ಬೆಂಗಳೂರು: ಇತ್ತೀಚಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚೆಚ್ಚು ಸಾಧನೆ ಮಾಡುತ್ತಿರುವುದು ಖುಷಿ ಹಾಗೂ ಅಭಿಮಾನ ತಂದಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ವಿಧಾನಸೌಧದ ಸಭಾಪತಿ ಕಚೇರಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೆರೆಯ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿನಿ ಅಂಕಿತ ಬಸಪ್ಪ ಕೊಣ್ಣುರು ಹಾಗೂ ಮೂರನೇ ರಾಂಕ್ ಪಡೆದ ಮಂಡ್ಯ ಜಿಲ್ಲೆಯ ಕಣಲಿ ಗ್ರಾಮದ ನವನೀತ್ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು ವಿದ್ಯೆ ಯಾರ ಹಾಗೂ ಯಾವ ಜಾತಿಯ ಸ್ವತ್ತು ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಂಕಿತಾ ಮತ್ತು ನವನೀತ್ ಸಾಧನೆ, ನಾಡಿನ ವಿದ್ಯಾರ್ಥಿಗಳಿಗೆ ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ಸರ್ಕಾರಿ ಶಾಲೆಗಳೆಂದರೆ ಒಂದು ಕಾಲದಲ್ಲಿ ಮೂಗು ಮುರಿಯುವ ದಿನಗಳು ಇದ್ದವು. ಆದರೆ ಇಂದು ಸರ್ಕಾರಿ ಶಾಲೆ ಮಕ್ಕಳು ಯಾರಿಗೆ ಏನು ಕಡಿಮೆ ಇಲ್ಲ ಎಂದು ಸಾಬೀತು ಮಾಡಿ ತೋರಿಸುತ್ತಿದ್ದಾರೆ ಎಂದು ಕೊಂಡಾಡಿದರು.