ಏಷ್ಯಾದ ಪ್ರತಿಷ್ಠಿತ ಎಕ್ಸ್‌ 30 ಚಾಂಪಿಯನ್‌ಶಿಪ್‌ನಲ್ಲಿ ಮುಂಬೈನ 11ರ ಪೋರ ಹಮ್ಜಾಗೆ ಬೆಳ್ಳಿ ಪದಕ

ಸೆಪಾಂಗ್(ಮಲೇಷ್ಯಾ) : ಭಾರತದ 11 ವರ್ಷದ ಕಾರ್ಟ್ ರೇಸರ್ ಹಮ್ಜಾ ಬಾಲಸಿನೊರ್‌ವಾಲಾ ತಮ್ಮ ಅತ್ಯುತ್ತಮ ರೇಸಿಂಗ್ ಕೌಶಲ್ಯಗಳ ಮೂಲಕ ಇಲ್ಲಿ ನಡೆದ ಏಷ್ಯಾದ ಪ್ರತಿಷ್ಠಿತ ಐಎಎಂಇ ಏಷ್ಯಾ ಸೀರೀಸ್ ಎಕ್ಸ್ 30 ಚಾಂಪಿಯನ್‌ಶಿಪ್‌ನ 4ನೇ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದರು.

 

ರೇಸ್‌ನುದ್ದಕ್ಕೂ ಕಲಾತ್ಮಕ ಕೌಶಲ್ಯ ಪ್ರದರ್ಶಿಸಿದ ಹಮ್ಜಾ, ವೇಗ ಕಾಯ್ದುಕೊಂಡರು. ಫ್ರಿಹುಬರ್, ಅನುಚಟ್ಕಲ್ ಹಾಗೂ ಮೆಹ್ತಾ ಅವರನ್ನು ಹಿಂದಿಕ್ಕಿದ ಹಮ್ಜಾ, ಕೇವಲ 2 ಸೆಕೆಂಡ್‌ಗಳಲ್ಲಿ ಮೊದಲ ಸ್ಥಾನದಿಂದ ವಂಚಿತರಾಗಿ 2ನೇ ಸ್ಥಾನ ಪಡೆದರು. ಸಿಂಗಾಪುರದ ಮೈಕಲ್ ಲೆಡೆರರ್ ಮೊದಲ ಸ್ಥಾನ ಗಳಿಸಿದರು. ಫಿಲಿಪ್ಪೀನ್ಸ್‌ನ ಫ್ರಿಹುರ್ 3ನೇ ಸ್ಥಾನಕ್ಕೆ ತೃಪ್ತಿಪಟ್ಟರು.

‘ಇದು ನನ್ನ ಮೊದಲ ಅಂತಾರಾಷ್ಟ್ರೀಯ ಪೋಡಿಯಂ ಫಿನಿಶ್. ನನ್ನ ಈ ಸಾಧನೆ ಬಹಳ ಸಂತೋಷ ತಂದಿದೆ. ನನ್ನನ್ನು ನಿರಂತರವಾಗಿ ಬೆಂಬಲಿಸುತ್ತಿರುವ ನನ್ನ ಕುಟುಂಬ ಹಾಗೂ ತಂಡಕ್ಕೆ ಧನ್ಯವಾದ ಹೇಳುತ್ತೇನೆ’ ಎಂದು ಈಗಾಗಲೇ ಇಂಡಿಕಾರ್ಟಿಂಗ್ ಪ್ರೊ ಮಟ್ಟದಲ್ಲಿ ಹಲವು ರೇಸ್‌ಗಳನ್ನು ಗೆದ್ದಿರುವ ಹಮ್ಜಾ ಖುಷಿಯಿಂದ ಹೇಳಿದರು.

ಮುಂಬೈನ ಪೊದಾರ್ ಅಂತಾರಾಷ್ಟ್ರೀಯ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಹಮ್ಜಾ, ಪ್ರತಿಯೊಂದು ಅಭ್ಯಾಸ ಸೆಷನ್‌ಗಳಲ್ಲಿ ಸುಧಾರಿತ ಪ್ರದರ್ಶನ ನೀಡಿದರಾದರೂ ಅರ್ಹತಾ ಸುತ್ತಿನಲ್ಲಿ ದುರದೃಷ್ಟವಶಾತ್ ಕೆಡೆಟ್ ಕ್ಲಾಸ್‌ನ ರೇಸ್ ಗ್ರಿಡ್‌ನಲ್ಲಿ 12ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಇದು ಸಾಲದು ಎಂಬಂತೆ ಹೀಟ್-1ನಲ್ಲಿ ಹಮ್ಜಾಗೆ ಮತ್ತೊಂದು ಹಿನ್ನಡೆ ಉಂಟಾಯಿತು. ಅವರು ರೇಸ್‌ನಿಂದಲೇ ಹೊರಬೀಳಬೇಕಾಯಿತು. ಆ ಸುತ್ತನ್ನು ಫಿಲಿಪ್ಪೀನ್ಸ್‌ನ ಎಸ್ಟಾಬೆನ್ ಫ್ರಿಹುಬರ್  ಗೆದ್ದರು.

