ಉಕ್ರೇನ್‍ನಲ್ಲಿ ಸಿಲುಕಿರುವ ಬೀಳಗಿ ವೈದ್ಯಕೀಯ ವಿದ್ಯಾರ್ಥಿನಿ ಸಹನ ಪಾಟೀಲ್

ಬೀಳಗಿ,ಮಾ.1- ಯುದ್ದ ಪೀಡಿತ ಯುಕ್ರೇನ್‍ನಲ್ಲಿ ಸಿಲುಕಿರುವ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ವೈದ್ಯಕೀಯ ವಿದ್ಯಾರ್ಥಿನಿ ಸಹನ ಪಾಟೀಲ್‍ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ದೂರವಾಣಿ ವಿಡಿಯೋ ಕರೆ ಮಾಡಿ ಧೈರ್ಯಗೆಡದಂತೆ ಆತ್ಮಸ್ಥೈರ್ಯ ತುಂಬಿದರು. ಇಂದು ಬೆಳಗ್ಗೆ ತಾಲ್ಲೂಕಿನ ಸುನಗ ಗ್ರಾಮದಲ್ಲಿರುವ ಸಹನಾ ತಂದೆ ಪಶು ಚಿಕಿತ್ಸಾಲಯದ ಸಹಾಯಕ ನಿರ್ದೇಶಕ ಮಲ್ಲನಗೌಡ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿ, ಉಕ್ರೇನ್‍ನ ಕಾರ್ಕೀವ್ ಪಟ್ಟಣದ ವೈದ್ಯಕೀಯ ವಿದ್ಯಾರ್ಥಿನಿ ಸಹನ ಪಾಟೀಲ್ ಅವರ ಜೊತೆ ಕೆಲ ನಿಮಿಷಗಳ ವಿಡಿಯೋ ಕಾಲ್ ಮಾಡಿ ಸಚಿವರು, ಭಯಭೀತರಾಗದಂತೆ ಸಮಾಧಾನ ಹೇಳಿದರು. ಉಕ್ರೇನ್‍ನ ಕಾರ್ಕೀವ್ ಪಟ್ಟಣದ ನ್ಯಾಷನಲ್ ಕಾರ್ಕೀವ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ವ್ಯಾಸಂಗ ಮಾಡುತ್ತಿರುವ ಸಹನ ಪಾಟೀಲ್, ಯುದ್ಧದ ಕಾರಣ ತಾಯ್ನಾಡಿಗೆ ಮರಳದೆ ಸಿಲುಕಿಕೊಂಡಿದ್ದರು.

ಈ ವಿಷಯ ತಿಳಿಯುತ್ತಿದ್ದಂತೆ ಇಂದು ವಿದ್ಯಾರ್ಥಿನಿಯ ಪೋಷಕರು, ಸಂಬಂಧಿಕರನ್ನು ಭೇಟಿ ಮಾಡಿದ ಅವರು, ವಿದ್ಯಾರ್ಥಿಗೆ ಎದೆಗುಂದದೆ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಬೇಕು. ಆದಷ್ಟು ಶೀಘ್ರ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಜವಾಬ್ದಾರಿ ನಮ್ಮದು ಎಂದು ಅಭಯ ನೀಡಿದರು. ಯುದ್ಧ ಪೀಡಿತ ನಗರದಲ್ಲಿ ನೀರು, ಆಹಾರ, ರಕ್ಷಣೆ ಇತರೆ ಮೂಲಭೂತ ಸೌಕರ್ಯಗಳ ಲಭ್ಯತೆ ಕುರಿತು ಮಾಹಿತಿ ಪಡೆದ ಸಚಿವರು, ಅವಕಾಶ ಸಿಕ್ಕಾಗ ಸಾಧ್ಯವಾದಷ್ಟು ಹೆಚ್ಚು ನೀರು ಮತ್ತು ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವಂತೆ ತಿಳಿಸಿದರಲ್ಲದೆ ಯಾವುದೇ ಸಮಯಲ್ಲಾದರೂ ಕೂಡ ತಮ್ಮದೂರವಾಣಿ ಸಂಖ್ಯೆಗೆ ಕರೆ ಮಾಡಲು ತಿಳಿಸಿದರು. ಉಕ್ರೇನ್‍ನಿಂದ ಬರುವವರಿಗೆ ಉಚಿತವಾಗಿ ವಿಮಾನ ಪ್ರಯಾಣ, ವಿಮಾನ ನಿಲ್ದಾಣದಿಂದ ಮನೆಯವರೆಗೂ ತಲುಪಿಸಲು ನಮ್ಮ ಸರ್ಕಾರ ಉಚಿತವಾಗಿ ಪ್ರಯಾಣ ವ್ಯವಸ್ಥೆಯನ್ನು ಕಲ್ಪಿಸಿದೆ. ಯಾವುದೇ ಬೆಲೆ ತೆತ್ತಾದರೂ ಸುರಕ್ಷಿತವಾಗಿ ನಿಮ್ಮನ್ನು ಕರೆತರುತ್ತೇವೆ. ನೀವು ಆತಂಕಕ್ಕೆ ಒಳಗಾಗಬಾರದು ಎಂದು ಸಲಹೆ ಮಾಡಿದರು.

ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳು ಯುಕ್ರೇನ್ ನಲ್ಲಿರುವ ವಿದ್ಯಾರ್ಥಿಗಳು ಮತ್ತು ಭಾರತೀಯ ನಾಗರೀಕರನ್ನು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸುರಕ್ಷಿತವಾಗಿಕರೆ ತಂದಿದೆ. ಉಳಿದವರನ್ನು ಕರೆತರುವ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ನಿಮ್ಮನ್ನು ಕೂಡ ಶೀಘ್ರವೇ ಕರೆ ತರಲು ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು. ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು. ಆತ್ಮಸ್ಥೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಿ. ನಿಮ್ಮ ತಂದೆತಾಯಿಗಳು, ಸಹೋದರ-ಸಹೋದರಿಯರು ಆತಂಕದಲ್ಲಿರುತ್ತಾರೆ. ನಿಮ್ಮ ಕುಟುಂಬ ವರ್ಗದವರಿಗೆ ಕರೆ ಮಾಡಿ ತಾವು ಸುರಕ್ಷಿತವಾಗಿರುವುದಾಗಿ ತಿಳಿಸುವಂತೆ ಮನವಿ ಮಾಡಿದರು. ಪ್ರಧಾನಿ ನರೇಂದ್ರಮೋದಿ , ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ನಾಗರಿಕ ವಿಮಾನಯಾನ ಸಚಿವ ಜೋತಿರಾಧಿತ್ಯ ಸಿಂಧ್ಯಘಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಮತ್ತಿತರರು ಉಕ್ರೇನ್‍ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಸರ್ವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಭರವಸೆ ತುಂಬಿದರು. ಅಲ್ಲಿನ ರಾಯಭಾರಿ ಕಚೇರಿ ಅಧಿಕಾರಿಗಳು ಹೇಳುವವರೆಗೂ ಮನೆಯಿಂದಾಗಲಿ ಇಲ್ಲವೇ ಬಂಕರ್ ನಿಂದ ಆಚೆ ಬರಬೇಡಿ. ನೀರು, ಊಟ ಸರಿಯಾದ ಸಮಯಕ್ಕೆ ತೆಗೆದುಕೊಳ್ಳಿ. ಅಧಿಕಾರಿಗಳು ಹೊರಡಿ ಎಂದು ಹೇಳಿದಾಗ ಎಲ್ಲರೂ ಸುರಕ್ಷಿತವಾಗಿ ಬನ್ನಿ ಎಂದು ಆಶಿಸಿದರು.

Leave a Comment

Your email address will not be published. Required fields are marked *

Translate »
Scroll to Top