ಬಾಗಲಕೋಟೆ: ರೈತ ಸಾಲ ಮನ್ನಾ ಮಾಡಲು ಯಾವುದೇ ಕಾರಣಕ್ಕೂ ಒಪ್ಪದ ಮೋದಿ ಅತ್ಯಂತ ಶ್ರೀಮಂತ ಬಂಡವಾಳಶಾಹಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಆದರೆ ಮೋದಿಯವರು ಬಡ ಭಾರತೀಯರನ್ನು ನಂಬಿಸಿದ್ದ, ಭಾಷಣಗಳಲ್ಲಿ ಹೇಳಿದ ಯಾವುದೇ ಭರವಸೆಗಳನ್ನು ಈಡೇರಿಸದೇ ‘ಸುಳ್ಳಿನ ಸರದಾರ’ ಆಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.
ಅವರು ಇಂದು ಪ್ರಜಾಧ್ವನಿ-02 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರ ಪರವಾಗಿ ಮತದಾರರಲ್ಲಿ ಮತ ಯಾಚಿಸಿ ಮಾತನಾಡಿದರು.
ಬಸಣ್ಣನವರನ್ನು ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದ್ದು ಕಾಂಗ್ರೆಸ್ ಸರ್ಕಾರ
ಬಸವಣ್ಣ ಹುಟ್ಟಿದ ಸ್ಥಳವಾಗಿರುವ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ಈ ಬಜೆಟ್ ನಲ್ಲಿ ಘೋಷಿಸಲಾಗಿದೆ. 2013 ರಲ್ಲಿ ಬಸವಣ್ಣನವರ ಜನ್ಮದಿಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನು ಸ್ವೀಕರಿಸಿದ್ದೇನೆ. ನನಗೆ ಬಸವಾದಿ ಶರಣರ ತತ್ವಾದರ್ಶಗಳ ಮೇಲೆ ಅಪಾರ ನಂಬಿಕೆಯಿದೆ. ಶರಣರ ಹಾದಿಯಲ್ಲಿ ನಡೆಯುವ ಪ್ರಯತ್ನ ಮಾಡುತ್ತಿದ್ದೇನೆ. ಬಸವಣ್ಣನವರ ವಿಚಾರಧಾರೆಯನ್ನು ಪಾಲಿಸಬೇಕೆಂಬ ಉದ್ದೇಶದಿಂದ ಅವರ ಭಾವಚಿತ್ರವನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಇಡಬೇಕೆಂದು ಆದೇಶ ಮಾಡಿದೆ. ಜಾತಿ ವರ್ಗ ವ್ಯವಸ್ಥೆ ತೊಲಗಿ ಸಮಾನತೆ ಸ್ಥಾಪನೆಯಾಗಿ, ಜಾತ್ಯಾತೀತ ಸಮಾಜ ನಿರ್ಮಾಣವಾಗಬೇಕೆಂಬ ಆಶಯವನ್ನು ಬಸವಣ್ಣನವರು ಹೊಂದಿದ್ದರು. ವಿಶ್ವಗುರು ಬಸವಣ್ಣನವರನ್ನು ‘ಸಾಂಸ್ಕೃತಿಕ ನಾಯಕ’ ಎಂದು ನಮ್ಮ ಸರ್ಕಾರ ಘೋಷಣೆ ಮಾಡಿದೆ. ಈ ಕಾರ್ಯವನ್ನು ಬಿಜೆಪಿಯಿಂದ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರಾಗಲಿ ಮಾಡಲಿಲ್ಲ ಎಂದರು.
ಮೋದಿಯವರು ಕಂಬಳಿ ಹಾಕಿಕೊಂಡು ಮಾಡಿದ ಭಾಷಣ ಕೇವಲ ನಾಟಕ:
ಕಾಂಗ್ರೆಸ್ ನವರು ಶಿವಾಜಿ ಮಹಾರಾಜರು ಹಾಗೂ ಕಿತ್ತೂರು ರಾಣಿ ಚೆನ್ನಮ್ಮನಿಗೆ ಗೌರವ ನೀಡಲಿಲ್ಲ ಎಂದು ಮೋದಿಯವರು ಸುಳ್ಳು ಹೇಳಿದ್ದರು , ಆದರೆ ಸರ್ಕಾರದ ವತಿಯಿಂದ ಕಿತ್ತೂರು ಚೆನ್ನಮ್ಮ ದಿನಾಚರಣೆಯನ್ನು ಆಚರಿಸಬೇಕೆಂಬ ಆದೇಶವನ್ನು ಮಾಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರವೇ. ಮೋದಿಯವರು ಕರಿಕಂಬಳಿ ವೇಷ ಹಾಕಿಕೊಂಡು ಭಾಷಣ ಮಾಡಿರುವುದು ಕೇವಲ ನಾಟಕವೇ ಹೊರತು, ಕುರುಬ ಸಮುದಾಯದ ಮೇಲಿನ ಪ್ರೀತಿಯಿಂದಲ್ಲ. ಇವರ ವೇಷ ಭೂಷಣ ನಾಟಕಗಳು ಭಾರತೀಯರಿಗೆ ಈಗ ಅರ್ಥವಾಗಿದೆ ಎಂದರು.
