ಬಡತನ, ಹಸಿವು, ಅಪೌಷ್ಟಿಕತೆ, ಅಸಮಾನತೆ ಈಗಲೂ ದೇಶದ ಗಂಭೀರ ಸಮಸ್ಯೆಗಳಾಗಿವೆ : ಕೆ.ಪಿ. ಕೃಷ್ಣಪ್ರಸಾದ್

ಬೆಂಗಳೂರು: ಬಡತನ, ಹಸಿವು, ಅಪೌಷ್ಟಿಕತೆ, ಅಸಮಾನತೆ ಈಗಲೂ ದೇಶದ ಗಂಭೀರ ಸಮಸ್ಯೆಗಳಾಗಿವೆ ಎಂದು ಕೆ.ಪಿ. ಕೃಷ್ಣಪ್ರಸಾದ್ ತಿಳಿಸಿದರು.

ನಗರದ ಗ್ರೀನ್ ಪಾತ್ ಆರ್ಗಾನಿಕ್ ನಲ್ಲಿ ಇನ್ ಸ್ಟಿಟ್ಯೂಟ್ ಆಫ್ ಮೀಡಿಯಾ ಸ್ಟಡೀಸ್ ಆಂಡ್ ರಿಸರ್ಚ್ (ಐಎಂಎಸ್ಆರ್) ಶನಿವಾರ ಹಮ್ಮಿಕೊಂಡಿದ್ದ ಪತ್ರಕರ್ತ ವಿಜಯಕುಮಾರ್ ಎಸ್.ಕೆ. ಅವರಿಗೆ  ‘ಬಿ.ಆರ್. ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ-2024’ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ದೇಶದ ಒಟ್ಟಾರೆ ವೃದ್ಧಿ ದರ (ಜಿಡಿಪಿ) ಶೇ. 8.2 ತಲುಪಿದೆ. ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧನೆಯತ್ತ ದಾಪುಗಾಲಿಡುತ್ತಿರಬಹುದು. ಆದರೆ, ಹಸಿವು, ಬಡತನ ಮತ್ತು ಅಪೌಷ್ಟಿಕತೆ ಪ್ರಮಾಣ ಕೂಡ ಅಷ್ಟೇ ವೇಗದಲ್ಲಿ ಹೆಚ್ಚಾಗುತ್ತಿದೆ. ಕೋವಿಡ್ ಹಾವಳಿ ನಂತರ ಪ್ರತಿ ಮೂರು ಕುಟುಂಬಗಳಲ್ಲಿ ಎರಡು ಕುಟುಂಬಗಳು ಕಡಿಮೆ ಆಹಾರ ಸೇವನೆ ಮಾಡುತ್ತಿವೆ. ಇದು ವಾಸ್ತವ ಸ್ಥಿತಿಯಾಗಿದ್ದು, ಈ ನಿಟ್ಟಿನಲ್ಲಿ ಮಾಧ್ಯಮಗಳು ಸೇರಿದಂತೆ ಪ್ರತಿಯೊಬ್ಬರು ಗಂಭಿರವಾಗಿ ಯೋಚಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ವಿಶ್ವದ ಹಸಿವಿನ ಸೂಚ್ಯಂಕದಲ್ಲಿ ಭಾರತ 111ನೇ ಸ್ಥಾನದಲ್ಲಿದೆ. 2014ರಲ್ಲಿ 55ನೇ ಸ್ಥಾನದಲ್ಲಿತ್ತು. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 193 ದೇಶಗಳಲ್ಲಿ 134ನೇ ಸ್ಥಾನದಲ್ಲಿದ್ದೇವೆ. ಕಳೆದ ಹತ್ತು ವರ್ಷಗಳಲ್ಲಿ ರೈತರಿಗೆ ಕೃಷಿ ಆದಾಯ ಶೇ. 10ರಷ್ಟು ಕಡಿಮೆಯಾಗಿದೆ ಎಂದು ಅಂಕಿ-ಅಂಶಗಳ ಸಹಿತ ತೆರೆದಿಟ್ಟರು.

