ಬಳ್ಳಾರಿಯಿಂದ ಸವದತ್ತಿಗೆ ನೂತನ ಬಸ್ ಸೇವೆ ಆರಂಭ

ಬಳ್ಳಾರಿ: ಬಳ್ಳಾರಿಯಲ್ಲಿರುವ ಸವದತ್ತಿ ಯಲ್ಲಮ್ಮನ ಕ್ಷೇತ್ರದ ಭಕ್ತಾದಿಗಳ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ಸಾರಿಗೆ ಇಲಾಖೆಯು ಬಳ್ಳಾರಿಯಿಂದ ಸವದತ್ತಿಗೆ ನೂತನ ಬಸ್ ಸೇವೆ ಇಂದಿನಿಂದ ಆರಂಭಿಸಿದೆ.ಈ ಮೂಲಕ ಭಕ್ತಾದಿಗಳ ಬಹುದಿನಗಳ ಆಸೆ ಈಡೇರಿದಂತಾಗಿದೆ.

ಸಾರಿಗೆ,ಪರಿಶಿಷ್ಟವರ್ಗಗಳ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ನೂತನ ಬಸ್‌ಗೆ ಹಸಿರುನಿಶಾನೆ ತೋರುವುದರ ಮೂಲಕ ಸಂಚಾರಕ್ಕೆ ಚಾಲನೆ ನೀಡಿದರು.

ಬಳ್ಳಾರಿಯಿಂದ ಬೆಳಗ್ಗೆ ೮ಕ್ಕೆ ಹೊರಡಲಿರುವ ಸವದತ್ತಿಗೆ ಮಧ್ಯಾಹ್ನ ೨ಕ್ಕೆ ತಲುಪಲಿದೆ. ಸವದತ್ತಿಯಿಂದ ಬಳ್ಳಾರಿಗೆ ಮಧ್ಯಾಹ್ನ ೨:೩೦ಕ್ಕೆ ಹೊರಡಲಿದೆ. ೨೬೩ ರೂ.ಗಳ ದರ ಇದೆ. ಬಳ್ಳಾರಿಯಿಂದ ಹೊಸಪೇಟೆ,ಕೊಪ್ಪಳ,ಗದಗ,ನವಲಗುಂದ,ಯಲ್ಲಮ್ಮನಗ ಗುಡ್ಡದ ಮಾರ್ಗವಾಗಿ ಸವದತ್ತಿಗೆ ತೆರಳಲಿದೆ.

ಬಸ್ ಸಂಚಾರಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಬಳ್ಳಾರಿಯಿಂದ ತಿರುಪತಿ,ಶ್ರೀಶೈಲ,ಧರ್ಮಸ್ಥಳ, ಮಂತ್ರಾಲಯ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಬಸ್ ಸೇವೆ ಆರಂಭಿಸಲಾಗಿದೆ ಎಂದರು.

ಈ ಬಾರಿಯ ಬಜೆಟ್‌ನಲ್ಲಿ ಸಾರಿಗೆ ಇಲಾಖೆಯನ್ನು ಮುಂದಿನ ದಿನಗಳಲ್ಲಿ ಲಾಭದಯಕವನ್ನಾಗಿ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ನೇಮಿಸಲಾದ ಶ್ರೀನಿವಾಸ್‌ಮೂರ್ತಿ ನೇತೃತ್ವದ ಉನ್ನತ ಸಮಿತಿ ವರದಿ ನೀಡಿದ್ದು, ಆ ವರದಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಮೂಲಕ ಇಲಾಖೆಯನ್ನು ಲಾಭದಾಯಕವನ್ನಾಗಿ ಮಾಡಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

೧ಲಕ್ಷ ಗಾರ್ಮೆಂಟ್ಸ್ ಕಾರ್ಮಿಕರಿಗೆ ಉಚಿತವಾಗಿ ಬಸ್ ಪಾಸ್ ನೀಡಬೇಕು ಎನ್ನುವ ತೀರ್ಮಾನವನ್ನು ನಮ್ಮ ಮುಖ್ಯಮಂತ್ರಿಗಳು ಕೈಗೊಂಡಿದ್ದು,ಅದನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ ಅವರು ಕಟ್ಟಡ ಕಾರ್ಮಿಕರಿಗೂ ಉಚಿತ ಬಸ್ ನೀಡುವ ನಿಟ್ಟಿನಲ್ಲಿ ಕೆಲ ಜಿಲ್ಲೆಗಳಲ್ಲಿ ಫೈಲಟ್ ಕಾರ್ಯಕ್ರಮವನ್ನಾಗಿ ಮಾಡಲಾಗುವುದು;ನಂತರ ಅಲ್ಲಿನ ಯಶಸ್ವಿಯಾಗಿರುವುದನ್ನು ನೋಡಿಕೊಂಡು ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆಯ ಬಲವರ್ಧನೆಗೆ ಶ್ರಮಿಸಲಾಗುವುದು ಎಂದು ಸ್ಪಷ್ಟಪಡಿಸಿದ ಸಚಿವ ಶ್ರೀರಾಮುಲು ಅವರು ಕಲ್ಯಾಣ ಕರ್ನಾಟಕ,ಮುಂಬೈ ಕರ್ನಾಟಕ ಪ್ರದೇಶಗಳಲ್ಲಿ ತುಂಬಾ ಹಳೆಯ ಬಸ್ ಓಡಾಡುತ್ತಿವೆ;ನಮ್ಮ ಇಲಾಖೆಯಲ್ಲಿ ಸುಮಾರು ೪೦ ಸಾವಿರ ಹಳೆಬಸ್‌ಗಳಿವೆ. ಈ ೪೦ ಸಾವಿರ ಬಸ್‌ಗಳಿದ್ದು;ಡಿಸೇಲ್‌ಗಳಿಂದ ಬಹಳಷ್ಟು ನಷ್ಟವನ್ನು ಇಲಾಖೆ ಅನುಭವಿಸುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ಬಸ್‌ಗಳನ್ನು ಸಿಎನ್‌ಜಿ ಬಸ್‌ಗಳನ್ನಾಗಿ ಮಾಡಲಾಗುವುದು; ಸರಕಾರ ಹಂತಹಂತವಾಗಿ ಎಲೆಕ್ಟ್ರೀಕ್ ಬಸ್‌ಗಳನ್ನು ಖರೀದಿ ಮಾಡಲು ಉದ್ದೇಶಿಸಿದ್ದು,ಹಂತಹಂತವಾಗಿ ಉತ್ತರ ಕರ್ನಾಟಕಕ್ಕೆ ಒಳ್ಳೆಯ ಬಸ್‌ಗಳನ್ನು ನೀಡುವ ಕೆಲಸವನ್ನು ಇಲಾಖೆ ಮಾಡಲಿದೆ ಎಂದರು.

ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ, ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ, ಬುಡಾ ಅಧ್ಯಕ್ಷ ಪಾಲನ್ನ,ಎಪಿಎಂಸಿ ಅಧ್ಯಕ್ಷ ಉಮೇಶ, ಮಾಜಿ ಸಂಸದರಾದ ಜೆ.ಶಾಂತಾ,ಬಳ್ಳಾರಿ ಎನ್‌ಇಕೆಎಸ್‌ಆರ್‌ಟಿಸಿ ಜಿಲ್ಲಾ ಅಧಿಕಾರಿ ಇನಾಯತ್ ಭಾಗಬಾನ್, ವಿಭಾಗೀಯ ಸಂಚಾರ ಅಧಿಕಾರಿ ಕೆ.ಎಲ್.ಚಂದ್ರಶೇಖರ ಮತ್ತಿತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top