ಸಬ್ ಕಾ ‘ಸಾಥ್ ಸಬ್ ಕಾ ವಿಕಾಸ್’ ಎನ್ನುವುದು ಕೇವಲ ಬಾಯಿ ಮಾತು. ಇಂಥವರು ದೇಶವನ್ನು ಆಳಲು ಲಾಯಕ್ಕೇ?: ಸಿಎಂ ಪ್ರಶ್ನೆ

ಸ್ವಾತಂತ್ರ್ಯ ಹೋರಾಟ ತೀವ್ರಗೊಂಡಿದ್ದಾಗಲೂ ಸಂಘ ಪರಿವಾರದ ಹೆಡಗೇವಾರ್ ಆಗಲಿ, ಗೋಲ್ವಾಲ್ಕರ್ ಆಗಲಿ ಪಾಲ್ಗೊಂಡಿಲ್ಲ. ಬಿಜೆಪಿ ಯಿಂದ ನಾವು ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ

ಧರ್ಮದ ಹೆಸರಿನಲ್ಲಿ ದೇಶ ಹಾಗೂ ಸಮಾಜವನ್ನು ಒಡೆಯುವವರು ಬಿಜೆಪಿ

ರಾಜ್ಯಸಭಾ  ಚುನಾವಣೆಯಲ್ಲಿ  ಬಿಜೆಪಿಯ ಇಬ್ಬರು ಕಾಂಗ್ರೆಸ್ ಪರವಾಗಿದ್ದುದ್ದನ್ನು ಮರೆ ಮಾಚಲು ವಿಧಾನ ಸಭೆಯಲ್ಲಿ ಗದ್ದಲ ಎಬ್ಬಿಸಿದ್ದಾರೆ

ಬೆಂಗಳೂರು: ಆರ್.ಎಸ್.ಎಸ್.ನವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಗೊತ್ತಿಲ್ಲ.  ಸ್ವಾತಂತ್ರ್ಯ ಹೋರಾಟ ತೀವ್ರಗೊಂಡಿದ್ದಾಗಲೂ ಸಂಘ ಪರಿವಾರದ ಹೆಡಗೇವಾರ್ ಆಗಲಿ, ಗೋಲ್ವಾಲ್ಕರ್ ಆಗಲಿ ಪಾಲ್ಗೊಂಡಿಲ್ಲ. ಬಿಜೆಪಿ ಯಿಂದ ನಾವು ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ. ಧರ್ಮದ ಹೆಸರಿನಲ್ಲಿ ದೇಶ ಹಾಗೂ ಸಮಾಜವನ್ನು ಒಡೆಯುವವರು ಬಿಜೆಪಿ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ಎನ್ನುವುದು ಕೇವಲ ಬಾಯಿ ಮಾತು. ಇಂಥವರು ದೇಶವನ್ನು ಆಳಲು ಲಾಯಕ್ಕೇ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿ ಮಾತನಾಡಿದ ಅವರು ಜನ ಲೋಕಸಭಾ ಚುನಾವಣೆಯಲ್ಲಿ  ಬಿಜೆಪಿಯನ್ನು ಸೋಲಿಸಿ ವಿರೋಧ ಪಕ್ಷಕ್ಕೆ ಅಧಿಕಾರ ನೀಡುತ್ತಾರೆ ಎಂದು ಖಚಿತವಾಗಿ ನುಡಿದರು.‌

 

ರಾಜ್ಯಸಭಾ  ಚುನಾವಣೆಯಲ್ಲಿ  ಬಿಜೆಪಿಯ ಇಬ್ಬರು ಕಾಂಗ್ರೆಸ್ ಪರವಾಗಿದ್ದುದ್ದನ್ನು ಮರೆ ಮಾಚಲು ವಿಧಾನ ಸಭೆಯಲ್ಲಿ ಗದ್ದಲ ಎಬ್ಬಿಸಿದ್ದಾರೆ ಎಂದರು.

ಪೈಪೋಟಿಗೆ ಬಿದ್ದಂತೆ  ಕೇಂದ್ರ ಸರ್ಕಾರವನ್ನು ಹೊಗಳಿದ್ದಾರೆ

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  ತಮ್ಮ ಚರ್ಚೆಯಲ್ಲಿ 30 ಕೇಂದ್ರ ಸರ್ಕಾರವನ್ನು ಹೊಗಳಿದ್ದಾರೆ. . ಜೆಡಿಎಸ್ ಕೂಡ ಪೈಪೋಟಿಗೆ ಬಿದ್ದಂತೆ ಅದನ್ನೇ ಮಾಡಿದೆ ಎಂದರು.