 

ಹಿನ್ನಡೆಗಳಿಂದ ಧೃತಿಗೆಡದ ರಾಯೋ ರೇಸಿಂಗ್‌ನ ಯುವ ತಾರೆ ಹೀಟ್-2ನಲ್ಲಿ ಪುಟಿದೆದ್ದು ಏಷ್ಯಾದ ಹಲವು ಅನುಭವಿ ರೇಸರ್‌ಗಳನ್ನು ಹಿಂದಿಕ್ಕಿ ಆಕರ್ಷಕ ರೀತಿಯಲ್ಲಿ ೪ನೇ ಸ್ಥಾನ ಪಡೆದರು. ಸಿಂಗಾಪುರದ ಆ್ಯರೊನ್ ಮೆಹ್ತಾ ಈ ಸುತ್ತು ಜಯಿಸಿದರೆ, ಥಾಯ್ಲೆಂಡ್‌ನ ಕಾಮೊಲ್ಫು ಅನುಚಟ್ಕಲ್ ಹಾಗೂ ಫ್ರಿಹುಬರ್ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದರು.

ಪ್ರಿ-ಫೈನಲ್ಸ್‌ನಲ್ಲೂ ಛಲಬಿಡದ ಹಮ್ಜಾ, 10ನೇ ಸ್ಥಾನದಿಂದ ರೇಸ್ ಆರಂಭಿಸಿ ತಮ್ಮ ಕೌಶಲ್ಯಕ್ಕೆ ತಕ್ಕ ಪ್ರದರ್ಶನ ತೋರುವ ಮೂಲಕ 5ನೇ ಸ್ಥಾನ ಪಡೆದು ಗಮನ ಸೆಳೆದರು. ಈ ಸುತ್ತಿನಲ್ಲಿ ಜಯ ಸಾಧಿಸುವ ಮೂಲಕ ಮೆಹ್ತಾ ಸತತ 2ನೇ ಬಾರಿ ಯಶಸ್ಸು ಕಂಡರೆ, ಅನುಚಟ್ಕಲ್ ಹಾಗೂ ಫ್ರಿಹುಬರ್ ಮತ್ತೊಮ್ಮೆ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದರು.

ಪ್ರಿ-ಫೈನಲ್‌ನಲ್ಲಿ ಯಾವ ಸ್ಥಾನದಲ್ಲಿ ರೇಸ್ ಮುಗಿಸುತ್ತಾರೆ ಎನ್ನುವ ಆಧಾರದಲ್ಲಿ ಅಂತಿಮ ಸುತ್ತಿನ ಆರಂಭಿಕ ಸ್ಥಾನಗಳು ನಿರ್ಧಾರವಾಗಲಿವೆ. ಭಾರತೀಯ ರೇಸರ್ ೫ನೇ ಸ್ಥಾನದೊಂದಿಗೆ ರೇಸ್ ಆರಂಭಿಸಿದರು. ಹಮ್ಜಾ ಉತ್ತಮ ಆರಂಭ ಪಡೆದರು. ಸಿಂಗಾಪುರದ ಮ್ಯಾಕ್ಸ್‌ಮಿಲನ್ ಶಿಲಿಂಗ್‌ರನ್ನು ಹಿಂದಿಕ್ಕಿ ಮುನ್ನುಗ್ಗುರಿದರು.

‘ಇದು ನನ್ನ ಮೊದಲ ಅಂತಾರಾಷ್ಟ್ರೀಯ ಪೋಡಿಯಂ ಫಿನಿಶ್. ನನ್ನ ಈ ಸಾಧನೆ ಬಹಳ ಸಂತೋಷ ತಂದಿದೆ. ನನ್ನನ್ನು ನಿರಂತರವಾಗಿ ಬೆಂಬಲಿಸುತ್ತಿರುವ ನನ್ನ ಕುಟುಂಬ ಹಾಗೂ ತಂಡಕ್ಕೆ ಧನ್ಯವಾದ ಹೇಳುತ್ತೇನೆ’ ಎಂದು ಈಗಾಗಲೇ ಇಂಡಿಕಾರ್ಟಿಂಗ್ ಪ್ರೊ ಮಟ್ಟದಲ್ಲಿ ಹಲವು ರೇಸ್‌ಗಳನ್ನು ಗೆದ್ದಿರುವ ಹಮ್ಜಾ ಖುಷಿಯಿಂದ ಹೇಳಿದರು.

 

ರಾಯೋ ರೇಸಿಂಗ್‌ನ ಸ್ಥಾಪಕ ರಾಯೋಮಂಡ್ ಬಾನಾಜಿ ಮಾತನಾಡಿ, ‘ಇದು ಹಮ್ಜಾ ಅವರ ಕೇವಲ 3ನೇ ಅಂತಾರಾಷ್ಟ್ರೀಯ ರೇಸ್. ಒಂದೂವರೆ ವರ್ಷದಲ್ಲಿ ಅವರು ಈ ಹಂತಕ್ಕೆ ತಲುಪಿದ್ದಾರೆ. ಹಮ್ಜಾ ಅವರಲ್ಲಿ ಸಾಕಷ್ಟು ಪ್ರತಿಭೆ ಇದ್ದು, ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿದ್ದಾರೆ’ ಎಂದು ಭರವಸೆ ವ್ಯಕ್ತಪಡಿಸಿದರು.

Facebook
Twitter
LinkedIn
WhatsApp
Email
Telegram

Leave a Comment

Your email address will not be published. Required fields are marked *

Translate »
Scroll to Top