ವಿನಾಶಕಾಲೇ ವಿಪರೀತ ಸುಳ್ಳು; ಸಿದ್ದರಾಮಯ್ಯಗೆ ಕುಟುಕಿದ ಹೆಚ್‌ಡಿಕೆ

ಬೆಂಗಳೂರು: ಮೈತ್ರಿ ಸರಕಾರ ರಚನೆ ಮಾಡಲು ಜೆಡಿಎಸ್‌ʼನವರ ಮನೆ ಬಾಗಿಲಿಗೆ ಹೋಗಿಲ್ಲ. ವರಿಷ್ಠರ ಜತೆ ಮಾತುಕತೆ ಆಗಿದ್ದು ನಿಜ. ನಾನಂತೂ ಅವರ ಮನೆಗೆ ಹೋಗಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ನೀಡಿದ ಹೇಳಿಕೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಇಂದು ಬೆಳಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು; “ಜೆಡಿಎಸ್‌ ನಾಯಕರು ಮತ್ತು ಪಕ್ಷದ ಬಗ್ಗೆ ಸರಣಿ ಸುಳ್ಳುಗಳನ್ನು ಹೇಳುತ್ತಿರುವ ಅವರು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ” ಎಂದು ಹೇಳಿದ್ದಾರೆ. ಹೆಚ್‌ʼಡಿಕೆ ಅವರ ಟ್ವೀಟಿನ ಪೂರ್ಣ ಪಾಠ ಇಲ್ಲಿದೆ. ಕಟ್ಟುವುದು ಮನುಷ್ಯತ್ವ, ಕೆಡವೋದು ರಾಕ್ಷಸತ್ವ. ನಿಮಗೆ ಕೆಡವಿ ಗೊತ್ತೇ ವಿನಾ ಕಟ್ಟಿ ಗೊತ್ತಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂದು ಹೇಳಿ ನಮ್ಮ ಮನೆ ಬಾಗಿಲಿಗೆ ಬಂದ ಕಾಂಗ್ರೆಸ್‌ ನಾಯಕರು ಸರಕಾರದ ನೇತೃತ್ವ ವಹಿಸಿ ಎಂದರು. ಹಾಗಾದರೆ, ಪಕ್ಷದ ನಿರ್ಧಾರಕ್ಕೂ ನಿಮಗೂ ಸಂಬಂಧ ಇಲ್ಲವಾ ಮಿಸ್ಟರ್ ಸಿದ್ದಸೂತ್ರದಾರ, ನಾನು ಯಾವತ್ತೂ ಜೆಡಿಎಸ್‌ʼನವರ ಮನೆ ಬಾಗಿಲಿಗೆ ಹೋಗಿಲ್ಲ ಎನ್ನುತ್ತೀರಿ, ನಿಮ್ಮನ್ನು ಬನ್ನಿ ಅಂತ ಕರೆದವರು ಯಾರು? ನಾವೇನು ಎಲೆ-ಅಡಿಕೆ ಕೊಟ್ಟು ಆಹ್ವಾನ ಕೊಟ್ಟೆವಾ? ಬಂದವರು ಯಾರು? ಬೆಂಬಲದ ಭಿಕ್ಷೆ ಬೇಡಿದವರು ಯಾರು? ದೆಹಲಿ ನಾಯಕರು ನಮ್ಮ ಮನೆ ಬಾಗಿಲಲ್ಲಿ ನಿಂತಿದ್ದಾಗಲೇ ಮೈತ್ರಿಗೆ ಕುಣಿಕೆ ಬಿಗಿಯಲು ಯತ್ನಿಸಿದವರು ಯಾರು ಮಿಸ್ಟರ್‌ ಟರ್ಮಿನೇಟರ್?‌

ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆದಿದೆ, ನನ್ನ ಹಂತದಲ್ಲಿ ಅಲ್ಲ ಅನ್ನುತ್ತೀರಿ! ಹಾಗಾದರೆ, ಸಿಎಲ್ಪಿಯನ್ನೇ ಸೀಳಿ ಶಾಸಕರು ಬಿಜೆಪಿಗೆ ಹೋಗಲು ದುಷ್ಪ್ರೇರಣೆ ಕೊಟ್ಟವರು ಯಾರು? ವರಿಷ್ಠರು ತಂದ ಸರಕಾರವನ್ನೇ ತೆಗೆದಿರಿ, ಬಿಜೆಪಿ ಸರಕಾರ ಬರಲು ಕಾರಣರಾದಿರಿ. ಈಗ ಸುಳ್ಳಿಗೆ ಸುಳ್ಳು ಪೋಣಿಸುತ್ತಿದ್ದೀರಿ. ಆ ಸರಕಾರ ಬರಲು ಶಾಸಕರ ಟೀಂ ರೆಡಿ ಮಾಡಿದವರು ಯಾರು? ಇಷ್ಟೆಲ್ಲಾ ಸಿದ್ದಕಲೆ ಎಲ್ಲಿಂದ ಬಂತು ಮಿಸ್ಟರ್ ಸಿದ್ದಕಲಾನಿಪುಣಪ್ಪಾ!? ಹೈಕಮಾಂಡ್ ನಿರ್ಧಾರಕ್ಕೂ ಗುನ್ನ, ಅಹಿಂದದ ಹೆಸರಿನಲ್ಲಿ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಗೂ ಖೆಡ್ಡಾ, ಡಾ,ಪರಮೇಶ್ವರ ಅವರಿಗೆ ಸೋಲಿನ ಸುಳಿ, ಈಗ ʼಬಂಡೆʼಯ ಕೆಳಗೂ ಡೈನಾಮೈಟ್ ಇಡುತ್ತಿರುವ ಅನೈತಿಕ, ನೀಚ, ನಿಕೃಷ್ಟ, ಹೀನ ರಾಜಕಾರಣಕ್ಕೆ ನಾಂದಿ ಹಾಡಿರುವ ಪರಮಪಾತಕಕ್ಕೆ ಪರಾಕಾಷ್ಠೆ ಯಾರೆಂದು ಜನರಿಗೆ ಗೊತ್ತಿದೆ. ಜೆಡಿಎಸ್‌ ಬಿಜೆಪಿಯ ಬಿ ಟೀಂ ಅನ್ನುತ್ತೀರಿ. ಆಡಳಿತ ಪಕ್ಷದಲ್ಲೇ ಕೂತು ವಿರೋಧ ಪಕ್ಷದ ಜತೆ ಕೈಜೋಡಿಸಿ ಬೆನ್ನಿಗಿರಿದ ʼಬ್ರೂಟಸ್‌ʼ ಯಾರು? ಮೈತ್ರಿ ಸರಕಾರಕ್ಕೆ ಮೊದಲು ದಿನದಿಂದಲೇ ಮಹೂರ್ತ ಇಟ್ಟವರು ಯಾರು? ಸ್ವಯಂಘೋಷಿತ ಅಹಿಂದ ನಾಯಕರೇ ನಿಮ್ಮೊಳಗೆ ಉಕ್ಕುತ್ತಿರುವ ಕಾರ್ಕೋಟಕ ʼವಿಷʼವನ್ನೊಮ್ಮೆ ನೋಡಿಕೊಳ್ಳಿ. ಆ ವಿಷವೇ ನಿಮಗೆ ಮುಳುವು. ಎಂದು ಮಾಜಿ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ವಿರುದ್ಧ ಎಲ್ಲೂ ಹೆಸರು ಹೇಳದೇ ಟೀಕಾಪ್ರಹಾರ ನಡೆಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top