ನೈತಿಕ ಮೌಲ್ಯಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕು: -ರಾಷ್ಟ್ರಪತಿ ದ್ರೌಪದಿ ಮುರ್ಮು

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸುವರ್ಣ ಮಹೋತ್ಸವ ಸಂಸ್ಥಾಪನಾ ಸಪ್ತಾಹ

ಬೆಂಗಳೂರು: ನೈತಿಕತೆ ಇಲ್ಲದ ಯಶಸ್ಸು,ದುಡಿಮೆ ಇಲ್ಲದ ಸಂಪತ್ತು  ಹಾಗೂ ಚಾರಿತ್ರ್ಯ ಇಲ್ಲದ ಜ್ಞಾನ ನಿಷ್ಪ್ರಯೋಜಕ ಅವುಗಳಿಂದ ಮನುಕುಲಕ್ಕೆ ಒಳಿತು ಮಾಡಲು ಸಾಧ್ಯವಿಲ್ಲ.ಮಹಾತ್ಮ ಗಾಂಧೀಜಿಯವರು ಬೋಧಿಸಿದ ನೈತಿಕತೆಗಳು ನಮ್ಮ ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕು ಎಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಹೇಳಿದರು.

ಇಲ್ಲಿನ ಇಲ್ಲಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಸುವರ್ಣ ಮಹೋತ್ಸವ ಅಂಗವಾಗಿ ಆಯೋಜಿಸಿರುವ ಸಂಸ್ಥಾಪನಾ ಸಪ್ತಾಹ(Foundation Week )ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

 

ವಿದ್ಯಾರ್ಥಿಗಳು ಹಾಗೂ ಯುವಸಮುದಾಯ ಜಗತ್ತಿನ ಕುರಿತು ನೇತ್ಯಾತ್ಮಕ ಭಾವನೆಗಳನ್ನಿಟ್ಟುಕೊಂಡು ಆರೋಪಿಸುವ ಮನಸ್ಥಿತಿ ಬೆಳೆಸಿಕೊಳ್ಳಬಾರದು.ಪರಸ್ಪರ ಸೌಹಾರ್ದತೆ,ಸದಾಶಯಗಳಿಂದ ದೇಶವನ್ನು ಕಟ್ಟಬೇಕು. ಭವಿಷ್ಯದ ಸಂಪತ್ತನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿರುವ ಐಐಎಂ ನಂತಹ ರಾಷ್ಟ್ರೀಯ ಮಹತ್ವದ ಉನ್ನತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅಕಾಡೆಮಿಕ್ ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳ ಪಾಲನೆಯನ್ನೂ ರೂಢಿಸಿಕೊಳ್ಳಬೇಕು.ಮಹಾತ್ಮ ಗಾಂಧೀಜಿಯವರ ಆಶಯಗಳನ್ನು  ಅಳವಡಿಸಿಕೊಳ್ಳಬೇಕು.

