ಜನರು ತಮ್ಮ ಹಕ್ಕುಗಳನ್ನು ಕೇಳುವಾಗ ಗಟ್ಟಿಯಾಗಿ ಕೇಳಬೇಕು

ಶಿವಮೊಗ್ಗ: ಪೂಜ್ಯ ಶ್ರೀಗಳು ರಾಜ್ಯಾದ್ಯಂತ ಸಂಚರಿಸಿ ಭೋವಿ ಸಮಾಜವನ್ನು ಸಂಘಟಿಸುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಸಮಾಜದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಹಕ್ಕುಗಳ ಬಗೆಗೆ ಗಟ್ಟಿ ಧ್ವನಿ ಎತ್ತಿದ್ದಾರೆ. ಸಮಾಜದ ತಳ ಸಮುದಾಯಗಳ ಜನರು ತಮ್ಮ ಹಕ್ಕುಗಳನ್ನು ಕೇಳುವಾಗ ಗಟ್ಟಿಯಾಗಿ ಕೇಳಬೇಕು, ಆಗ ಮಾತ್ರ ನ್ಯಾಯ ಸಿಗುತ್ತದೆ. ಈ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು. ನಮ್ಮದು ವೃತ್ತಿ ಆಧಾರಿತ ಜಾತಿ ವ್ಯವಸ್ಥೆ. ಕಲ್ಲಿನ ಕೆಲಸ ಮಾಡುವುದರಿಂದ ಭೋವಿ ಸಮಾಜವನ್ನು ಸ್ಥಳೀಯ ಭಾಷೆಯಲ್ಲಿ ವಡ್ಡರು ಎಂದು ಕರೆಯಲಾಗಿದೆ. ಈ ಜಾತಿ ವ್ಯವಸ್ಥೆ ಸಾವಿರಾರು ವರ್ಷಗಳಿಂದ ಇದೆ, ಜಾತಿ ವ್ಯವಸ್ಥೆಯ ನಿರ್ಮೂಲನೆಗಾಗಿ ಅನೇಕ ಜನ ಶರಣರು, ಸೂಫಿ ಸಂತರು ಸಮಾಜ ಸುಧಾರಣೆಯನ್ನು ಮಾಡಿದ್ದಾರೆ. ಶ್ರೇಣೀಕೃತ ಜಾತಿ ವ್ಯವಸ್ಥೆ ಇರುವವರೆಗೆ ಸಮಾನತೆಯ ಸಾಧನೆ ಎಂಬುದು ಮರೀಚಿಕೆಯ ರೀತಿ ಅಸಾಧ್ಯವಾದ ಕೆಲಸ. ಚಾತುರ್ವರ್ಣ ವ್ಯವಸ್ಥೆಯಲ್ಲಿ ಶೂದ್ರ ಮತ್ತು ಅತಿ ಶೂದ್ರ ವರ್ಗದ ಜನರು ಸಾವಿರಾರು ವರ್ಷಗಳಿಂದ ಶಿಕ್ಷಣದಿಂದ ವಂಚಿತಗೊಂಡಿದ್ದರು. ಇದರ ಪರಿಣಾಮವಾಗಿ ಇಂದು ಸಮಾಜದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಸಮಾನತೆ ಕಾರಣಬಹುದಾಗಿದೆ. ಶಿಕ್ಷಣ ವಂಚಿತ ಜಾತಿಗಳು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವುದು ಕಷ್ಟದ ಕೆಲಸ. ಇದೇ ಕಾರಣಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದರು.

ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಸಂವಿಧಾನದ ಮೂರನೇ ಭಾಗಕ್ಕೆ ಸೇರಿಸಿದವರು ಡಾ. ಮನಮೋಹನ್ ಸಿಂಗ್ ಅವರು ಎಂಬುದನ್ನು ನಾವು ಮರೆಯಬಾರದು. ಸಮಾಜದಲ್ಲಿ ಎದುರಾಗುವ ಅವಮಾನ, ದೌರ್ಜನ್ಯ, ದಬ್ಬಾಳಿಕೆಗಳನ್ನು ಮೆಟ್ಟಿನಿಂತು ಘನತೆಯ ಬದುಕು ಕಟ್ಟಿಕೊಳ್ಳಲು ಶಿಕ್ಷಣದಿಂದ ಮಾತ್ರ ಸಾಧ್ಯ. ಅಸ್ಪೃಶ್ಯ ಜಾತಿಯಲ್ಲಿ ಹುಟ್ಟಿದ ಅಂಬೇಡ್ಕರ್ ಅವರು ಶಿಕ್ಷಣ ಪಡೆಯಲು ಪಟ್ಟ ಕಷ್ಟಗಳನ್ನು ಅವರ ಇತಿಹಾಸ ಓದಿದವರಿಗೆ ಅರ್ಥವಾಗುತ್ತದೆ. ಅಂಬೇಡ್ಕರ್ ಅವರು ಕಾನೂನು ಪಂಡಿತ, ಸಾಮಾಜಿಕ ತಜ್ಞ, ಅರ್ಥಶಾಸ್ತ್ರಜ್ಞ, ಮಾನವತಾವಾದಿ ಮಾತ್ರವಲ್ಲ ನಮ್ಮ ಸಂವಿಧಾನ ಶಿಲ್ಪಿ ಕೂಡ ಆಗಿದ್ದರು. ಒಂದು ವೇಳೆ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗದೆ ಹೋಗಿದ್ದರೆ ನಮಗೆ ಇಂಥಾ ಶ್ರೇಷ್ಠ ಸಂವಿಧಾನ ಸಿಗಲು ಸಾಧ್ಯವಾಗುತ್ತಿರಲಿಲ್ಲ.ಅಂಬೇಡ್ಕರ್ ಅವರು ಶೋಷಿತ ಜನರಿಗೆ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂರು ಮಂತ್ರಗಳನ್ನು ನೀಡಿದ್ದಾರೆ. ಆಳವಾಗಿ ಬೇರು ಬಿಟ್ಟಿರುವ ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಶೋಷಿತ ಜನರು ಶಿಕ್ಷಿತರಾಗಬೇಕು, ಸಂಘಟಿತರಾಗಬೇಕು ಮತ್ತು ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಹನ್ನೆರಡನೆಯ ಶತಮಾನದಲ್ಲೇ ಬಸವೇಶ್ವರರು
” ಇವನಾರವ, ಇವನಾರವ, ಇವನಾರವ ಎಂದೆನಿಸದಿರಯ್ಯಇವ ನಮ್ಮವ, ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ,ಎನ್ನ ಮನೆಯ ಮಗನೆನಿಸಯ್ಯ ಕೂಡಲಸಂಗಮದೇವ ” ಎಂದು ವಚನದ ಮೂಲಕ ಸಾರಿದ್ದರು, ಇಂದು ಇದೇ ವಚನವನ್ನು ಹೇಳುತ್ತಾ, ಪಕ್ಕಕ್ಕೆ ಕರೆದು ನಿನ್ನ ಜಾತಿ ಯಾವುದು ಎಂದು ಕೇಳುತ್ತಾರೆ.

ಶೋಷಿತ ವರ್ಗದ ಜನರಿಗೆ ಮತದಾನದ ಹಕ್ಕು ನೀಡಿದರಷ್ಟೇ ಸಾಲದು, ಆರ್ಥಿಕ ಮತ್ತು ಸಾಮಾಜಿಕ ಹಕ್ಕುಗಳನ್ನು ನೀಡಿದಾಗ ಮತ್ತು ಅವರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಬಾಬಾ ಸಾಹೇಬರು ಹೇಳಿದ್ದರು. ಅಧಿಕಾರ ಬಲಾಢ್ಯರ ಕೈನಲ್ಲಿ ಮಾತ್ರವಿರದೆ ಸಮಾಜದ ಎಲ್ಲಾ ಜಾತಿಯ ಜನರಿಗೆ ಹಂಚಿಕೆಯಾಗಬೇಕು, ಆಗ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಅವರ ಅಭಿಪ್ರಾಯ.ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆಯಾಗಬೇಕು ಎಂದು ಎಸ್.ಸಿ.ಪಿ/ ಟಿ.ಎಸ್.ಪಿ ಕಾನೂನು ರೂಪಿಸಿದ್ದು ನಮ್ಮ ಸರ್ಕಾರ. ನಮ್ಮ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಈ ಯೋಜನೆಗೆ ನೀಡಿದ್ದ ಅನುದಾನ ರೂ. 29,690 ಕೋಟಿ. ನಮ್ಮ ಬಜೆಟ್ ಗಾತ್ರ 2.02 ಲಕ್ಷ ಕೋಟಿ ರೂಪಾಯಿ. ಇಂದಿನ ಬಜೆಟ್ ಗಾತ್ರ 2.65 ಲಕ್ಷ ಕೋಟಿ ರೂಪಾಯಿ, ಇದಕ್ಕೆ ಹೋಲಿಸಿದರೆ ಇಂದು ಈ ಯೋಜನೆಗೆ ರೂ. 42,000 ಕೋಟಿ ಹಣ ಇಡಬೇಕಿತ್ತು, ಆದರೆ ಸರ್ಕಾರ 28,000 ಕೋಟಿ ರೂಪಾಯಿ ಇಟ್ಟಿದೆ. ಇದು ನ್ಯಾಯವೋ ಅನ್ಯಾಯವೋ ನೀವೆ ಯೋಚನೆ ಮಾಡಿ.ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಸರ್ಕಾರಿ ಕಾಮಗಾರಿಗಳಲ್ಲಿ ರೂ. 50 ಲಕ್ಷದ ವರೆಗೆ ಮೀಸಲಾತಿ ಕಲ್ಪಸಲು ಕಾನೂನು ತಿದ್ದುಪಡಿ ಮಾಡಿ, ಜಾರಿಗೆ ತಂದಿದ್ದು ನಮ್ಮ ಸರ್ಕಾರ. ಇದನ್ನು 2018 ರ ಬಜೆಟ್ ನಲ್ಲಿ ಒಂದು ಕೋಟಿ ರೂಪಾಯಿಗೆ ಹೆಚ್ಚಿಸುವ ಘೋಷಣೆ ಮಾಡಿದ್ದೆ, ಆದರೆ ಅದು ಈ ವರೆಗೆ ಆದೇಶವಾಗಿಲ್ಲ. ಅರವಿಂದ ಲಿಂಬಾವಳಿ ಅವರೆ ಈ ಆದೇಶ ಮಾಡಿಸಿ ನೀವು. ಇಂಥಾ ವಿಚಾರಗಳು ಚರ್ಚೆ ಆಗಬೇಕು.

