ಸೋಲಿನತ್ತ ರಾಮುಲು, ಗೆಲುವಿನ ನಗೆ ಬೀರಿದ ತುಕಾರಾಂ

ಬಳ್ಳಾರಿ: ಲೋಕಸಭಾ ಚುನಾವಣೆಯ ಎಣಿಕೆ ಕಾರ್ಯ ಇಂದು ಬೆಳಗ್ಗೆಯಿಂದಲೇ ಆರಂಭಗೊಂಡಿದ್ದು, ವಿವಿಧ ಅಧಿಕಾರಿಗಳ ನೇತೃತ್ವದಲ್ಲಿ ಸ್ಟ್ರಾಂಗ್ ರೂಂ ಅನ್ನು ತೆರೆಯಲಾಯಿತು. ಮತ ಎಣಿಕೆ ಕಾರ್ಯಕ್ಕೆ ನಿರತರಾದ ಚುನಾವಣಾ ಸಿಬ್ಬಂದಿಗಳು, ಮೊದಲ ಅಂಚೆ ಮತದಾನವನ್ನು ಎಣಿಕೆ ಮಾಡಲಾಗಿದ್ದು, ಪ್ರಾರಂಭದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರಿಗೆ ಮುನ್ನಡೆ ಸಿಕ್ಕಿತ್ತು. ನಂತರದಲ್ಲಿ ಆರಂಭವಾದ ವಿವಿಪ್ಯಾಟ್ ಮತದಾನದ ಎಣಿಕೆ ಕಾರ್ಯ ನಡೆದಿದ್ದು, ಬಹುತೇಖ ಮತಗಳು ಕಾಂಗ್ರೆಸ್ ಪರ ಬಿದ್ದಿರುವುದಾಗಿ ತಿಳಿದು ಬಂದಿದೆ.

 

ಈಗಾಗಲೇ ೧೧ ಸುತ್ತಿನ ಮತ ಎಣಿಕೆ ವೇಳೆಗೆ ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಂ ಅವರು, ೫,೨೪,೦೩೪ ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ವಿರುದ್ಧ ೭೮,೧೨೬ ಹೆಚ್ಚಿನ ಮತಗಳನ್ನು ಪಡೆದಿದ್ದಾರೆ.

ಚುನಾವಣೆಗೂ ಮುನ್ನ ನಡೆದ ಪ್ರಚಾರದಲ್ಲಿ ಮಾಜಿ ಸಚಿವ ಶ್ರೀರಾಮುಲು ಹಾಗೂ ನಾಗೇಂದ್ರ ಅವರ ನಡುವೆ ಮಾತಿನ ಸಮರವೇ ನಡೆದಿತ್ತು. ಮೋದಿ ಗ್ಯಾರೆಂಟಿಗಳಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ  ಬಿಜೆಪಿ ಗೆಲುವು ಖಚಿತ ಎಂಬ ವಿಶ್ವಾಸದಲ್ಲಿದ್ದರು ಮಾಜಿ ಸಚಿವ ಶ್ರೀರಾಮುಲು ಅವರು. ಆದರೆ ಸಚಿವ ನಾಗೇಂದ್ರ ಅವರು ಮಾತ್ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ಅವರನ್ನು ಸೋಲಿಸಿದಂತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಮಕಾಡೆ ಮಲಗಿಸುವುದಾಗಿ ಚಾಲೆಂಜ್ ಹಾಕಿದ್ದರು. ಅಂತೆಯೇ ಇಂದಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯು ಹೆಚ್ಚಿನ ಮತಗಳನ್ನು ಪಡೆದಿದ್ದು, ಸಚಿವ ನಾಗೇಂದ್ರ ಅವರ ಚಾಲೆಂಜ್‌ನಲ್ಲಿ ಗೆದ್ದಂತೆ ಕಾಣುತ್ತಿದೆ.

 

ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನತ್ತ ದಾಪುಗಾಲಿಡುತ್ತಿದ್ದುದರಿಂದ ಮತ ಎಣಿಕಾ ಕೇಂದ್ರದ ಹೊರಗಡೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸುತ್ತಿದ್ದು, ಈಗಾಗಲೇ ವಿಜಯೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಅಂತೆಯೇ ರಾಜ್ಯದ ವಿವಿಧ ಕ್ಷೇತ್ರಗಳನ್ನು ನೋಡುವುದಾದರೆ ಬಹುತೇಖ ಕ್ಷೇತ್ರಗಳು ಬಿಜೆಪಿ ಜೆಡಿಎಸ್ ಪಾಲಾಗಿದ್ದು, ಕೆಲವು ಕ್ಷೇತ್ರಗಳು ಮಾತ್ರ ಕಾಂಗ್ರೆಸ್ ವಶವಾಗುತ್ತಿವೆ. ಅದರಲ್ಲಿ ಬಳ್ಳಾರಿಯೂ ಒಂದಾಗಿದೆ.

 

ಮತ ಎಣಿಕೆ ಕಾರ್ಯಕ್ಕೆ ಬಿಗಿಯಾದ ಪೊಲೀಸ್ ಭದ್ರತೆ ಆಯೋಜಿಸಲಾಗಿತ್ತು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top