ನೀತಿಯಿಲ್ಲದ ವ್ಯಾಪಾರ,ಮಾನವೀಯತೆಯಿಲ್ಲದ ವಿಜ್ಞಾನ ಬೇಕಿಲ್ಲ.ಅಪಾರವಾದ ಬುದ್ಧಿಮತ್ತೆ,ಜ್ಞಾನ,ಪ್ರತಿಭೆ ಹೊಂದಿರುವ ಈ ಪೀಳಿಗೆಯ ವಿದ್ಯಾರ್ಥಿಗಳು ದೇಶದ ಮುಂದಿನ ದಾರಿಗೆ ಬೆಳಕಾಗಬೇಕು. ಬೆಂಗಳೂರಿನ ಐಐಎಂ ಸಂಸ್ಥೆಯು 50 ವರ್ಷಗಳ ಸಾರ್ಥಕ ಅವಧಿಯಲ್ಲಿ ದೇಶಕ್ಕೆ ಕೇವಲ ಪದವೀಧರರನ್ನು ಮಾತ್ರ ನೀಡಿಲ್ಲ.ನಾಯಕತ್ವ,ಉದ್ಯಮಶೀಲತೆ ಹಾಗೂ ರಾಷ್ಟ್ರದ ಪಥ ಬದಲಾಯಿಸುವ ವ್ಯಕ್ತಿತ್ವಗಳನ್ನು ಸೃಷ್ಟಿಸಿದೆ.ದೇಶದ ಸುಸ್ಥಿರ ಬೆಳವಣಿಗೆಗೆ ,ವೃತ್ತಿ ಕೌಶಲ್ಯ ವೃದ್ಧಿಗೆ ಮಾರ್ಗದರ್ಶನ ಮಾಡಿದೆ.ಶಿಕ್ಷಿತರಲ್ಲಿ ಪ್ರಬುದ್ಧತೆ ,ಅನ್ವೇಷಣೆ ಮನೋಭಾವ ಬೆಳೆಸಿದೆ.ಅವರ ಪ್ರತಿಭೆಯು ಸಮಾಜ ಹಾಗೂ ಸರ್ಕಾರಕ್ಕೆ ಪ್ರಯೋಜನಕಾರಿಯಾಗುವಂತೆ ಮಾಡಿದೆ. ಸಾಮಾಜಿಕ ಬದಲಾವಣೆಗೆ ತಂತ್ರಜ್ಞಾನದ ಸ್ಪರ್ಶ ನೀಡಿದೆ.ಭಾರತ ಸರ್ಕಾರದ “ಸ್ವಯಂ” ಕಾರ್ಯಕ್ರಮದಡಿ ಡಿಜಿಟಲ್ ಆವಿಷ್ಕಾರಗಳನ್ನೂ ಕೂಡ ಮಾಡಿದೆ.ಸುಮಾರು 3 ಸಾವಿರಕ್ಕೂ ಅಧಿಕ ಮಹಿಳೆಯರಲ್ಲಿ ಉದ್ಯಮಶೀಲತೆ ಬೆಳೆಸುವಲ್ಲಿ ಯಶಸ್ವಿಯಾಗಿದೆ.ಇಲ್ಲಿನ ಹಳೆಯ ವಿದ್ಯಾರ್ಥಿಗಳು ಅನೇಕ ಸವಾಲುಗಳನ್ನು ದಾಟಿ,ಯಶಸ್ಸು ಸಾಧಿಸಿ ಅನೇಕ ಮೈಲಿಗಲ್ಲುಗಳನ್ನು ವಿವಿಧ ರಂಗಗಳಲ್ಲಿ ಸ್ಥಾಪಿಸಿದ್ದಾರೆ.ಅವರ ಅನುಭವಗಳ ಪ್ರಯೋಜನ ಪಡೆಯಬೇಕು ಎಂದರು

 

ದಿ ಮೇಕಿಂಗ್ ಆಫ್ ಎ ಕ್ಯಾಂಪಸ್ ಐಐಎಂ ಬೆಂಗಳೂರು (The Making of Campus IIM Bengaluru) ಕೃತಿ ಬಿಡುಗಡೆಗೊಳಿಸಿದ ರಾಜ್ಯಪಾಲರಾದ ಶ್ರೀ ಥಾವರ್‌ಚಂದ್ ಗೆಹ್ಲೋಟ್ ಮಾತನಾಡಿ,ಕರ್ನಾಟಕವು ಶಿಕ್ಷಣ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.ಇಲ್ಲಿನ ಐಐಎಂ ದೇಶದ ಉನ್ನತ ಗುಣಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ.ಸೆಂಟರ್ ಫಾರ್ ಸಾಫ್ಟ್‌ವೇರ್ ಹಾಗೂ ಸಾಫ್ಟ್‌ವೇರ್ ಮ್ಯಾನೇಜ್‌ಮೆಂಟ್ ಕೋರ್ಸುಗಳ ಮೂಲಕ ಬೆಂಗಳೂರು ದೇಶದ ಐಟಿ ಹಬ್ ಆಗಿ ಬೆಳೆಯಲು ಐಐಎಂ ತನ್ನ ಕೊಡುಗೆ ನೀಡಿದೆ.ಇಲ್ಲಿನ ಅಕಾಡೆಮಿಕ್ ಅಧ್ಯಯನಗಳು ಸಮಾಜ ಹಾಗೂ ಸರ್ಕಾರದ ನೀತಿಗಳಿಗೆ,ವಿಕಾಸಕ್ಕೆ ಸದ್ಬಳಕೆಯಾಗಲಿ.ದೇಶವನ್ನು ಉನ್ನತ ಆರ್ಥಿಕ ವ್ಯವಸ್ಥೆಯಾಗಿ ರೂಪಿಸುವ ಕಾರ್ಯಕ್ಕೆ ಸಂಸ್ಥೆ ಕೈಜೋಡಿಸಲಿ ಎಂದರು.ಐಐಎಂಬಿ ಸುವರ್ಣ ಮಹೋತ್ಸವ ಅಂಗವಾಗಿ ಹಾಕಿಕೊಂಡಿರುವ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಐಐಎಂಬಿ ಕುರಿತು ಸಾಕ್ಷ್ಯಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು. ಸಂಸ್ಥಾಪನಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿರುವ 50 ಗಂಟೆಗಳ ರಿಲೇ ವಾಕ್‌ಥಾನ್‌ಗೆ ರಾಷ್ಟ್ರಪತಿಯವರು ವೇದಿಕೆಯಲ್ಲಿ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿ,ಚಾಲನೆ ನೀಡಿದರು.

