ಜನ ಸಾಮಾನ್ಯರ ಸಂಕಷ್ಟ ನಿವಾರಣೆಗೆ ಪರಿಹಾರ ದೊರೆತಿಲ್ಲ: ಇದು ಜುಮ್ಲಾ ಬಜೆಟ್ – ಎಂ.ಎಸ್.‌ ರಕ್ಷಾ ರಾಮಯ್ಯ

ಬೆಂಗಳೂರು ; ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಕೇಂದ್ರ ಆಯವ್ಯಯದಿಂದ ಬಡವರು, ಯುವ ಸಮೂಹಕ್ಕೆ ಯಾವುದೇ ರೀತಿಯಲ್ಲೂ ಪರಿಹಾರ ದೊರೆತಿಲ್ಲ. ಉದ್ಯೋಗ ಸೃಷ್ಟಿ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಜನ ಸಾಮಾನ್ಯರ ಸಂಕಷ್ಟ ನಿವಾರಣೆಗೆ ಪರಿಹಾರಗಳನ್ನು ಪ್ರಕಟಿಸಿಲ್ಲ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಂ.ಎಸ್.‌ ರಕ್ಷಾ ರಾಮಯ್ಯ ಟೀಕಿಸಿದ್ದಾರೆ.

 

ಬಜೆಟ್‌ ಕುರಿತು ಪ್ರತಿಕ್ರಿಯೆ ನೀಡಿದ ಅವರು,‌ ಜಾಗತಿಕವಾಗಿ ಕಚ್ಚಾ ತೈಲ ದರ ಗಣನೀಯವಾಗಿ ಇಳಿಕೆಯಾಗಿದ್ದರೂ ಜನ ಸಾಮಾನ್ಯರಿಗೆ ಇದರ ಲಾಭ ವರ್ಗಾವಣೆ ಮಾಡುವ ಕೆಲಸ ಮಾಡುತ್ತಿಲ್ಲ. ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ದರ ಇಳಿಕೆ ಮಾಡುವ ಬಡವರ ಪರ ತೀರ್ಮಾನಗಳನ್ನು ಪ್ರಕಟಿಸಿಲ್ಲ. ಮಹಿಳೆಯರನ್ನು ಲಕ್ಷಾಧಿಪತಿ ಮಾಡುವ ಜುಮ್ಲಾ ಭರವಸೆಗಳನ್ನು ಕೊಡುತ್ತಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಆರಂಭವಾದ  ಸ್ತ್ರೀ ಶಕ್ತಿ ಸಂಘಗಳಲ್ಲಿ ನಮ್ಮ ಮಹಿಳೆಯರು ಈಗಾಗಲೇ ಸ್ವಾವಲಂಬಿ ಬದುಕು ಕಟ್ಟಿಕೊಂಡು ದೇಶಕ್ಕೆ ಮಾದರಿಯಾಗಿ ಮುನ್ನಡೆಯುತ್ತಿದ್ದಾರೆ ಎಂದು ಹೇಳಿದರು.

ಒಂದು ಕೋಟಿ ಮನೆಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಿ ಉಚಿತ ವಿದ್ಯುತ್‌ ದೊರಕಿಸಿಕೊಡುವ ಜೊತೆಗೆ ಪ್ರತಿ ವರ್ಷ ಬಡವರಿಗೆ 15 ರಿಂದ 18 ಸಾವಿರ ರೂಪಾಯಿ ಆದಾಯ ದೊರೆಯುವಂತೆ ಮಾಡುವುದಾಗಿ ಹೇಳಿದ್ದಾರೆ. ಬರುವ ದಿನಗಳಲ್ಲಿ ಇದು ಜುಮ್ಲಾ ಭರವಸೆಯಾಗಲಿದೆ. ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಗಾಗಲೇ ಕೋಟ್ಯಂತರ ಕುಟುಂಬಗಳಿಗೆ ಉಚಿತ ವಿದ್ಯುತ್‌ ಗ್ಯಾರೆಂಟಿ ಯೋಜನೆ ಜಾರಿಗೊಳಿಸಿ ನುಡಿದಂತೆ ನಡೆದಿದೆ. ಬಡವರ ಸಂಕಷ್ಟವನ್ನು ದೂರ ಮಾಡಿದೆ ಎಂದರು. 

ಬಜೆಟ್‌ ಭಾಷಣದ ಉದ್ದಕ್ಕೂ ಅಭಿವೃದ್ಧಿ ಹೊಂದಿ ಭಾರತ, ವಿಕಸಿತ ಭಾರತ ಎಂಬ ವರ್ಣಮಯ ಶಬ್ದಗಳನ್ನು ಬಳಸಿ ಜನ ಸಾಮಾನ್ಯರನ್ನು ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಮಾಡಿದ್ದು, ವಾಸ್ತವವಾಗಿ ಸಾಮಾನ್ಯ ಜನರಿಗೆ ಬಜೆಟ್‌ ನಿಂದ ಯಾವುದೇ ಪ್ರಯೋಜನವಿಲ್ಲ ಎಂದು ಎಂ.ಎಸ್.‌ ರಕ್ಷಾ ರಾಮಯ್ಯ ಹೇಳಿದರು.

 

ಕರ್ನಾಟದದಿಂದ ಕೇಂದ್ರಕ್ಕೆ ಹೆಚ್ಚಿನ ತೆರಿಗೆ ದೊರೆಯುತ್ತಿದ್ದು, ರಾಜ್ಯಕ್ಕೆ ಸೂಕ್ತ ಪಾಲು ಸಿಗುತ್ತಿಲ್ಲ. ಕೇಂದ್ರ ಹಣಕಾಸು ಆಯೋಗ ಕೇಂದ್ರ ಸರ್ಕಾರದ ಅಣತಿಯಂತೆ ಕುಣಿದು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಕರ್ನಾಟಕವನ್ನು ಬಿಜೆಪಿ ಯಾವತ್ತಿಗೂ ನಮ್ಮ ದೇಶದ ಭಾಗವಾಗಿ ನೋಡಿಲ್ಲ, ಹಾಗಿದ್ದರೂ ನಮ್ಮಿಂದ 25 ಬಿಜೆಪಿ ಸಂಸದರು ಆಯ್ಕೆ ಆಗಿದ್ದಾರೆ. ರಾಜ್ಯ ಹಿತ ಕಾಯುವಲ್ಲಿ ಬಿಜೆಪಿ ಸಂಸದರು, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆಪಾದಿಸಿದರು.

Facebook
Twitter
LinkedIn
Telegram
Email
Email
Print

Leave a Comment

Your email address will not be published. Required fields are marked *

Translate »
Scroll to Top