ಬೆಂಗಳೂರು; ರಾಹುಲ್ ಗಾಂಧಿಯವರು ‘ಹಿಟ್ ಅಂಡ್ ರನ್’ ಪ್ರವೃತ್ತಿಯ ಪಲಾಯನವಾದಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು.
ಸುದ್ದಿಗಾರರೊಂದಿಗೆ ಜೊತೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಕರ್ನಾಟಕದ ಚುನಾವಣೆಯಲ್ಲಿ ದೊಡ್ಡಮಟ್ಟದ ಕಳ್ಳತನ ಆಗಿದೆ ಎಂದು ದೆಹಲಿಯಿಂದ ಅತೀ ಉತ್ಸಾಹದಿಂದ ಬಂದರು. ಆದರೆ ದೊಡ್ಡಮಟ್ಟದ ಕಳ್ಳತನ ಆಗಿರುವ ಬಗ್ಗೆ ಸಾಬೀತುಪಡಿಸಲು ಅವರ ಕೈಯಲ್ಲಿ ಆಗಲಿಲ್ಲ. ಕರ್ನಾಟಕ ಕಾಂಗ್ರೆಸ್ ನಾಯಕರು ಹೇಳಿಕೊಟ್ಟ ವಿಚಾರಗಳನ್ನು ಅವರ ಭಾಷಣದ ರೂಪದಲ್ಲಿ ಹೇಳಿ ಬಂದ ದಾರಿಗೆ ಸುಂಕವಿಲ್ಲವೆಂದು ವಾಪಸ್ ತೆರಳಿದರು ಎಂದು ವ್ಯಂಗ್ಯವಾಡಿದರು.
ಪ್ರಬುದ್ಧ ನಾಯಕರಾದರೆ ಹೇಳಿದ ಮಾತನ್ನು ಸಾಬೀತುಪಡಿಸುವವರೆಗೆ ಹೋರಾಟ ಮಾಡುತ್ತಾರೆ. ಚುನಾವಣಾ ಆಯೋಗವು ನೀವು ಪ್ರಮಾಣಪತ್ರದ ಮೂಲಕ ಸಹಿ ಮಾಡಿ ದೂರನ್ನು ನೀಡಿ ಎಂದು ಕೇಳಿದ್ದರು. ದೂರು ಸುಳ್ಳಾಗಿದ್ದರೆ ನೀವು ಜೈಲಿಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ಕೊಟ್ಟಿದ್ದರು. ಆದರೆ ಇವರು ಭಾಷಣ ಮಾತ್ರ ಮಾಡಿದ್ದು, ದೂರು ನೀಡುವ ಸಾಹಸ ಮಾಡಲಿಲ್ಲ. ಕಾರಣವೇನೆಂದರೆ ಇದರಲ್ಲಿ ಸತ್ಯವಿಲ್ಲ ಎಂದು ಅವರಿಗೂ ತಿಳಿದಿತ್ತು ಎಂಬುದಾಗಿ ಆಕ್ಷೇಪಿಸಿದರು.
ಮತದಾರರ ಪಟ್ಟಿಯಲ್ಲಿ ಸತ್ತವರೂ ಇದ್ದಾರೆ ಹಾಗೂ ಒಂದೇ ವಿಳಾಸ, ಹೆಸರುಗಳು ಇರುವ ಮತದಾರರ ಗುರುತಿನ ಚೀಟಿ ಇವೆ. ಈ ರೀತಿ ಇರುವ ಮತದಾರರ ಗುರುತಿನ ಚೀಟಿಗಳನ್ನು ಹುಡುಕಿ ತೆಗೆಯಬೇಕೆಂದು ನಾವು ಹೋರಾಟಗಳನ್ನು ಮಾಡಿದ್ದೇವೆ. ಆದರೆ ಕಾಂಗ್ರೆಸ್ ಪಕ್ಷದ ನಾಯಕರು ಕರ್ನಾಟಕದಲ್ಲಿ ಮತಪಟ್ಟಿ ಪರಿಶೀಲನೆ ಆಗಿಲ್ಲವೆಂದು ಹೇಳುತ್ತಿರುವುದು ಸತ್ಯ. ಇದಕ್ಕೆ ಕಾರಣ ಯಾರು ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ಮತದಾರರ ಪಟ್ಟಿಯ ಪರಿಶೀಲ£ ಮಾಡಿಸಬೇಕಾಗಿತ್ತು. ಆದರೆ ಪರಿಶೀಲನೆ ಮಾಡಿರುವುದಿಲ್ಲ. ಇಂದು ಕರ್ನಾಟಕದಲ್ಲಿ ಮತಪಟ್ಟಿ ಪರಿಶೀಲನೆ ಮಾಡಿಲ್ಲದಿರುವ ಬಗ್ಗೆ ಕಾಂಗ್ರೆಸ್ ಹೋರಾಟ ಮಾಡುತ್ತಿದ್ದಾರೆ. ಚುನಾವಣೆ ಆಯೋಗವು ಬಿಹಾರದಲ್ಲಿ ಮತಪಟ್ಟಿ ಪರಿಶೀಲನೆ ಕೆಲಸವನ್ನೇ ಮಾಡುತ್ತಿದೆ ಎಂದು ವಿವರಿಸಿದರು.
ರಾಹುಲ್ ಗಾಂಧಿಯವರಿಗೆ ಜ್ಞಾನದ ಕೊರತೆ
ಒಂದು ಕಡೆ ಬಿಹಾರದಲ್ಲಿ ಮತಪಟ್ಟಿಯಿಂದ ಹೆಸರುಗಳನ್ನು ತೆಗೆಯಬಾರದು ಎಂದು ಹೇಳುತ್ತಾರೆ. ಕರ್ನಾಟಕದಲ್ಲಿ ತೆಗೆಯಲಿಲ್ಲ ಎಂದು ಹೇಳುತ್ತಾರೆ. ಇದು ಡಬಲ್ ಸ್ಟ್ಯಾಂಡರ್ಡ್ ರಾಜಕೀಯ ಅಲ್ಲವೇ ಎಂದು ಕೇಳಿದರು.
ರಾಹುಲ್ ಗಾಂಧಿಯವರಿಗೆ ಜ್ಞಾನದ ಅರಿವಿನ ಕೊರತೆ ಇರುವುದರಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಆದ್ದರಿಂದ ಜನರು ರಾಹುಲ್ ಗಾಂಧಿಯವರಿಗೆ ಆಳವಾದ ಜ್ಞಾನವಿಲ್ಲ ಎಂದು ಹೇಳುತ್ತಾರೆ ಎಂದು ಟೀಕಿಸಿದರು.