ಸಕಾರಾತ್ಮಕ ಪತ್ರಿಕೋದ್ಯಮ ಎಂಬುದು ಮಾಂಸದಂಗಡಿಯಲ್ಲಿ ಹೂ ಮಾರಾಟದಂತೆ ಅತ್ಯಂತ ಅಪರೂಪ –ನಂಜುಂಡಪ್ಪ

ಬೆಂಗಳೂರು: ಸಕಾರಾತ್ಮಕ ಪತ್ರಿಕೋದ್ಯಮ ಮಾಂಸದಂಗಡಿಯಲ್ಲಿ ಹೂ ಮಾರಾಟದಂತೆ ಅತ್ಯಂತ ಅಪರೂಪ ಎಂದು ಹಿರಿಯ ಪತ್ರಕರ್ತ ಮತ್ತು ನಿರೂಪಕ ವಿ.ನಂಜುಂಡಪ್ಪ ಹೇಳಿದ್ದಾರೆ. 

ದೊಡ್ಡಬಳ್ಳಾಪುರದ ಟಿ.ಬಿ. ಸರ್ಕಲ್ ನ ಲಯನ್ಸ್ ಡಯಾಲಿಸಸ್ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ಅಧ್ಯಕ್ಷತೆಯ ಮಾಸ ಪತ್ರಿಕೆ “ವಿಜ್ಞಾನ ಸಿರಿ”ಯಿಂದ ಆಯೋಜಿಸಲಾದ “ಸಿರಿ ಸಂಪದ ಚಿಂತನ – ಮಂಥನ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಿಕೋದ್ಯಮದ ಮೌಲ್ಯಗಳು ನಶಿಸುತ್ತಿವೆ. 

ಸಕಾರಾತ್ಮಕತೆಗೆ ಎಲ್ಲಿಯೂ ಜಾಗವಿಲ್ಲದ ಇಂತಹ ಕಾಲಘಟ್ಟದಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಪಸರಿಸುವ, ಸಕಾರಾತ್ಮಕ ಅಂಶಗಳನ್ನು ಬಿತ್ತಿರುಸುವ, ಸದಾಶಯಗಳ ಪ್ರತೀಕವಾಗಿರುವ ವಿಜ್ಞಾನ ಸಿರಿ ಪತ್ರಿಕೆ ನಿಜಕ್ಕೂ ಮಾಂಸದಂಗಡಿಯಲ್ಲಿ ಹೂವು ಮಾರಾಟದಂತೆ ಅತ್ಯಂತ ಅಪರೂಪದ ಸಾಲಿಗೆ ಸೇರುತ್ತದೆ. ಪತ್ರಿಕೋದ್ಯಮದ ಘನತೆ, ಗೌರವವನ್ನು ಎತ್ತಿ ಹಿಡಿಯುವ, ಹೂವಿನ ಪರಿಮಳದ ಘಮಲು ಹರಡುವ ಕೆಲಸ ಈ ಪತ್ರಿಕೆಯ ಮೂಲಕ ಆಗುತ್ತಿದೆ. ವಿಜ್ಞಾನ ಶಿಕ್ಷಕರು, ವಿದ್ಯಾರ್ಥಿಗಳನ್ನು ಒಳಗೊಂಡಂತೆ ಸಮಾಜದ ಪ್ರತಿಯೊಬ್ಬರಲ್ಲಿ ಪತ್ರಿಕೆ ಸಕಾರಾತ್ಮಕ ಚಿಂತನೆಯನ್ನು ಹರಿಸಲಿ ಎಂದು ಆಶಿಸಿದರು. 

ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷ ಆರ್. ಶ್ರೀಧರ್ ಮಾತನಾಡಿ, ಪತ್ರಿಕೋದ್ಯಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ ಸಮಾಜದಲ್ಲಿ ನಂಬಿಕೆ ಮೂಡುವ ರೀತಿಯಲ್ಲಿ ಪತ್ರಿಕೆಯನ್ನು ಹೊರ ತರಬೇಕು. ವಿಜ್ಞಾನ ವಿಚಾರಗಳಿಗೆ ಆದ್ಯತೆ ನೀಡಬೇಕು. ನಂಬಿಕೆ ಸಹಜವಾದದ್ದು, ಮೂಢನಂಬಿಕೆ ಅಪಾಯಕಾರಿಯಾಗಿದ್ದು. ಹೀಗಾಗಿ ಸಮಾಜದಲ್ಲಿನ ಮೌಢ್ಯ, ಕಂದಾಚಾರಗಳ ನಿವಾರಣೆಗೆ ಪತ್ರಿಕೆ ಆದ್ಯತೆ ನೀಡಬೇಕು ಎಂದು ಕಿವಿ ಮಾತು ಹೇಳಿದರು. 

“ಪತ್ರಕರ್ತನ ಮನಸ್ಥಿತಿ” ಕುರಿತು ಉಪನ್ಯಾಸ ನೀಡಿದ ಹಿರಿಯ ಮನೋ ವಿಜ್ಞಾನಿ ಡಾ. ಶ್ರೀಧರ್, ಪತ್ರಕರ್ತರಾದವರು ಎಲ್ಲವನ್ನು ಒಪ್ಪಿಕೊಳ್ಳಬಾರದು. ಅಪ್ಪಿಕೊಳ್ಳಬಾರದು. ಪ್ರಶ್ನಿಸುವ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು. ಪೂರ್ವಾಗ್ರಹ ಹೊಂದಿರಬಾರದು. ವಿಷಯವನ್ನು ಗ್ರಹಿಸುವ, ವಿಶ್ಲೇಷಿಸುವ, ವಿಮರ್ಶಿಸುವ ಮನಃಸ್ಥಿತಿಯನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದಲ್ಲಿ ಅಪರಾಧಿ ಮನೋಭಾವನೆ ಹೆಚ್ಚಾಗುತ್ತಿದ್ದು, ಅಪರಾಧ ಚಟುವಟಿಕೆಗಳು ಸಹ ವೃದ್ಧಿಸಿವೆ. ಇದಕ್ಕೆ ಮನಸ್ಥಿತಿಯಲ್ಲಿ ಆದ ಬದಲಾವಣೆಯೇ ಕಾರಣವೇ?. ಅಥವೇ ಬೇರೆ ಕಾರಣಗಳಿವೆಯೇ? ಎಂಬ ನಿಗೂಢತೆಯನ್ನು ಬೆನ್ನತ್ತಿ ಬರೆದು ಸಮಾಜ ತಿದ್ದುವ ಕೆಲಸ ಮಾಡಬೇಕು ಎಂದರು. 

ಡಾ.ಹುಲಿಕಲ್ ನಟರಾಜ್ ಮಾತನಾಡಿ, “ವಿಜ್ಞಾನ ಸಿರಿ” ಪತ್ರಿಕೆ ಎಲ್ಲರ ಮನೆ, ಮನಗಳನ್ನು ತಲುಪಬೇಕು ಎಂಬು ಮಹತ್ವಾಕಾಂಕ್ಷೆ ಹೊಂದಿದ್ದೇವೆ. ಇದಕ್ಕೆ ನುರಿತ ಪತ್ರಕರ್ತರು, ಗಣ್ಯರ ಮಾರ್ಗದರ್ಶನ ಪಡೆಯುತ್ತಿದ್ದೇವೆ. ಪತ್ರಿಕೆಗೆ ಹೊಸ ವಿನ್ಯಾಸದ ಜೊತೆಗೆ ಡಿಜಿಟಲ್ ಸ್ಪರ್ಷ ನೀಡಲಾಗುತ್ತಿದೆ ಎಂದು ಹೇಳಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top