ಶ್ರೀಗಳು ಭೋವಿ ಸಮಾಜಕ್ಕೆ ಅಭಿವೃದ್ಧಿ ನಿಗಮ ಬೇಕು ಎಂದು ಹೋರಾಟ ಮಾಡಿದಾಗ ಅವರ ಮಾತನ್ನು ಗೌರವಿಸಿ ನಂತರದ ಬಜೆಟ್ ನಲ್ಲಿ ಅಭಿವೃದ್ಧಿ ನಿಗಮ ಘೋಷಿಸಿದ್ದು ನಾವು. ನಾನು ಮುಖ್ಯಮಂತ್ರಿ ಆಗಿದ್ದಾಗ ಭೋವಿ ಸಮಾಜದವರಿಗೆ ಕೆಐಎಡಿಬಿ ಜಮೀನು ನೀಡಿದರೆ 50% ಸಬ್ಸಿಡಿ ಸಿಗುವಂತೆ ಮಾಡಿದ್ದೆ, ಕೆಎಸ್‌ಎಫ್‌ಸಿ ಬಳಿ ಪಡೆಯುವ ಸಾಲಕ್ಕೆ ಹತ್ತು ಕೋಟಿ ರೂಪಾಯಿ ವರೆಗೆ ಬಡ್ಡಿ ರಹಿತ ಸಾಲ ಸಿಗುವಂತೆ ಮಾಡಿದ್ದೆ, ಸಿದ್ದರಾಮೇಶ್ವರ ಜಯಂತಿ ಆಚರಣೆಗೆ ಸರ್ಕಾರಿ ಆದೇಶ ಮಾಡಿದ್ದೆ. ಹೀಗೆ ನಿಮ್ಮ ಸಮಾಜದ ಸಬಲೀಕರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.ಭೋವಿ ಸಮಾಜದ ಯಾರೊಬ್ಬರೂ ಈಗ ಮಂತ್ರಿಗಳಿಲ್ಲ. ಅರವಿಂದ ಲಿಂಬಾವಳಿಯನ್ನು ಯಾಕೆ ತೆಗೆದುಹಾಕಿದ್ರೋ ನನಗೆ ಗೊತ್ತಿಲ್ಲ. ಈ ಸಮಾಜದ ರಕ್ಷಣೆಯ ವಿಚಾರ ಬಂದಾಗ ಸದನದಲ್ಲಿ ಚರ್ಚೆ ಮಾಡಲು ಒಬ್ಬ ಭೋವಿ ಸಮಾಜಕ್ಕೆ ಸೇರಿದ ಮಂತ್ರಿ ಬೇಡವಾ? ನಾವು 2018 ರಲ್ಲಿ ಆರು ಮಂದಿ ಭೋವಿ ಸಮಾಜದವರಿಗೆ ಟಿಕೇಟ್ ನೀಡಿದ್ದೆವು, ಮೂರು ಜನ ಗೆದ್ದು ಶಾಸಕರಾಗಿದ್ದಾರೆ.

ಭೋವಿ ಸಮಾಜ ಮುಂದಕ್ಕೆ ಬರಬೇಕು. ಕಲ್ಲು ಒಡೆದು ದೇವಸ್ಥಾನ ಕಟ್ಟುವ ವರೆಗೆ ಈ ಜನರು ಬೇಕು, ದೇವಸ್ಥಾನ ನಿರ್ಮಾಣವಾದ ಮೇಲೆ ನೀವು ದೇವಾಲಯದ ಹೊರಗೆ, ಬೇರೆಯವರು ಮಾತ್ರ ಒಳಗೆ. ಇದು ಬದಲಾವಣೆ ಆಗಬೇಕು, ಎಲ್ಲರಿಗು ಸಮಾನತೆ ಸಿಗಬೇಕು. ಇಂದು ಉದ್ಘಾಟನೆ ಆಗಿರುವ ಸಮುದಾಯ ಭವನಕ್ಕೆ 80 ಲಕ್ಷ ಅನುದಾನ ನೀಡಿದ್ದು ನಮ್ಮ ಸರ್ಕಾರ.ಈ ಸಮಾಜದ ಜನರು ನೂರಕ್ಕೆ ನೂರರಷ್ಟು ಶಿಕ್ಷಿತರಾಗುವತ್ತ ಗಮನ ನೀಡಬೇಕು. ಈ ನಿಟ್ಟಿನಲ್ಲಿ ತಾವು ಯಶಸ್ವಿಯಾಗಿ ಎಂದು ಹಾರೈಸುತ್ತೇನೆ.

Leave a Comment

Your email address will not be published. Required fields are marked *

Translate »
Scroll to Top