ಬೆಂಗಳೂರು: ಹುಬ್ಬಳ್ಳಿ, ಕರ್ನಾಟಕದಲ್ಲಿ ನಡೆದ ಮಹಿಳಾ ಕಾರ್ಯಕರ್ತೆಯ ಮೇಲಿನ ಪೊಲೀಸ್ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.
ಬಂಧನದ ವೇಳೆ ಮಹಿಳೆಯ ಮೇಲೆ ಹಲ್ಲೆ ನಡೆಸಲಾಗಿದ್ದು, ಆಕೆಯ ಬಟ್ಟೆಗಳನ್ನು ಕಿತ್ತುಹಾಕಲಾಗಿದೆ ಎಂಬ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಈ ಘಟನೆಗೆ ಸಂಬಂಧಿಸಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಹಟ್ಕರ್ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಘಟನೆ ಸಾಬೀತಾದಲ್ಲಿ, ಇದು ಮಹಿಳೆಯ ಗೌರವ, ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಲೈಂಗಿಕ ಆಧಾರಿತ ಹಿಂಸೆಯಿಂದ ರಕ್ಷಣೆ ಎಂಬ ಮೂಲಭೂತ ಹಕ್ಕುಗಳ ಗಂಭೀರ ಉಲ್ಲಂಘನೆಯಾಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿರುವ ಆಯೋಗ, ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆಈಗಾಗಲೇ ದಾಖಲಿಸಿಲ್ಲದಿದ್ದಲ್ಲಿ ತಕ್ಷಣವೇ ಎಫ್ಐಆರ್ ದಾಖಲಿಸುವುದು,ವಿಡಿಯೋ ಸಾಕ್ಷ್ಯಗಳ ಪರಿಶೀಲನೆಯೊಂದಿಗೆ ನ್ಯಾಯಸಮ್ಮತ, ನಿಷ್ಪಕ್ಷಪಾತ ಹಾಗೂ ಕಾಲಮಿತಿಯೊಳಗಿನ ತನಿಖೆ ನಡೆಸುವುದು.
ತಪ್ಪಿತಸ್ಥ ಅಧಿಕಾರಿಗಳು ಪತ್ತೆಯಾದಲ್ಲಿ ಅವರ ವಿರುದ್ಧ ಕಠಿಣ ಇಲಾಖಾ ಮತ್ತು ಕ್ರಿಮಿನಲ್ ಕ್ರಮ ಜರುಗಿಸುವುದು,ಪೀಡಿತ ಮಹಿಳೆಗೆ ಕಾನೂನುಬದ್ಧವಾಗಿ ವೈದ್ಯಕೀಯ ನೆರವು, ಮಾನಸಿಕ ಸಹಾಯ, ಪುನರ್ವಸತಿ ಹಾಗೂ ಪರಿಹಾರ ಒದಗಿಸುವುದು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ದಿನಗಳೊಳಗೆ ವಿವರವಾದ ‘ಕ್ರಮ ಕೈಗೊಂಡ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚಿಸಿದೆ.