ದೇಶದ ಜಿಡಿಪಿ ಶೇ‌ 8.2 ತಲುಪಿದ್ದರೂ, ತಲಾ ಜಿಡಿಪಿ ಕೇವಲ ಎರಡು ಲಕ್ಷ ರೂಪಾಯಿ ಇದೆ. ನೆರೆಯ ಚೀನಾ ದೇಶದಲ್ಲಿ ಇದು ಆರುಪಟ್ಟು ಹೆಚ್ಚಿದೆ ಎಂದು ಸೂಚ್ಯವಾಗಿ ಹೇಳಿದರು.

ವಿಜ್ಞಾನ ಲೇಖಕ ಉದಯ ಶಂಕರ ಪುರಾಣಿಕ್ ಮಾತನಾಡಿ, ಕೃತಕ ಬುದ್ಧಿನತ್ತೆಯಿಂದ ಯಾರೂ ಕೆಲಸ ಕಳೆದುಕೊಳ್ಳುವುದಿಲ್ಲ. ಆ ಭೀತಿ ಬೇಡ. ಅದರೊಂದಿಗೆ ಕೆಲಸ ಮಾಡಲು ಸಾಸದ್ಯವಾಗದವರು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಅಷ್ಟಕ್ಕೂ ಈಗ ಬಳಕೆಯಲ್ಲಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು (ಎಐ) ನಿರ್ದಿಷ್ಟ ‘ಪ್ರೋಗ್ರಾಮ್’ ಆಧಾರಿತ ಆಗಿರುವುದರಿಂದ ಉದ್ಯೊಗ ನಷ್ಟದ ಭಯ ಪಡಬೇಕಾಗಿಲ್ಲ ಎಂದು ಪುನರುಚ್ಛರಿಸಿದ ಅವರು, ಶಿಕ್ಷಣ ಮತ್ತು ಉದ್ಯಮದ ನಡುವಿನ ಅಂತರ ಕಡಿಮೆ ಆಗಬೇಕು. ಪ್ರಚಲಿತ ತಂತ್ರಜ್ಞಾನಕ್ಕೆ ಪೂರಕವಾದ ಶಿಕ್ಷಣದ ಅವಶ್ಯಕತೆ ಇದೆ ಎಂದು ತಿಳಿಸಿದರು. 

ಈಗ ಬಳಕೆಯಲ್ಲಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಅತ್ಯಂತ ದುರ್ಬಲವಾಗಿದೆ. ‘ಪ್ರೋಗ್ರಾಮ್’ಗೆ ಅನುಗುಣವಾಗಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಅಷ್ಟುಕ್ಕೂ ಈ ತಂತ್ರಜ್ಞಾನದಲ್ಲಿ ಹಲವು ವಿಧಗಳಿದ್ದು, ಭವಿಷ್ಯದಲ್ಲಿ ಇನ್ನಷ್ಟು ಸುಧಾರಣೆಗೊಂಡ ಮಾದರಿಯಲ್ಲಿ ಬರಲಿದೆ’ ಎಂದು ಹೇಳಿದರು. 

ದತ್ತಿ ದಾನಿ ಸಿ.ರಾಜಣ್ಣ, ‘ಪುತ್ರ ರೋಹಿತ್ 14 ವರ್ಷಗಳು ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ. ಅಲ್ಪಾವಧಿಯಲ್ಲಿಯೇ ಈ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಿದ್ದ’ ಎಂದು ಸ್ಮರಿಸಿದರು.

 

ಐಎಂಎಸ್ಆರ್ ಅಧ್ಯಕ್ಷ ಡಾ.ಕೆ.ವಿ. ನಾಗರಾಜ್, ಹಿರಿಯ ಪತ್ರಕರ್ತ ಎಚ್.ಆರ್. ಶ್ರೀಶ ಮಾತನಾಡಿದರು. ಪತ್ರಕರ್ತ ಗುರು ಪಿ.ಎಸ್. ಪರಿಚಯಿಸಿದರು. ದಿ. ರೋಹಿತ್ ತಾಯಿ ಕೆ.ವಿ. ಲಲಿತಾ ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top