ಜೆಡಿಎಸ್ ಜೊತೆ ಸಣ್ಣ ಗೊಂದಲವೂ ಬೇಡ: ಅಮಿತ್ ಶಾ ಕಟ್ಟಪ್ಪಣೆ….!!!

ಜೆಡಿಎಸ್ ಜೊತೆ ಸಣ್ಣ ಗೊಂದಲವೂ ಬೇಡ: ಅಮಿತ್ ಶಾ ಕಟ್ಟಪ್ಪಣೆ….!!!

Kannada Nadu
ಜೆಡಿಎಸ್ ಜೊತೆ ಸಣ್ಣ ಗೊಂದಲವೂ ಬೇಡ: ಅಮಿತ್ ಶಾ ಕಟ್ಟಪ್ಪಣೆ….!!!

ಜೆಡಿಎಸ್ ಜೊತೆ ಸಣ್ಣ ಗೊಂದಲವೂ ಬೇಡ: ಅಮಿತ್ ಶಾ ಕಟ್ಟಪ್ಪಣೆ….!!!

ಬೆಂಗಳೂರು,ಜೂ,20-ಮುಂಬರುವ ವಿಧಾನಸಬಾ ಚುನಾವಣೆಯಲ್ಲಿ ಜೆಡಿಎಸ್ ಜತೆ ಒಗ್ಗೂಡಿ ಹೋಗಲು ಸಜ್ಜಾಗುವಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯದ ನಾಯಕರಿಗೆ ಸೂಚನೆ ನೀಡಿದ್ದು,ಜೆಡಿಎಸ್ ಜತೆಗಿನ ಮೈತ್ರಿ ವಿಷಯದಲ್ಲಿ ಸಣ್ಣ ಗೊಂದಲಕ್ಕೂ ಅವಕಾಶ ನೀಡಬಾರದು ಎಂದು ಕಟ್ಟಪ್ಪಣೆ ವಿಧಿಸಿದ್ದಾರೆ.

ಎರಡು ದಿನಗಳ ಭೇಟಿಯ ಸಲುವಾರಿ ರಾಜ್ಯಕ್ಕೆ ಆಗಮಿಸಿರುವ ಅಮಿತ್ ಷಾ ಅವರು ಇಂದು ಯಡಿಯೂರಪ್ಪ,ವಿಜಯೇಂದ್ರ ಮತ್ತಿತರ ನಾಯಕರ ಜತೆ ಸುಧೀರ್ಘ ಚರ್ಚೆ ನಡೆಸಿದ್ದಲ್ಲದೆ ಜೆಡಿಎಸ್ ಜತೆಗಿನ ಮೈತ್ರಿಯ ಬಗ್ಗೆ ಕೆಲ ನಾಯಕರು ಅಪಸ್ವರ ಎತ್ತುತ್ತಿರುವ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಜತೆಗೂಡಿ ಹೋಗುವ ಬದಲು ನಾವೇ ಏಕಾಂಗಿಯಾಗಿ ಚುನಾವಣೆಗೆ ಹೋದರೆ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯಬಹುದು ಎಂಬ ಮಾತು ಕೆಲ ನಾಯಕರಿಂದ ಕೇಳಿ ಬರುತ್ತಿದ್ದು, ಇಂತಹ ಮಾತುಗಳಿಗೆ ಅರ್ಥವಿಲ್ಲ.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಮತ ಬ್ಯಾಂಕನ್ನು ಎದುರಿಸಲು ಬಿಜೆಪಿ-ಜೆಡಿಎಸ್ ಒಗ್ಗೂಡಿ ಮುನ್ನಡೆಯುವುದು ಅನಿವಾರ್ಯ. ಲೋಕಸಭಾ ಚುನಾವಣೆಯಲ್ಲಿ ಇದು ನಿಸ್ಸಂಶಯವಾಗಿ ಸಾಬೀತಾಗಿದ್ದು,ಇಷ್ಟಾದ ನಂತರವೂ ಒಬ್ಬಂಟಿಯಾಗಿ ಚುನಾವಣೆ ಎದುರಿಸಬೇಕು ಎಂಬ ನಿಲುವು ಸರಿಯಲ್ಲ ಎಂದು ಅಮಿತ್ ಷಾ ಸ್ಪಷ್ಟವಾಗಿ ಹೇಳಿದ್ದಾರೆನ್ನಲಾಗಿದೆ.

ಹೀಗೆ ಉಭಯ ಪಕ್ಷಗಳು ಒಗ್ಗೂಡಿ ಚುನಾವಣೆ ಎದುರಿಸಿದರೆ ನೂರಾ ನಲವತ್ತರಿಂದ ನೂರಾ ಐವತ್ತು ಕ್ಷೇತ್ರಗಳಲ್ಲಿ ಗೆಲುವು ಗಳಿಸಬಹುದು ಎಂಬಮಾಹಿತಿ ಹೈಕಮಾಂಡ್ ಗಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ನಾಯಕರು ಯಾವ ಗೊಂದಲಕ್ಕೂ ಅವಕಾಶ ನೀಡದೆ ಜೆಡಿಎಸ್ ಜತೆ ಹೊಂದಿಕೊಂಡು ಹೋಗಬೇಕು ಎಂದು ಅಮಿತ್ ಷಾ ಹೇಳಿದ್ದಾರೆ.

ಕರ್ನಾಟಕದ ಜಾತಿ ಸ್ವರೂಪವನ್ನು ಗಮನಿಸಿದರೆ ನಮಗೆ ಜೆಡಿಎಸ್ ಜತೆಗಿನ ಹೊಂದಾಣಿಕೆ ಅನಿವಾರ್ಯ ಎಂದಿರುವ ಅಮಿತ್ ಷಾ,ರಾಜ್ಯ ಸರ್ಕಾರದ ವಿರುದ್ಧ ಹೋರಾಟಗಳನ್ನು ರೂಪಿಸುವಾಗ ಜೆಡಿಎಸ್ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ, ಬಿಜೆಪಿಯ ಒಂದು ಬಣ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ಬೇಕಿಲ್ಲ ಎಂಬ ನಿಲುವು ತಳೆದಿದ್ದು,ಇದೇ ಕಾರಣಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ ನಡೆಸುತ್ತಿರುವ ಹೋರಾಟಗಳಲ್ಲಿ ಆ ಪಕ್ಷವನ್ನು ತೊಡಗಿಸಿಕೊಳ್ಳುತ್ತಿಲ್ಲ.

ಆದರೆ ಈ ಬೆಳವಣಿಗೆ ಬಿಜೆಪಿ ವರಿಷ್ಟರನ್ನು ಕೆರಳಿಸಿದ್ದು ರಾಜ್ಯ ಬಿಜೆಪಿಯ ಉಸ್ತುವಾರಿ ಹೊತ್ತಿರುವ ರಾಧಾ ಮೋಹನ್ ದಾಸ್ ಅಗರ್ವಾಲ್ ಈ ಕುರಿತು ಎಚ್ಚರಿಕೆ ನೀಡಿದ್ದರೆನ್ನಲಾಗಿದೆ.

ಇಷ್ಟಾದರೂ ಜೆಡಿಎಸ್ ನಿಂದ ಅಂತರ ಕಾಯ್ದುಕೊಳ್ಳುವ ಚಾಳಿ ಮುಂದುವರಿದ ಹಿನ್ನೆಲೆಯಲ್ಲಿ ಖುದ್ದು ಅಮಿತ್ ಷಾ ಅವರೇ ಈ ಬಾರಿ ಬೆಂಗಳೂರಿಗೆ ಬಂದು ಚಾಟಿ ಬೀಸಿದ್ದಾರೆ.

ಹೀಗೆ ಅಮಿತ್ ಷಾ ಅವರು ಬಂದು ಚಾಟಿ ಬೀಸಿದ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ನಾಯಕರು ಎಚ್ಚೆತ್ತಿದ್ದು, ಜೆಡಿಎಸ್ ಜತೆಗಿನ ಹೊಂದಾಣಿಕೆಗೆ ಸಮನ್ವಯ ಸಮಿತಿಯನ್ನು ರಚಿಸುವ ಆಸ್ಥೆ ತೋರಿಸಿದ್ದಾರೆ.

ಸ್ವತ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೂ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಜೆಡಿಎಸ್ ಜತೆ ಹೊಂದಿಕೊಂಡು ಹೋಗುವ ವಿಷಯದಲ್ಲಿ ತಮಗೆ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";