ಪರಮೇಶ್ವರ್, ಎಚ್.ಸಿ. ಮಹದೇವಪ್ಪ ರಾಜೀನಾಮೆಗೆ ಆಮ್ ಆದ್ಮಿ ಪಕ್ಷ ಒತ್ತಾಯ

ಚಿತ್ರದುರ್ಗದ ಕಾವಾಡಿಗರ ಹಟ್ಟಿ ದಲಿತರ ಮಾರಣಹೋಮ: ಸ್ಥಳಕ್ಕೆ ಭೇಟಿ ನೀಡಿ ಸ್ಪಂದಿಸದ ಡಾ. ಜಿ. ಪರಮೇಶ್ವರ್, ಡಾ. ಎಚ್.ಸಿ. ಮಹದೇವಪ್ಪ ರಾಜೀನಾಮೆಗೆ ಆಮ್ ಆದ್ಮಿ ಪಕ್ಷ ಒತ್ತಾಯ ; ಪ್ರಕರಣ ಸಿಬಿಐಗೆ ವಹಿಸುವಂತೆ ಆಗ್ರಹ

ಬೆಂಗಳೂರು : ಚಿತ್ರದುರ್ಗದ ಕಾವಾಡಿಗರ ಹಟ್ಟಿಯಲ್ಲಿ ಕುಡಿಯುವ ನೀರಿಗೆ ವಿಷ ಹಾಕಿ ಆರು ಮಂದಿ ದಲಿತರು ಮೃತಪಟ್ಟು, 300 ಮಂದಿ ಅಸ್ವಸ್ಥರಾದ ಘಟನೆಯಲ್ಲಿ ದಲಿತರ ರಕ್ಷಣೆ ಮಾಡುವಲ್ಲಿ ವಿಫಲರಾಗಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ದಲಿತರ ಮಾರಣಹೋಮದ ಘಟನೆಯನ್ನು ಸಿಬಿಐಗೆ ವಹಿಸಬೇಕೆಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಎಸ್.ಸಿ/ಎಸ್.ಟಿ ಘಟಕದ ರಾಜ್ಯಾಧ್ಯಕ್ಷ ಪುರುಷೊತ್ತಮ್ ಮಾತನಾಡಿ, ಆಮ್ ಆದ್ಮಿ ಪಕ್ಷದಿಂದ ಕಾವಾಡಿಗರ ಹಟ್ಟಿಗೆ ಭೇಟಿ ನೀಡಿ ವಸ್ತುಸ್ಥಿತಿ ಮಾಹಿತಿ ಸಂಗ್ರಹಿಸಿ ಬಂದಿದ್ದು, ರಾಜ್ಯ ಸರ್ಕಾರ ಈ ಘನ ಘೋರ ದುರಂತದ ಬಗ್ಗೆ ಮೌನವಹಿಸಿದೆ. ದಲಿತ ಸಮುದಾಯಕ್ಕೆ ಸೇರಿದ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವಾನ ಹೇಳಿಲ್ಲ. ಪರಿಹಾರದ ಬಗ್ಗೆ ಚಕಾರ ಎತ್ತಿಲ್ಲ. ಪರಿಸ್ಥಿತಿಯ ಖುದ್ದು ಅವಲೋಕನ ನಡೆಸಿಲ್ಲ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿಲ್ಲ. ದಲಿತರ ಹಿತ ರಕ್ಷಣೆ ಮಾಡದ ಇವರು ಸಚಿವ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದರು.

