ಬೆಂಗಳೂರು: ನವ ದೆಹಲಿಯ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ಎರಡನೇ ದಿನ ನಡೆಯುತ್ತಿರುವ ರಾಷ್ಟ್ರೀಯ ಅಧಿವೇಶನದಲ್ಲಿ ಕರ್ನಾಟಕದ ಪ್ರತಿನಿಧಿಗಳ ಜೊತೆ ರಾಜ್ಯ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಭಾಗವಹಿಸಿದ್ದರು.
ಕೋರ್ ಕಮಿಟಿ ಸದಸ್ಯರು ಸೇರಿದಂತೆ ರಾಜ್ಯದಿಂದ 500ಕ್ಕೂ ಹೆಚ್ಚು ಜನರು ಈ ಅಧಿವೇಶನದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.
ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿ, ನವೋತ್ಸಾಹ, ಹೊಸ ಶಕ್ತಿಯೊಂದಿಗೆ ಕೆಲಸ ಮಾಡುವ ಸಮಯ ಬಂದಿದೆ. ಬಿಜೆಪಿ ಕಾರ್ಯಕರ್ತರು ಪ್ರತಿ ಮತದಾರರ ಬಳಿ ತೆರಳಬೇಕು. ಬಿಜೆಪಿ ಕಾರ್ಯಕರ್ತರು ಮುಂದಿನ 100 ದಿನಗಳಲ್ಲಿ ಎಲ್ಲ ಮತದಾರರು, ಫಲಾನುಭವಿಗಳನ್ನು ತಲುಪಬೇಕು ಮತ್ತು ಬಿಜೆಪಿಯನ್ನು ಇನ್ನಷ್ಟು ಹೆಚ್ಚು ಬಲದೊಂದಿಗೆ ಅಧಿಕಾರಕ್ಕೆ ತರಬೇಕಾಗಿದೆ ಎಂದು ತಿಳಿಸಿದರು.
ಹತ್ತು ವರ್ಷದ ನನ್ನ ಹಾಗೂ ಬಿಜೆಪಿಯ ಕೇಂದ್ರದ ಆಡಳಿತ ಭ್ರಚ್ಟಾಚಾರರಹಿತವಾಗಿತ್ತು. ನಾವು ರಾಷ್ಟ್ರ ನೀತಿಗೆ ಬದ್ಧ. ರಾಜನೀತಿಗೆ ಅಲ್ಲ ಎಂದರಲ್ಲದೆ, ಹಿಂದುಳಿದ ವರ್ಗದವರಿಗಾಗಿ ಹಲವು ಯೋಜನೆ ಜಾರಿಗೊಳಿಸಿದ್ದೇವೆ. ಶ್ರೀರಾಮ ಮಂದಿರದ ಭರವಸೆಯನ್ನು ಈಡೇರಿಸಿದ್ದೇವೆ. ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಆರು ತಿಂಗಳ ಮಾತೃತ್ವ ರಜೆ ನೀಡುವ ಭರವಸೆ ನೀಡುತ್ತೇವೆ ಎಂದು ನುಡಿದರು.
ಲೋಕಸಭೆ ಚುನಾವಣೆಗೆ ನಾವು ಸಿದ್ಧರಾಗಬೇಕು. ಹಗಲಿರುಳೆನ್ನದೆ ಕೆಲಸ ಮಾಡಿ ಬಿಜೆಪಿಯನ್ನು ಗೆಲ್ಲಿಸಿ ತರುವ ಮಹತ್ವದ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಅಭಿಪ್ರಾಯಪಟ್ಟರು. ನಮ್ಮ ಕಾರ್ಯಕರ್ತರು ಮತದಾರರನ್ನು ತಲುಪಬೇಕು, ಕಾರ್ಯಕರ್ತರು ವಿಕಸಿತ ಭಾರತಕ್ಕಾಗಿ ಕೆಲಸ ಮಾಡಬೇಕಿದೆ. ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುವಂತೆ ಕೆಲಸ ಮಾಡಬೇಕು. ಚುನಾವಣೆಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಬೇಕಿದೆ. ವಿಕಸಿತ ಭಾರತದತ್ತ ದೊಡ್ಡ ಹೆಜ್ಜೆ ಇಟ್ಟಿದ್ದೇವೆ ಎಂದು ಅವರು ತಿಳಿಸಿದರು.
ಭಾರತವು ವಿಶ್ವದಲ್ಲಿ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ. 2047ಕ್ಕೆ ಭಾರತ ದೇಶದ ಸ್ವಾತಂತ್ರ್ಯೋತ್ಸವಕ್ಕೆ 100 ವರ್ಷಗಳು ತುಂಬಲಿದ್ದು, 2047ಕ್ಕೆ ವಿಕಸಿತ ಭಾರತ ಆಗಲಿದೆ ಎಂಬುದು ಮೋದಿ ಗ್ಯಾರಂಟಿ ಎಂದು ಅವರು ವಿಶ್ವಾಸದಿಂದ ನುಡಿದರು.
ಮೋದಿ ವಿರುದ್ಧ ಸುಳ್ಳು ಆರೋಪ ಮಾಡಲು ಕಾಂಗ್ರೆಸ್ ಪಕ್ಷದ ಹಲವರು ಯತ್ನಿಸುತ್ತಾರೆ. ಇನ್ನೂ ಕೆಲವರು ಇದನ್ನು ವಿರೋಧಿಸುತ್ತಾರೆ. ಇದೇ ವಿಚಾರದಲ್ಲಿ ಕಾಂಗ್ರೆಸ್‍ನೊಳಗೆ ಸಂಘರ್ಷ ನಡೆದಿದೆ ಎಂದು ವಿವರಿಸಿದರು. ‘ಯಹೀ ಸಮಯ್ ಹೇ, ಸಹೀ ಸಮಯ್ ಹೇ’ ಎಂದು ಅವರು ಭಾಷಣದುದ್ದಕ್ಕೂ ತಿಳಿಸಿದರು.
ಮುಂದಿನ 100 ದಿನಗಳಲ್ಲಿ ಹೊಸ ಗುರಿ ಮತ್ತು ಸಂಕಲ್ಪದೊಂದಿಗೆ ನಮ್ಮ ಕಾರ್ಯಕರ್ತರು ಕೆಲಸ ಮಾಡಬೇಕು. ನಾವು ಪ್ರತಿಯೊಬ್ಬ ಫಲಾನುಭವಿಯನ್ನು ತಲುಪಬೇಕಿದೆ ಎಂದು ಮನವಿ ಮಾಡಿದರು. ಪ್ರಧಾನ ಸೇವಕ ನರೇಂದ್ರ ಮೋದಿ ತಮ್ಮ ನಮಸ್ಕಾರ ತಿಳಿಸಿದ್ದಾಗಿ ಮತದಾರರಿಗೆ ಹೇಳಬೇಕು. ಎಲ್ಲ ಮತದಾರರನ್ನು ಮತದಾನದ ದಿನದಂದು ಮತಗಟ್ಟೆಗೆ ಬರುವಂತೆ ಮತ್ತು ಕಮಲ ಚಿಹ್ನೆಗೆ ಮತ ಕೊಡುವಂತೆ ನೋಡಿಕೊಳ್ಳಿ ಎಂದು ಕರೆ ನೀಡಿದರು.