ತ ಈ ಕ್ಷೇತ್ರದತ್ತ ನೆಟ್ಟಿದೆ. ಇನ್ನು ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಮೂರು ಪಕ್ಷಗಳ ನಾಯಕರು ಮತ ಬೇಟೆಗೆ ಸಜ್ಜಾಗುತ್ತಿದ್ದಾರೆ.

ಬಿಜೆಪಿಯ ಜೆಪಿ ನಡ್ಡಾ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಿನ್ನೆಯಿಂದಲೇ ಎರಡನೇ ಹಂತದ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಕೂಡಾ ಈ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ.

ಇನ್ನು ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಅವರಿಗೂ ಈ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವುದು ಅನಿವಾರ್ಯವಾಗಿದೆ. ಇನ್ನುಳಿದಿರುವ ಒಂಬತ್ತು ದಿನಗಳ ಕಾಲ ಅವರು ಕಲ್ಯಾಣ ಕರ್ನಾಟಕ, ಉತ್ತರ ಕನ್ನಡ ಹಾಗೂ ಮಲೆನಾಡಿನ ಈ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

ಬೆಳಗಾವಿ ಕಳೆದ ಎರಡು ದಶಕಗಳಿಂದ ಬಿಜೆಪಿ ಭದ್ರಕೋಟೆಯಾಗಿದೆ. ಇನ್ನು ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲೂ ಬಿಜೆಪಿ ತನ್ನದೆಯಾದ ಪ್ರಭಾವ ಹೊಂದಿದೆ. ಹೀಗಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಈ ಬಾರಿ ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಈ ಸಂಬಂಧ ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಅವರನ್ನು ಕಣಕ್ಕಿಳಿಸಿ, ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರನ್ನು ಮಣಿಸಲು ರಣತಂತ್ರ ರೂಪಿಸಿದ್ದಾರೆ.

 

ಇಂದು ಗೋವಾದಿಂದ ಪ್ರಚಾರ ಮುಗಿಸಿಕೊಂಡು ಸಂಜೆ ಬೆಳಗಾವಿಗೆ ಆಗಮಿಸುವ ಮೋದಿ ರಾತ್ರಿ ಇಲ್ಲಿನ ಐಟಿಸಿ ಹೊಟೇಲ್‌ ನಲ್ಲಿ ವಾಸ್ತವ್ಯ ಹೂಡಲಿದ್ದು, ಬೆಳಿಗ್ಗೆ 11ಕ್ಕೆ ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ಪ್ರಧಾನಿ ಮೋದಿ ಬೃಹತ್‌ ಸಮಾವೇಶ ನಡೆಸುವರು, ಇದೇ ದಿನದಂದು ಬೆಳಗಾವಿ ಮತ್ತು ಚಿಕ್ಕೋಡಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ.

ಚಿಕ್ಕೋಡಿ ಕ್ಷೇತ್ರ ವ್ಯಾಪ್ತಿಯ ಉಗಾರ್‌ ಖುರ್ದ್‌, ಬೆಳಗಾವಿ ಕ್ಷೇತ್ರದ ಯರಗಟ್ಟಿಯಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಿಎಂ ಸಿದ್ದರಾಮಯ್ಯ ಒಂದೇ ದಿನ ಎರಡೂ ಕ್ಷೇತ್ರಗಳಲ್ಲಿ ತಲಾ ಒಂದೊಂದು ಸಮಾವೇಶ ನಡೆಸಲಿದ್ದಾರೆ.

ಮಧ್ಯಾಹ್ನ 12.55ಕ್ಕೆ ಉತ್ತರ ಕನ್ನಡ ಜಿಲ್ಲೆ ಶಿರಸಿಗೆ ಆಗಮಿಸುವ ಮೋದಿ, 1 ಗಂಟೆಗೆ ಶಿರಸಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. 2 ಗಂಟೆಗೆ ಶಿರಸಿಯಿಂದ ಹೊರಟು 2.50ಕ್ಕೆ ದಾವಣಗೆರೆಗೆ ತಲುಪಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ದಾವಣಗೆರೆ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾರೆ. ನಂತರ 4.05ಕ್ಕೆ ದಾವಣಗೆರೆಯಿಂದ ಹೊಸಪೇಟೆ ಕಡೆಗೆ ಹೊರಡುವ ಪ್ರಧಾನಿ ಮೋದಿ, ಸಂಜೆ 4.50ಕ್ಕೆ ಹೊಸಪೇಟೆ ತಲುಪಲಿದ್ದಾರೆ. 5 ಗಂಟೆಗೆ ಹೊಸಪೇಟೆ ಸಮಾವೇಶದಲ್ಲಿ ಭಾಗಿಯಾಗಿ, 6 ಗಂಟೆಗೆ ಹೊಸಪೇಟೆ ಹೋಟೆಲ್ಗೆ ಆಗಮಿಸಿ, ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಏಪ್ರಿಲ್‌ 29ರ ಬೆಳಗ್ಗೆ 11 ಗಂಟೆಗೆ ಹೊಸಪೇಟೆಯಿಂದ ಮೋದಿ ನಿರ್ಗಮಿಸಿ, ಮಧ್ಯಾಹ್ನ 12.15ಕ್ಕೆ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ ಮೈದಾನದಲ್ಲಿ ನಡೆಯಲಿರುವ ಬಹಿರಂಗ ಸಮಾವೇಶದಲ್ಲಿ ಭಾಗಿಯಾಗುತ್ತಾರೆ. ಮಧ್ಯಾಹ್ನ 1.05ಕ್ಕೆ ಬಾಗಲಕೋಟೆಯಿಂದ ಸೊಲ್ಲಾಪುರಕ್ಕೆ ಪ್ರಯಾಣ ಬೆಳಸಲಿದ್ದಾರೆ.