ಸಮಾಜದಲ್ಲಿ ಬಲಾಢ್ಯರನ್ನು ನಿಯಂತ್ರಿಸಿ ಶೋಷಿತರಲ್ಲಿ ಆತ್ಮ ವಿಶ್ವಾಸ ಮೂಡಿಸಬೇಕಾದ ಡಾ. ಜಿ. ಪರಮೇಶ್ವರ್ ಗೃಹ ಸಚಿವ ಸ್ಥಾನಕ್ಕೆ ನ್ಯಾಯ ದೊರಕಿಸಿಲ್ಲ. ಕಾವಾಡಿಗರ ಹಟ್ಟಿಯ ದುರಂತದ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತೆ ಸೂಚನೆ ಕೊಟ್ಟಿಲ್ಲ. ಸಮಾಜ ಕಲ್ಯಾಣ ಸಚಿವರು ನೊಂದವರನ್ನು ಭೇಟಿಯೂ ಆಗಿಲ್ಲ. ಪರಿಹಾರದ ಬಗ್ಗೆ ಕ್ರಮ ಜರುಗಿಲ್ಲ. ಸರ್ಕಾರ ಮೃತಪಟ್ಟ ಕುಟುಂಬದವರಿಗೆ ಒಂದು ಕೋಟಿ ರೂಪಾಯಿ, ಅಸ್ವಸ್ಥರಾದವರಿಗೆ 25 ಲಕ್ಷ ರೂಪಾಯಿ ಪರಿಹಾರ ದೊರಕಿಸಿಕೊಡಬೇಕು ಎಂದು ಪುರುಷೋತ್ತಮ್ ಒತ್ತಾಯಿಸಿದರು.

ಗ್ರಾಮದ ಲಿಂಗಾಯಿತ ಹುಡಗಿ ಮತ್ತು ದಲಿತ ಸಮುದಾಯದ ಹುಡುಗ ಪರಸ್ಪರ ಪ್ರೀತಿಸುತ್ತಿದ್ದರು. ಇದು ವೈಯಕ್ತಿಕ ದ್ವೇಷಕ್ಕೆ ಕೌನ್ಸಿಲರ್ ಜಯಣ್ಣ ಮತ್ತು ನೀರಗಂಟಿ ಸುರೇಶ್ ಎಂಬುವರು ದಲಿತ ಕಾಲೋನಿಗೆ ಸರಬರಾಜು ಮಾಡುವ ಕುಡಿಯುವ ನೀರಿಗೆ ತೊಟ್ಟಿಗೆ ವಿಷ ಬೆರೆಸಿ ಅಮಾಯಕರ ಪ್ರಾಣಕ್ಕೆ ಕುತ್ತು ತಂದಿದ್ದಾರೆ ಎಂದು ಗ್ರಾಮದ ದಲಿತರು ಆರೋಪಿಸಿದ್ದಾರೆ. ಶಾಸಕ ವೀರೇಂದ್ರ ಪಪ್ಪಿ ಅವರು ಬಲಿಷ್ಟ ಸಮುದಾಯದ ಜೊತೆ ನಿಂತಿದ್ದಾರೆ. ಈ ಘಟನೆಯನ್ನು ಪೊಲೀಸರು ಅಸಹಜ ಸಾವು ಎಂದು ಮುಚ್ಚಿ ಹಾಕುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ ದಲಿತರ ಹಿತ ರಕ್ಷಣೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.  ಆರ್ಥಿಕವಾಗಿ ಯಾರೂ ಸಹಾಯ ಮಾಡಿಲ್ಲ. ಆಸ್ಪತ್ರೆ ಖರ್ಚು ವೆಚ್ಚಗಳನ್ನು ಕುಟುಂಬದವರೇ ಭರಿಸಿದ್ದಾರೆ. ಹಿಂದೂ – ಮುಸ್ಲೀಂರಿಗೆ ತೊಂದರೆಯಾದರೆ ಕೋಟ್ಯಂತರ ರೂ ಪರಿಹಾರ ನೀಡುವ ಸರ್ಕಾರಕ್ಕೆ ದಲಿತರ ಬಗ್ಗೆ ಕಾಳಜಿ ಇಲ್ಲವೆ ಎಂದು ಪ್ರಶ್ನಿಸಿದರು.

 

ಆಮ್ ಆದ್ಮಿ ಪಕ್ಷದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಜಗದೀಶ್ ಮಾತನಾಡಿ, ದಲಿತ ಸಮುದಾಯಕ್ಕೆ ಸೂಕ್ತ ರೀತಿಯಲ್ಲಿ ನ್ಯಾಯ ದೊರಕಿಸಿಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಮಧ್ಯ ಪ್ರವೇಶಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

Facebook
Twitter
LinkedIn
WhatsApp
Telegram
Tumblr
Email

Leave a Comment

Your email address will not be published. Required fields are marked *

Translate »
Scroll to Top