ಕರ್ನಾಟಕದ 28 ಲೋಕಸಭಾ ಚುನಾವಣೆಯಲ್ಲಿ ಒಬ್ಬ ಕುರುಬ ಸಮುದಾಯದವರಿಗಾದರೂ ಟಿಕೇಟನ್ನು ಬಿಜೆಪಿಯ ಮೋದಿ ನೀಡಿಲ್ಲ , ಒಬ್ಬ ಮುಸಲ್ಮಾನನಿಗಾಗಲಿ, ಒಬ್ಬ ಕ್ರಿಶ್ಚಯನ್ನರಿಗಾಗಲಿ ಟಿಕೇಟು ನೀಡಿಲ್ಲ. ಏಕೆಂದರೆ ಬಿಜೆಪಿಯವರಿಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯೇ ಇಲ್ಲ ಎಂದರು.
ಬಿಜೆಪಿ ರೈತ ಸಾಲ ಮನ್ನಾ ಮಾಡಿಲ್ಲ:
ಸ್ವಾಮಿನಾಥನ್ ವರದಿ ಜಾರಿಯಾಗದೇ , ರೈತರು ತಮ್ಮ ಬೆಳೆಗಳಿಗೆ ನ್ಯಾಯಯುತ ಬೆಲೆ ನೀಡಲು ಹೋರಾಟ ಮಾಡುತ್ತಲೇ ಇದ್ದಾರೆ. ಈ ಹೋರಾಟದಲ್ಲಿ 700 ಕ್ಕೂ ಹೆಚ್ಚು ರೈತರು ಮೃತಪಟ್ಟರು. ಮೋದಿಯವರು 10 ವರ್ಷಗಳ ಪ್ರಧಾನಿಯ ಅವಧಿಯಲ್ಲಿ ಒಮ್ಮೆಯೂ ರೈತರ ಸಾಲ ಮನ್ನಾ ಮಾಡಲಿಲ್ಲ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, 76 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದರು. ನಾನು ಸಿಎಂ ಆದ ನಂತರ 27 ಲಕ್ಷ ರೈತರಿಗೆ 8165 ಕೋಟಿ ರೈತ ಸಾಲ ಮನ್ನಾ ಮಾಡಿದೆ. ಬಿಜೆಪಿಯವರು ರೈತ ಸಾಲ ಮನ್ನಾ ಮಾಡಲೇ ಇಲ್ಲ. ಯಡಿಯೂರಪ್ಪನವರು ‘ರೈತ ಸಾಲ ಮನ್ನಾ ಮಾಡಲು ಮನವಿ ಮಾಡಿದಾಗ,’ನಮ್ಮಲ್ಲಿ ನೋಟು ಪ್ರಿಂಟ್ ಮಾಡುವ ಮಷೀನು ಇಲ್ಲ ’ ಎಂದಿದ್ದರು. ರೈತ ಸಾಲ ಮನ್ನಾ ಮಾಡದಿದ್ದ ಮೋದಿಯವರು ದೇಶದ ಬಂಡವಾಳಶಾಹಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಮೋದಿಯವರು ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸದೇ ‘ಸುಳ್ಳಿನ ಸರದಾರ’ ಆಗಿದ್ದಾರೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದ್ದೇವೆ. ಗ್ಯಾರಂಟಿ ಯೋಜನೆಗಳು ಎಲ್ಲ ಜಾತಿ ಧರ್ಮದವರಿಗೆ ತಲುಪುತ್ತಿದೆ. ಶಕ್ತಿ ಯೋಜನೆ ಸೇರಿದಂತೆ ಎಲ್ಲ ಗ್ಯಾರಂಟಿಗಳಿಗೆ ರಾಜ್ಯದ ಮಹಿಳೆಯರಿಂದ ಹೆಚ್ಚಿನ ಪ್ರಶಂಸೆ ದೊರೆತಿದೆ ಎಂದರು.
ಮೀಸಲಾತಿಯಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ:
ಮೀಸಲಾತಿಯಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ನರೇಂದ್ರ ಮೋದಿಯವರು ದಲಿತರಿಗೆ, ಹಿಂದುಳಿದವರ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ಕಾಂಗ್ರೆಸ್ ಕೊಡುತ್ತಾರೆ ಎಂದು ಸುಳ್ಳು ತಮ್ಮ ಪ್ರಚಾರ ಭಾಷಣದಲ್ಲಿ ಹೇಳುತ್ತಾರೆ. ಮೋದಿಯವರು ನಮ್ಮ ಸಂವಿಧಾನವನ್ನು ಓದಬೇಕು. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಜಾತಿ ಧರ್ಮ ಭೇದವಿಲ್ಲದೆ ಎಲ್ಲರೂ ಮೀಸಲಾತಿಗೆ ಅರ್ಹರು ಎಂದು ಸಂವಿಧಾನ ಸ್ಪಷ್ಟವಾಗಿ ಹೇಳುತ್ತದೆ. ನರೇಂದ್ರ ಮೋದಿಗೆ ದಲಿತರು, ಹಿಂದುಳಿದವರನ್ನು ಮುಸಲ್ಮಾನರ ವಿರುದ್ಧ ಎತ್ತಿ ಕಟ್ಟುತ್ತಾ ದ್ವೇಶದ ರಾಜಕಾರಣ ಮಾಡಲು ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಯಾರಾದರೂ ಸರ್ಕಾರಿ ನೌಕರರು ಸಂಬಳ ನಿಂತುಹೋಗಿದೆ ಎಂದರೆ ನಾನು ರಾಜಕೀಯ ನಿವೃತಿ ಪಡೆಯುತ್ತೇನೆ.
ಗ್ಯಾರಂಟಿ ಗಳನ್ನು ಜಾರಿಗೆ ತಂದ ಮೇಲೆ ಸರ್ಕಾರದಲ್ಲಿ ಸಂಬಳ ಕೊಡಲು ದುಡ್ಡಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಅವರಿಗೆ ಕರ್ನಾಟಕದ ಹಣಕಾಸಿನ ಪರಿಸ್ಥಿತಿ ಗೊತ್ತಿದೆಯೋ ಇಲ್ಲವೋ ತಿಳಿದಿಲ್ಲ.ಖಜಾನೆ ಖಾಲಿಯಾಗಿದ್ದರೆ ನಾವು ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿಗಳನ್ನು ಜಾರಿ ಮಾಡಲು ಸಾಧ್ಯವಾಗುತ್ತಿ ತ್ತೇ? 36000 ಕೋಟಿ ರೂಗಳನ್ನು ವೆಚ್ಚ ಮಾಡಲು ಸಾಧ್ಯವಾಗುತ್ತಿತ್ತೆ. ಯಾರಾದರೂ ಸರ್ಕಾರಿ ನೌಕರ ನಮಗೆ ಸಂಬಳ ನಿಂತುಹೋಗಿದೆ ಎಂದರೆ ನಾನು ರಾಜಕೀಯ ನಿವೃತಿ ಪಡೆಯುತ್ತೇನೆ. ಸುಳ್ಳು ಹೇಳಲು ಇತಿಮಿತಿ ಇರಬೇಕು ಎಂದರು.
ಅಪಪ್ರಚಾರವನ್ನು ಬಿಜೆಪಿ ಕೂಡಲೇ ನಿಲ್ಲಿಸಬೇಕು:
1.20 ಲಕ್ಷ ಕೋಟಿ ರೂ.ಗಳನ್ನು ಅಭಿವೃದ್ಧಿಗೆ ಹಾಗೂ ಗ್ಯಾರಂಟಿಗಳಿಗೆ ಮೀಸಲಿರಿಸಲಾಗಿದೆ ನರೇಂದ್ರ ಮೋದಿಯವರೇ ಎಂದರು. ಕಾಂಗ್ರೆಸ್ ಸರ್ಕಾರದ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಮೊದಲು ಗ್ಯಾರಂಟಿ ಜಾರಿ ಮಾಡಿದರೆ ಆರ್ಥಿಕವಾಗಿ ದಿವಾಳಿಯಾಗುತ್ತಾರೆ ಎನ್ನುತ್ತಿದ್ದವರು ಈಗ ಚುನಾವಣೆ ಯಾಗುವರೆಗೆ ಮಾತ್ರ ಗ್ಯಾರಂಟಿಗಳು ಇರಲಿವೆ ಎನ್ನುತ್ತಿದ್ದಾರೆ. ಅಪಪ್ರಚಾರವನ್ನು ಬಿಜೆಪಿ ಕೂಡಲೇ ನಿಲ್ಲಿಸಬೇಕು. ಯಾವ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದರು. ಇದು ನಿರಂತರ. ಜನ ಆಶೀರ್ವದಿಸಿ ಮತ್ತೆ ಅಧಿಕಾರ ಕೊಟ್ಟರೇ ಮುಂದೆಯೂ ಜಾರಿಯಾಗಲಿದೆ ಎಂದರು.
