ಪ್ರಾದೇಶಿಕ ಕೌಶಲ್ಯ ಸ್ಪರ್ಧೆ: ರಾಜ್ಯಕ್ಕೆ 14 ಚಿನ್ನ, 13 ಬೆಳ್ಳಿ ಪದಕ

ಬೆಂಗಳೂರು: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಪ್ರಾದೇಶಿಕ ಕೌಶಲ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ತಂಡವು 14 ಚಿನ್ನ ಮತ್ತು 13 ಬೆಳ್ಳಿ ಪದಕಗಳ ಸಹಿತ ಒಟ್ಟು 27 ಪದಕಗಳನ್ನು ಮಡಿಲಿಗೆ ಹಾಕಿಕೊಂಡಿದ್ದು, ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಕರ್ನಾಟಕವೂ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಒಡಿಶಾ ರಾಜ್ಯದ ತಂಡಗಳು ಈ ಪ್ರಾದೇಶಿಕ ಮಟ್ಟದ ಸುತ್ತಿನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಈ ಸ್ಪರ್ಧಿಗಳಲ್ಲಿ 17 ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮ ಮತ್ತು 10 ಸ್ಪರ್ಧಿಗಳಿಗೆ ಸರಕಾರಿ ಉಪಕರಣ ಕಾರ್ಯಾಗಾರದ ವತಿಯಿಂದ ತರಬೇತಿ ನೀಡಲಾಗಿತ್ತು. ರಾಜ್ಯದಿಂದ ಈ ಸ್ಪರ್ಧೆಯಲ್ಲಿ ಒಟ್ಟು 69 ಸ್ಪರ್ಧಿಗಳು ಭಾಗವಹಿಸಿದ್ದು, 35 ಬಗೆಯ ಕೌಶಲ್ಯಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು.

ರಾಜ್ಯದ ಸ್ಪರ್ಧಿಗಳು ಮೆಕಾಟ್ರಾನಿಕ್ಸ್, ಮುದ್ರಣ ತಂತ್ರಜ್ಞಾನ, ಆಭರಣ ತಯಾರಿಕೆ, ಕೈಗಾರಿಕಾ ನಿಯಂತ್ರಣ, ಕಾರ್ ಪೇಂಟಿಂಗ್, ಅಡುಗೆ ತಯಾರಿಕೆ, ಪ್ಲಾಸ್ಟಿಕ್ ಡೈ ಎಂಜಿನಿಯರಿಂಗ್, ಬೇಕರಿ ಪದಾರ್ಥಗಳ ತಯಾರಿಕೆ ಮತ್ತು ಕ್ಲೌಡ್ ಕಂಪ್ಯೂಟಿಂಗ್ ವಿಭಾಗಗಳಲ್ಲಿ ಚಿನ್ನದ ಪದಕವನ್ನು ಬಾಚಿಕೊಂಡಿದ್ದಾರೆ. ಉಳಿದಂತೆ ಎಂ-ಕ್ಯಾಡ್, ಕೇಶವಿನ್ಯಾಸ, ಗ್ರಾಫಿಕ್ ವಿನ್ಯಾಸ, ವಿಷುಯಲ್ ಮರ್ಕಂಡೈಸಿಂಗ್, 3ಡಿ ಡಿಜಿಟಲ್ ಗೇಮ್ ಆರ್ಟ್ ಮತ್ತು ವಾಟರ್ ಟೆಕ್ನಾಲಜಿ ಮುಂತಾದ ವಿಭಾಗಗಳಲ್ಲಿ ರಜತ ಪದಕವನ್ನು ಮುಡಿಗೇರಿಸಿ ಕೊಂಡಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top