ದೇವನಹಳ್ಳಿ: ವಿಜಯಪುರ ಪಟ್ಟಣದ 15 ನೇ ವಾರ್ಡ್ ನ ಟಿಪ್ಪು ನಗರದ 2 ನೇ ಕ್ರಾಸ್ ನ ಜನತೆಗೆ ನೀರಿನ ಸೌಲಭ್ಯ ಕಲ್ಪಿಸುವಲ್ಲಿ ತಾರತಮ್ಯ ತೋರುತ್ತಿದ್ದೇನೆ ಎಂದು ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದ ಮಾತು ಎಂದು 15 ನೇ ವಾರ್ಡ್ ಪುರಸಭಾ ಸದಸ್ಯೆ ಯ ಪತಿ ಮೆಹಬೂಬ್ ಪಾಷ ತಿಳಿಸಿದರು. ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿ, ವಾರ್ಡ್ ಜನತೆಗೆ ನೀರಿನ ವಿಚಾರದಲ್ಲಿ ತೊಂದರೆ, ತಾರತಮ್ಯ, ಕೊಳವೆ ಬಾವಿಯ ಪೈಪ್ ತುಂಡರಿಸಿರುವುದು ಈ ಎಲ್ಲಾ ವಿಚಾರಗಳು ರಾಜಕೀಯ ಪಿತೂರಿ, ವೈಯಕ್ತಿಕವಾಗಿ ತೇಜೋವಧೆ ಮಾಡಲು ಪರೋಕ್ಷವಾಗಿ ಮಾಡುತ್ತಿರುವ ಆರೋಪಗಳಾಗಿವೆ.
ನೈಜ ಪರಿಸ್ಥಿತಿ : 15 ನೇ ವಾರ್ಡ್ ನ ಟಿಪ್ಪು ನಗರದ 2 ನೇ ಕ್ರಾಸ್ ನಲ್ಲಿ ಇರುವ ಕೊಳವೆ ಬಾವಿಯಿಂದ ಬರುತ್ತಿರುವ ನೀರಿನ ಪ್ರಮಾಣ ಬಹಳ ಕಡಿಮೆ ಇದ್ದು, ಪೈಪ್ ನಲ್ಲಿ ಬರುವ ನೀರು 4 ಮನೆಗಳಿಗೂ ಸಾಲುತ್ತಿರಲಿಲ್ಲ. ಆದ್ದರಿಂದ ಪೈಪ್ ತುಂಡರಿಸಿ ನೇರವಾಗಿ ನೀರನ್ನು ಬಳಸಿಕೊಳ್ಳಲು ತಿಳಿಸಲಾಗಿತ್ತು, ಹಾಗೂ ನೀರಿನ ಪ್ರಮಾಣ ಕಡಿಮೆಯಿರುವುದರಿಂದ ವಾರ್ಡ್ ಜನತೆಗೆ ನಲ್ಲಿಗಳ ಮುಖಾಂತರ ಬಿಡಲೂ ಸಾಧ್ಯವಾಗದೇ ಹೆಚ್ಚು ಸಮಯ ಖಾಲಿ ಮೋಟರ್ ಓಡಿಸಿ ಮೋಟರ್ ಗಳೂ ಸುಟ್ಟುಹೋಗಿದೆ. ಆದ್ದರಿಂದ ಟ್ಯಾಂಕರ್ ಗೆ ನೀರನ್ನು ತುಂಬಿಸಿಕೊಂಡು ದಿನಕ್ಕೆ 5 ಟ್ಯಾಂಕರ್ ನೀರನ್ನು ಇಡೀ ವಾರ್ಡ್ ಜನತೆಗೆ ನೀಡುತ್ತಿದ್ದು, ವಾರ್ಡ್ ಜನ ನೀರಿನ ಸಮಸ್ಯೆ ಎದುರಿಸುತ್ತಿಲ್ಲ. 15 ನೇ ಹಣಕಾಸು ಯೋಜನೆಯಲ್ಲಿ ಶಾಸಕರು ಈ ಭಾಗಕ್ಕೆ ಕೊಳವೆ ಬಾವಿ ಮಂಜೂರು ಮಾಡಿದ್ದು, ಅದೂ ಯಶಸ್ವಿಯಾದರೆ ನೀರಿನ ಸಮಸ್ಯೆಯೇ ಎದುರಾಗದು. ರಾಜಕೀಯ ಪಿತೂರಿ: ಇತ್ತೀಚೆಗೆ ನಡೆದ ಪುರಸಭಾ ಚುನಾವಣೆಯಲ್ಲಿ ನನ್ನ ಪತ್ನಿ ತಾಜುನ್ನೀಸಾ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರಿಂದ ಪ್ರತಿಸ್ಪರ್ಧಿಗಳಾಗಿದ್ದವರು ಅಸೂಯಿಂದ ಇಂತಹ ರಾಜಕಾರಣ ಮಾಡಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ವಿಚಾರವನ್ನು ಪುರಸಭಾ ಅಧಿಕಾರಿಗಳ ಮಟ್ಟದಲ್ಲಿ ಪರೀಕ್ಷಿಸಿದರೆ ಸತ್ಯ ತಿಳಿಯುತ್ತದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪುರಸಭಾ ಸದಸ್ಯರಾದ ಭೈರೇಗೌಡ, ಸಯ್ಯದ್ ಇಕ್ಬಾಲ್, ಜೆಡಿಎಸ್ ಮುಖಂಡ ಪ್ರಕಾಶ್ ಇದ್ದರು.