ಬೆಳಗಾವಿಗೆ ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಶನಿವಾರ ಮುಂಜಾನೆ 6 ಗಂಟೆಯಿಂದ ಭಾನುವಾರ ಸಂಜೆ 6 ಗಂಟೆಯವರಗೆ ಡ್ರೋನ್‌ ಹಾರಾಟಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್‌ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ತಾಲೂಕಿನ ವ್ಯಾಪ್ತಿಯನ್ನು ರೆಡ್‌ ಜೋನ್‌ ಎಂದು ಘೋಷಿಸಿದೆ.

ಇನ್ನು ಎರಡನೇ ಹಂತದಲ್ಲಿ ನಡೆಯುವ ಮತದಾನದಲ್ಲಿ ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶಿವಮೊಗ್ಗ ಹಾಗೂ ಕಾಂಗ್ರೆಸ್‌ ಟಿಕೆಟ್‌ ದೊರೆಯದ ಹಿನ್ನೆಲೆಯಲ್ಲಿ ಶಿಕ್ಷಣ ತಜ್ಞ ವಿನಯ್‌ಕುಮಾರ್‌ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ದಾವಣಗೆರೆಯಲ್ಲಿ ಬಿಟ್ಟರೆ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ. ಈ ಇಬ್ಬರೂ ಕುರುಬ ಸಮುದಾಯದವರಾಗಿದ್ದಾರೆ. ತಮ್ಮ ಪಕ್ಷದ ಯಾವುದೇ ಅಭ್ಯರ್ಥಿಗಳು ಸ್ಪಧಿಸದ ಹಿನ್ನೆಲೆಯಲ್ಲಿ ಬಿಜೆಪಿಗೆ ಜೆಡಿಎಸ್‌ ಬೆಂಬಲ ನೀಡಲಿದೆ.

ಬಿಜೆಪಿಯಿಂದ ಅಮಾನತುಗೊಂಡಿರುವ ಈಶ್ವರಪ್ಪ, ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಪುತ್ರ ಹಾಗೂ ಹಾಲಿ ಸಂಸದ ಬಿವೈ ವಿಜಯೇಂದ್ರಗೆ ಸವಾಲು ಹಾಕಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ನಿರೀಕ್ಷೆಯಲ್ಲಿದ್ದ ವಿನಯ್‌ಕುಮಾರ್‌ ಅವರು ಶಾಮನೂರು ಶಿವಶಂಕರಪ್ಪ ಸೊಸೆ, ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ ಪತ್ನಿ ಪ್ರಭಾಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಹಾವೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬೆಳಗಾವಿಯಲ್ಲಿ ಜಗದೀಶ ಶೆಟ್ಟರ್‌, ಹುಬ್ಬಳ್ಳಿ-ಧಾರವಾಡದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ ಮತ್ತು ಬೀದರ್‌ನಲ್ಲಿ ಭಗವಂತ ಖೂಬಾ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರು ಈ ಚುನಾವಣೆಯಲ್ಲಿ ರಾಜಕೀಯ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದಾರೆ. ಧಾರವಾಡದಲ್ಲಿ ಆನಂದ ಅಸೂಟಿ ಅವರು ಪ್ರಲ್ಹಾದ ಜೋಶಿ ವಿರುದ್ಧ ಕಣಕ್ಕಿಳಿದಿದ್ದಾರೆ.

ಮೇ 7ರಂದು ಬಾಗಲಕೋಟೆ, ಬೆಳಗಾವಿ, ಬೀದರ್‌, ಬಿಜಾಪುರ, ಚಿಕ್ಕೋಡಿ, ದಾವಣಗೆರೆ, ಧಾರವಾಡ, ಕಲಬುರಗಿ, ಹಾವೇರಿ, ಬಳ್ಳಾರಿ, ಕೊಪ್ಪಳ, ರಾಯಚೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡದ 14 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

 

 

Facebook
Twitter
LinkedIn
Telegram
WhatsApp
Email
Print

1 thought on “ಮೇ 7ರಂದು ಎರಡನೇ ಹಂತದ ಲೋಕಸಭಾ ಚುನಾವಣೆ  : ಉತ್ತರ ಕರ್ನಾಟಕ ಭಾಗದತ್ತ ಸಚಿವರು, ಶಾಸಕರು, ಪಕ್ಷದ ಮುಖಂಡರು”

  1. Thank you for your sharing. I am worried that I lack creative ideas. It is your article that makes me full of hope. Thank you. But, I have a question, can you help me?

Leave a Comment

Your email address will not be published. Required fields are marked *

Translate »
Scroll to Top