ಐಐಎಂಬಿ ಆಡಳಿತ ಮಂಡಳಿ ಅಧ್ಯಕ್ಷ  ಡಾ.ದೇವಿಪ್ರಸಾದ ಶೆಟ್ಟಿ ಅವರು ಸ್ವಾಗತಿಸಿ ಐಐಎಂಬಿ ಬೆಳವಣಿಗೆಗೆ ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಕೊಡುಗೆಗಳನ್ನು ಸ್ಮರಿಸಿದರು.

ಐಐಎಂಬಿ ನಿರ್ದೇಶಕ ಪ್ರೋ.ಋಷಿಕೇಷ ಟಿ.ಕೃಷ್ಣನ್ ಅವರು ಸುವರ್ಣಮಹೋತ್ಸವ ಹಾಗೂ ಸಂಸ್ಥೆಯ ಬೆಳವಣಿಗೆಗಳ ಕುರಿತು ಮಾತನಾಡಿ, 1970 ರ ದಶಕದಲ್ಲಿ ಪ್ರಾರಂಭವಾದ ಸಂಸ್ಥೆಯು ಆಗ ಸಾರ್ವಜನಿಕ ವಲಯದ ಉದ್ಯಮಗಳ ನಿರ್ವಹಣೆಗೆ ಹೆಚ್ಚು ಒತ್ತು ನೀಡಿತ್ತು.1990 ರ ದಶಕದಲ್ಲಿ ಬದಲಾದ ಆರ್ಥಿಕ ನೀತಿಗಳಿಗೆ ಅನುಗುಣವಾಗಿ ಐಐಎಂ ಕೂಡ ತನ್ನ ಅಧ್ಯಯನ, ಸಂಶೋಧನಾ ಕ್ರಮಗಳನ್ನು ಮಾರ್ಪಡಿಸಿಕೊಂಡಿತು.ಪ್ರಸ್ತುತ ವಿವಿಧ 75 ಕೋರ್ಸುಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ.ಡಿಜಿಟಲ್ ವೇದಿಕೆಗಳ ಮೂಲಕವೂ ಶೈಕ್ಷಣಿಕ ಚಟುವಟಿಕೆಗಳನ್ನು ವಿಸ್ತರಿಸಲಾಗಿದೆ.ಹೊಸ ನಾಲ್ಕು ಪದವಿ ಕೋರ್ಸುಗಳನ್ನು ಪ್ರಾರಂಭಿಸಲು ಬೆಂಗಳೂರಿನ ಹೊರವಲಯದಲ್ಲಿ ನೂತನ ಕ್ಯಾಂಪಲ್ ತಲೆ ಎತ್ತಿದೆ .ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ತೇಜನಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.

 

ಸಮಾರಂಭದ ನಂತರ ಎನ್.ಎಸ್.ರಾಘವನ್ ಉದ್ಯಮಶೀಲತೆ ತರಬೇತಿ ಕೇಂದ್ರದಲ್ಲಿ (NSRCEL) ಕೆಲಕಾಲ ಮಹಿಳಾ ಉದ್ಯಮಿಗಳು ಹಾಗೂ ಅಧಿಕಾರಿಗಳೊಂದಿಗೆ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಕೆಲಕಾಲ ಸಂವಾದ ನಡೆಸಿದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top