ಬಳ್ಳಾರಿ: ಪ್ರಸ್ತುತ ವಿದ್ಯುತ್ ಶುಲ್ಕ ಹೆಚ್ಚಳ ವಿರೋಧಿಸಿ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಜೂನ್ 22ರಂದು ನೀಡಿರುವ ‘ಕರ್ನಾಟಕ ಬಂದ್ ಯಶಸ್ವಿಗೊಳಿಸಲು ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕೆ ಸಂಸ್ಥೆ ನಿರ್ಧರಿಸಿದೆ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಸಿ.ಶ್ರೀನಿವಾಸರಾವ್, ಗೌರವ ಕಾರ್ಯದರ್ಶಿ ಯಶವಂತ್‌ರಾಜ್ ನಾಗಿರೆಡ್ಡಿ ಅವರು ತಿಳಿಸಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕೆ ಸಂಸ್ಥೆಯ ಸಭಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸೋಮವಾರ ನಡೆದ ಬಳ್ಳಾರಿ ಜಿಲ್ಲಾ ರೈಸ್ ಮಿಲ್ ಅಸೋಸಿಯೇಷನ್, ಇಂಡಸ್ಟ್ರಿಯಲ್ ಅಸೋಸಿಯೇಷನ್, ಸ್ಪಾಂಜ್ ಐರನ್ ಅಸೋಸಿಯೇಷನ್, ಗಾರ್ಮೆಂಟ್ಸ್ ಅಸೋಸಿಯೇಷನ್, ಕೋಲ್ಡ್ ಸ್ಟೋರೇಟ್ ಅಸೋಸಿಯೇಷನ್, ಎಪಿಎಂಸಿ ಮರ್ಚೆಂಟ್ಸ್ ಅಸೋಸಿಯೇಷನ್ ಸೇರಿದಂತೆ ವಿವಿಧ ಸಂಘ – ಸಂಸ್ಥೆಗಳ ಪದಾಧಿಕಾರಿಗಳ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಶಾಂತಿಯುತ ಬಂದ್ ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
“ಕರ್ನಾಟಕದ ಬಂದ್’ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಗುರುವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವ್ಯಾಪಾರ, ವಾಣಿಜ್ಯೋದ್ಯಮಗಳು ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ನಿಲ್ಲಸುವ ಮೂಲಕ ಬಂದ್ ಆಚರಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಸಲು ನಿರ್ಧರಿಸಿವೆ ಎಂದರಲ್ಲದೆ, ಶಾಲಾ ಕಾಲೇಜುಗಳು, ಸಾರ್ವಜನಿಕ ಸಾರಿಗೆ, ಆರೋಗ್ಯ ಸೇರಿ ನಾಗರಿಕರ ಜನಜೀವನ ಸಾಮಾನ್ಯವಾಗಿರುತ್ತದೆ. ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಸಭೆ ಸೇರುವ ಪ್ರತಿಭಟನಾಕಾರರು ಬೆಂಗಳೂರು ರಸ್ತೆ, ತೇರು ಬೀದಿ ಮೂಲಕ ಎಚ್‌ಆರ್‌ಜಿ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯನ್ನು ತಲುಪಿ ಜಿಲ್ಲಾಡಳಿತಕ್ಕೆ ಪ್ರತಿಭಟನಾ ಮನವಿ ಪತ್ರ ಸಲ್ಲಿಸುವ ಮೂಲಕ ಸಮಾರೋಪಗೊಳ್ಳಲಿದೆ ಎಂದರು.
‘ಕರ್ನಾಟಕ ಬಂದ್’ನಲ್ಲಿ ಪಾಲ್ಗೊಳ್ಳಲು ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕೆ ಸಂಸ್ಥೆಯಲ್ಲಿ ನೋಂದಣಿಯಾಗಿರುವ ಸಂಘಗಳ ಜೊತೆಯಲ್ಲಿ ನಾಗರೀಕರ ಹಿತಾಸಕ್ತಿ ಕಾಪಾಡುವ ಸಂಘ – ಸಂಸ್ಥೆಗಳನ್ನು, ಸಾರ್ವಜನಿಕರನ್ನು ಆಹ್ವಾನಿಸಲಾಗುತ್ತದೆ. ವಿದ್ಯುತ್ ಶುಲ್ಕ ಹೆಚ್ಚಳದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವನ್ನು ಕಲ್ಪಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಉಪಾಧ್ಯಕ್ಷ ಜಿ.ಮಹಾರುದ್ರಗೌಡ, ಉಪಾಧ್ಯಕ್ಷರುಗಳಾದ ಎ.ಮಂಜುನಾಥ, ಕೆ.ರಮೇಶ್(ಬುಜ್ಜಿ) ಕೆ.ಸುರೇಶ್ ಬಾಬು, ಜಂಟಿಕಾರ್ಯದರ್ಶಿಗಳಾದ ಎಸ್.ದೊಡ್ಡನಗೌಡ, ಸೊಂತ್ ಗಿರಿಧರ್ ಹಾಗೂ ವಿವಿಧ ಕಮಿಟಿ ಚೇರ್ಮನ್‍ಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿವಿಧ ಸಂಘ/ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.