ಸಿರುಗುಪ್ಪ: ಅಂತರ್ ರಾಜ್ಯ ಡಕಾಯಿತಿನ ಮೇಲೆ ಪೊಲೀಸರು ಫೈರ್ ಮಾಡಿರುವ ಘಟನೆ ಸಿರುಗುಪ್ಪ ನಗರದಲ್ಲಿ ನಡೆದಿದೆ.
ಕರ್ನಾಟಕ, ತೆಲಂಗಾಣ, ಆಂಧ್ರ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಕಳ್ಳತನ ಮತ್ತು ಡಕಾಯಿತಿ ಪ್ರಕರಣಗಳಲ್ಲಿ ಭಾಗವಹಿಸಿರುವ ಆರೋಪಿ ಅಂಬ್ರೇಶ್ ಪೊಲೀಸರ ಮೇಲೆ ಹಲ್ಲೆ ಪ್ರಯತ್ನ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಸಿಂಧನೂರು ಮೂಲದ ಅಂಬ್ರೇಶ್ ನನ್ನು ಸಿರುಗುಪ್ಪ ಪೋಲಿಸರು ನಗರದ ಸಿಂಧನೂರು ರಸ್ತೆಯಲ್ಲಿ ಇರುವ ಸಾರ್ವಜನಿಕ ರುದ್ರಭೂಮಿಯಲ್ಲಿ ಸ್ಥಳ ಮಹಜರಿಗಾಗಿ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಪೋಲಿಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಸಿಪಿಐ ವೈಎಸ್ ಹನುಮಂತಪ್ಪ ಆರೋಪಿ ಕಾಲಿಗೆ ಗುಂಡು ಹಾರಿಸಿದರು. ಗಾಯಗೊಂಡ ಆರೋಪಿಯನ್ನು ಬಂಧಿಸಿ ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಿರುಗುಪ್ಪ ಪೊಲೀಸ್ ಪೇದೆಗಳಾದ ವಿರುಪಾಕ್ಷಪ್ಪ ಗೌಡ ಮತ್ತು ಮಾರುತಿ ಅವರಿಗೆ ಗಾಯಗಳಾಗಿದ್ದು ಅವರಿಗೆ ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.