ಸಾಮಾಜಿಕವಾಗಿ ಶಕ್ತಿ ತುಂಬುವವರು:
ಮೋದಿಯವರು ಲೂಟಿ ಹೊಡೆಯುವ ಗ್ಯಾಂಗ್ ಬಂದಿದೆ ಎಂದಿದ್ದಾರೆ. ನಾವು ಲೂಟಿ ಹೊಡೆಯುವವರಲ್ಲ. ಈ ರಾಜ್ಯದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ತುಂಬುವವರು. ಸಮಾಜದ ಮುಖ್ಯವಾಹಿನಿಗೆ ಅವರು ಬರಬೇಕೆಂದು ನಂಬಿಕೆ ಇಟ್ಟವರು ಕಾಂಗ್ರೆಸ್ ನವರು . ಲೂಟಿ ಮಾಡಲು ಬಂದಿದ್ದವರು ಬಿಜೆಪಿಯವರು ಎಂದರು.
40% ಆರೋಪ ಸಾಬೀತಾದರೆ ಲೂಟಿ ಹೊಡೆದ ಗ್ಯಾಂಗ್ ನ್ನು ಪತ್ತೆ ಹಚ್ಚಿ ಶಿಕ್ಷೆ:
ಗುತ್ತಿಗೆದಾರರ ಸಂಘದವರು 40% ಸರ್ಕಾರ ಎಂದು ಹೇಳಿದ್ದರು. ಇದರ ತನಿಖೆಗೆ ಆಯೋಗ ಈಗಾಗಲೇ ರಚನೆಯಾಗಿ ತನಿಖೆ ನಡೆಯುತ್ತಿದೆ. ಆರೋಪ ಸಾಬೀತಾದರೆ ಲೂಟಿ ಹೊಡೆದ ಗ್ಯಾಂಗ್ ನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತೇವೆ. ನಾವು ನುಡಿದಂತೆ ನಡೆದಿದ್ದೇವೆ. ಮತ ಹಾಕುವ ಮುನ್ನ ನುಡಿದಂತೆ ಯಾರು ನಡೆದಿದ್ದಾರೆ ಎಂದು ಮತದಾರರು ಪರಿಶೀಲಿಸಬೇಕು ಎಂದರು.
ಕೇಂದ್ರ ಸರ್ಕಾರದಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ:
ಕೇಂದ್ರ ಸರ್ಕಾರದಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ. ಅವನ್ನೂ ಭರ್ತಿ ಮಾಡಿಲ್ಲ.ಭರ್ತಿ ಮಾಡಿದ್ದರೆ ದಲಿತರು ಹಿಂದುಳಿದವರಿಗೆ 50% ಮೀಸಲಾತಿ ದೊರೆಯುತ್ತಿತ್ತು. ಉಳಿದದ್ದು ಇತರರಿಗೆ ದೊರೆಯುತ್ತಿತ್ತು. ನರೇಂದ್ರ ಮೋದಿಯವರು ಅದನ್ನೂ ಮಾಡಲಿಲ್ಲ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಇವನ್ನು ಕಡಿಮೆ ಮಾಡುವುದಾಗಿ ಹೇಳಿದ್ದರು. ಯಾವುದರ ಬೆಲೆಯೂ ಕಡಿಮೆ ಮಾಡಲು ಆಗಲಿಲ್ಲ. ಒಳ್ಳೆಯ ದಿನಗಳು ಬರುತ್ತವೆ ಎಂದು ಹೇಳಿ ಹತ್ತು ವರ್ಷ ಗಳಾದರೂ ಬಡವರ ಜೀವನ ಸುಧಾರಣೆ ಆಗಲಿಲ್ಲ. ಬದಲಿಗೆ ಕಷ್ಟಕ್ಕೆ ಸಿಲುಕಿದ್ದಾರೆ ಎಂದರು. ರೈತರು ವ್ಯವಸಾಯಕ್ಕೆ ವೆಚ್ಚ ಮಾಡುವ ಹಣ ಮೂರು ಪಟ್ಟು ಹೆಚ್ಚಾಯಿತು ಹೊರತು ಆದಾಯ ದುಪ್ಪಟ್ಟು ಆಗಲಿಲ್ಲ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು.