ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಮೊತ್ತದ ಹಗರಣಕ್ಕೆ ಸಂಬಂಧಿಸಿ ಹಣಕಾಸು ಇಲಾಖೆ ನಿರ್ವಹಿಸುತ್ತಿರುವ ಮುಖ್ಯಮಂತ್ರಿಗಳ ರಾಜೀನಾಮೆ ಪಡೆಯುವಂತೆ ರಾಜ್ಯಪಾಲರನ್ನು ಕೋರಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ವಿಧಾನಸೌಧದಿಂದ ರಾಜಭವನಕ್ಕೆ ಕಾಲ್ನಡಿಗೆಯಲ್ಲಿ ಶಾಸಕರ ಜೊತೆ ತೆರಳಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜಭವನದಲ್ಲಿ ಇಂದು ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ಹೈದರಾಬಾದ್‍ನಲ್ಲಿ 18ಕ್ಕೂ ಹೆಚ್ಚು ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಹಣವನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ. ಹಣಕಾಸು ಇಲಾಖೆ ಅನುಮತಿ ಇಲ್ಲದೇ ಇದು ನಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಗಮನಕ್ಕೆ ಬರದೇ ಈ ಹಗರಣ ನಡೆದಿರಲು ಸಾಧ್ಯವಿಲ್ಲ. ಕೇವಲ ಸಚಿವರ ರಾಜೀನಾಮೆ ಪಡೆದರೆ ಸಾಲದು ಎಂದು ಅವರು ನುಡಿದರು. ರಾಜ್ಯದ ಇತಿಹಾಸದಲ್ಲಿ ಇಂಥ ದೊಡ್ಡ ಹಗರಣ ನಡೆದಿರಲಿಲ್ಲ ಎಂದು ತಿಳಿಸಿದರು. ಹಗರಣ ನಡೆದು ಇಷ್ಟು ದಿನ ಆದರೂ ಸಚಿವರ ರಾಜೀನಾಮೆ ಪಡೆಯಲು ಸಿಎಂ ಹಿಂದೆ ಮುಂದೆ ನೋಡುತ್ತಿದ್ದಾರೆ. ಸಿಬಿಐ ತನಿಖೆಗೆ ಕೋರಿದ್ದು, ಅದಕ್ಕೂ ಮಣಿದಿಲ್ಲ ಎಂದು ಆಕ್ಷೇಪಿಸಿದರು.
ಈ ವಿಚಾರವನ್ನು ಇಲ್ಲಿಗೇ ಕೈಬಿಡುವುದಿಲ್ಲ. ವಿಪಕ್ಷವಾಗಿ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಮುಖ್ಯಮಂತ್ರಿಯವರು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಆನೆ ನಡೆದಿದ್ದೇ ದಾರಿ ಎಂಬಂತೆ ಮುಖ್ಯಮಂತ್ರಿಯವರ ವರ್ತನೆಯನ್ನು ಖಂಡಿಸುತ್ತೇವೆ ಎಂದು ತಿಳಿಸಿದರು.
ಈ ವಿಷಯದಲ್ಲಿ ರಾಜ್ಯವ್ಯಾಪಿ ಹೋರಾಟ ಮಾಡಲಿದ್ದೇವೆ ಎಂದು ಅವರು ಎಚ್ಚರಿಸಿದರು. 20 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವುದಾಗಿ ಹೇಳಿದ್ದೀರಿ; ಈಗ ಸರಕಾರದ ಯೋಗ್ಯತೆ ಏನೆಂದು ಮತದಾರರು ತೋರಿಸಿಕೊಟ್ಟಿದ್ದಾರೆ ಎಂದು ಈ ಕುರಿತ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.