ಜೆಡಿಎಸ್ ತಮ್ಮ ಪಕ್ಷದ ಹೆಸರಿನಲ್ಲಿರುವ “ಎಸ್” ನ್ನು ತೆಗೆದುಹಾಕುವುದು ಉತ್ತಮ. ಏಕೆಂದರೆ  ಅದು ಈಗ ಜಾತ್ಯತೀತ ವಾಗಿ ಉಳಿದಿಲ್ಲ ಎಂದು ಕುಟುಕಿದರು.

ಸುಳ್ಳೇ ಬಿಜೆಪಿಯವರ ಮನೆ ದೇವರು

ಏಳು ಕೋಟಿ ಕನ್ನಡಿಗರಿಗೆ ಆಗಿರುವ ಅನ್ಯಾಯವನ್ನು ಸಮರ್ಥಿಸಿಕೊಳ್ಳಲು ನಾಚಿಕೆಯಾಗುವುದಿಲ್ಲವೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, 1.40 ಸಾವಿರ ಕೋಟಿ ನಮ್ಮಿಂದ ಕೇಂದ್ರ ಸರ್ಕಾರಕ್ಕೆ ತೆರಿಗೆ ಹೋಗುತ್ತದೆ. 100 ರೂ.ತೆರಿಗೆ ಕೊಟ್ಟರೆ ನಮಗೆ 12 ರೂ.ಗಳು ಮಾತ್ರ  ಕೇಂದ್ರದಿಂದ ತೆರಿಗೆ ಬರುತ್ತಿದೆ. ಇದನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ಗೆ ನಾಚಿಕೆಯಾಗಬೇಕು ಎಂದರು.

ಕಾಳಜಿ ಇದೆಯೇ

14 ನೇ ಹಣಕಾಸು ಆಯೋಗದಲ್ಲಿ 4.7 %  ಹಾಗೂ 15 ನೇ ಹಣಕಾಸು ಆಯೋಗದಲ್ಲಿ 3.64 % ರಾಜ್ಯಕ್ಕೆ ನಿಗಡಿಯಾಗಿ ಶೇ 1.07% ರಷ್ಟು ಕಡಿಮೆಯಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ 2 ನೇ ರಾಜ್ಯವಾಗಿರುವ ಕರ್ನಾಟಕಕ್ಕೆ ಅತಿ ಹೆಚ್ಚು ಅನ್ಯಾಯವಾಗಿದೆ. ಕೇಂದ್ರದ ಅನ್ಯಾಯವನ್ನು  ಬೆಂಬಲಿಸುವ ಬಿಜೆಪಿಗೆ ಕನ್ನಡಿಗರ ಬಗ್ಗೆ ಕಾಳಜಿ ಇದೆಯೇ ಎಂದರು. 

 

ನರೇಂದ್ರ ಮೋದಿಯವರು ಗುಜರಾತ್ ಮುಖ್ಯ ಮಂತ್ರಿಯಾಗಿದ್ದಾಗ ಗುಜರಾತಿನಿಂದ ತೆರಿಗೆ ಸಂಗ್ರಹಿಸಿಸಬೇಡಿ ಎಂದಿದ್ದರು. ನಾವು ಆ ಮಾತು ಹೇಳಿಲ್ಲ. 

ನಿಮ್ಮದು ನಿಶಕ್ತಿ

ಇದೇ ವೇಳೆಗೆ ಮೋದಿ ಮೋದಿಜೈ ಶ್ರೀ ರಾಮ್  ಎಂದು ಕೂಗು ಹಾಕುತ್ತಿದ್ದ ವಿರೋಧಪಕ್ಷದವರನ್ನು ಉದ್ದೇಶಿಸಿ ನಿಮ್ಮದು ಕೇವಲ ನಿ:ಶಕ್ತಿ. ಮೋದಿ ಹೆಸರಿನ ಮೇಲೆ  ನಡೆಸುತ್ತಿದ್ದೀರಿ.ಸಮಾಜ ಒಡೆಯುವ ಕೆಲ್ಸ ನಿಮ್ಮದು.  ನಾವು ಜೈ ಸೀತಾ ರಾಮ್ ಎನ್ನುತ್ತೇವೆ ಎಂದು ಮುಖ್ಯ ಮಂತ್ರಿಗಳು  ಘೋಷಣೆ ಕೂಗಿದರು.

 

ಬಿಜೆಪಿ ಗೆ ತಲೆ ಖಾಲಿ, ಮೆದುಳು ಇಲ್ಲ. ರಾಮಾಯಾಣ ಮಹಾಭಾರತ ಓದಿಕೊಂಡೇ ಇಲ್ಲ ಎಂದು ತಿವಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top